ನವದೆಹಲಿ: ತನ್ನನ್ನು ಮದುವೆಯಾಗಲು ನಿರಾಕರಿಸಿದ (Marriage Proposal) ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಸೋದರಸಂಬಂಧಿ(ಕಸಿನ್) ಯುವತಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ(Delhi Woman Murder). ಕೊಲೆಯಾದ ಯುವತಿ (Cousin) ಹಾಗೂ ಕೊಲೆ ಮಾಡಿದ ಆರೋಪಿಯ ತಾಯಿಂದಿರು ಸಹೋದರಿಯರಾಗಿದ್ದಾರೆ. ಹಾಗಾಗಿ, ಈ ಮದುವೆಗೆ ಸ್ವತಃ ಯುವತಿ ಒಪ್ಪಿಗೆ ನೀಡಿರಲಿಲ್ಲ. ಅಲ್ಲದೇ, ಮನೆಯಲ್ಲೂ ಒಪ್ಪಿಗೆ ನೀಡಲು ಹಿಂದೇಟು ಹಾಕಿದ್ದರು. ಇದೇ ಕಾರಣಕ್ಕೆ ಆರೋಪಿ, ತನ್ನ ಕಸಿನ್ ಯುವತಿಯನ್ನು ಅಮಾನುಷವಾಗಿ ಕೊಲೆ ಮಾಡಿದ್ದಾನೆ ಎಂದು ದಿಲ್ಲಿ ಪೊಲೀಸರು (Delhi Police) ತಿಳಿಸಿದ್ದಾರೆ.
ದಕ್ಷಿಣ ದಿಲ್ಲಿಯ ಮಾಳವೀಯಾ ನಗರದ ಅರಬಿಂದೋ ಕಾಲೇಜ್ ಪಕ್ಕದಲ್ಲಿರುವ ಪಾರ್ಕೊಂದರಲ್ಲಿ 25 ವರ್ಷದ ಯುವತಿಯ ಶವ ಇರುವ ಬಗ್ಗೆ ಮಾಹಿತಿ ಬಂತು. ಕೂಡಲೇ ಸ್ಥಳಕ್ಕೆ ಹೋಗಿ ನೋಡಿದಾಗ ಶವದ ಪಕ್ಕದಲ್ಲೇ ರಾಡ್ ಕೂಡ ಇತ್ತು ಎಂದು ದಿಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆಯಾದ ಯುವತಿಯ ಹೆಸರು ನರ್ಗಿಸ್(Nargis). ಯುವತಿ ಮಾಳವೀಯ ನಗರದಲ್ಲಿ ಸ್ಟೇನೋಗ್ರಾಫರ್ ಕೋರ್ಸ್ ಮಾಡುತ್ತಿದ್ದಳು. ಯುವತಿಯು ಕಮಲಾ ನೆಹರು ಕಾಲೇಜ್‌ನಲ್ಲಿ ಪದವಿ ಪೂರೈಸಿದ್ದಳು. ಕೊಲೆಯಾದ ದಿನ ಯುವತಿಯನ್ನು ಇರ್ಫಾನ್ (Irfan) ಎಂಬ ಯುವಕನ ಜತೆ ಜನರು ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಆರೋಪಿ ಈಗಾಗಲೇ ಇರ್ಫಾನ್ ಪೊಲೀಸರಿಗೆ ಶರಣಾಗಿದ್ದು, ಆತನನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. 28 ವರ್ಷದ ಆರೋಪಿ ಇರ್ಫಾನ್ ಫುಡ್ ಡೆಲಿವರಿ ಏಜೆಂಟ್ (Food Delivery Agent) ಆಗಿ ಕೆಲಸ ಮಾಡುತ್ತಿದ್ದಾನೆ. ಕೊಲೆಯಾದ ನರ್ಗಿಸ್ ತಾಯಿ ಹಾಗೂ ಆರೋಪಿ ಇರ್ಫಾನ್ ತಾಯಿ ಇಬ್ಬರೂ ಸಹೋದರಿಯಾಗಿದ್ದಾರೆ. ನರ್ಗಿಸ್‌ಳನ್ನು ಮದುವೆಯಾಗುವ ಇಚ್ಛೆಯನ್ನು ಇರ್ಫಾನ್ ವ್ಯಕ್ತಪಡಿಸಿದ್ದ. ಆದರೆ, ಇರ್ಫಾನ್‌ಗೆ ಸರಿಯಾದ ಉದ್ಯೋಗ ಇಲ್ಲ ಎಂದು ಆಕೆಯ ಕುಟುಂಬವು ಮದುವೆಗೆ ನಿರಾಕರಿಸಿತ್ತು. ಅಲ್ಲದೇ ನರ್ಗಿಸ್ ಕೂಡ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಜತೆಗೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಆತನ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಇದರಿಂದಾಗಿ ಇರ್ಫಾನ್ ತೀವ್ರವಾಗಿ ನೊಂದಿದ್ದ, ಬೇಸರಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನರ್ಗಿಸ್‌ಳನ್ನು ಕೊಲೆ ಮಾಡಲು ಎರಡು ದಿನಗಳಿಂದ ಪ್ಲ್ಯಾನ್ ಮಾಡಿದ್ದ. ನರ್ಗಿಸ್ ತನ್ನ ಕ್ಲಾಸ್ ಮುಗಿಸಿಕೊಂಡು ಪಾರ್ಕ್‌ನಲ್ಲಿ ಬರುತ್ತಾಳೆ ಎಂಬುದನ್ನು ಅರಿತಿದ್ದ ಇರ್ಫಾನ್ ಶುಕ್ರವಾರ ಅದೇ ಪಾರ್ಕ್‌ಗೆ ಹೋಗಿದ್ದ. ಎಂದಿನಂತೆ ನರ್ಗಿಸ್ ತನ್ನ ಕ್ಲಾಸ್ ಮುಗಿಸಿಕೊಂಡು ಪಾರ್ಕ್‌ನಲ್ಲಿ ಹಾಯ್ದು ವಾಪಸ್ ಬರುತ್ತಿದ್ದಳು. ಆಗ ಎದುರಾದ ಇರ್ಫಾನ್ ಆಕೆಯನ್ನು ತಡೆದು ಮಾತನಾಡಲು ಮುಂದಾಗಿದ್ದಾನೆ. ಮಾತನಾಡಲು ನರ್ಗಿಸ್ ತಿರಸ್ಕರಿಸಿದಾಗ, ಬ್ಯಾಗಿನಲ್ಲಿ ತಂದಿದ್ದ ಕಬ್ಬಿಣದ ಸಲಾಕೆಯಿಂದ ಆಕೆಯ ಮೇಲೆ ಇರ್ಫಾನ್ ಹಲ್ಲೆ ಮಾಡಿದ್ದಾನೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.