ಸ್ವಾತಂತ್ರ್ಯ ಸಂಭ್ರಮದ ಅಮೃತಮಹೋತ್ಸವದ ಸಡಗರದಲ್ಲಿ ಈ ಬಾರಿ ಇಡೀ ಭಾರತವೇ ತ್ರಿವರ್ಣಗಳ ಬೆಳಕಿನಲ್ಲಿ ಮಿಂದೇಳುತ್ತಿದೆ. ದೇಶದ ಪ್ರಮುಖ ಕಟ್ಟಡಗಳು, ಐತಿಹಾಸಿಕ ಸ್ಥಳಗಳು, ಪ್ರವಾಸೀ ಸ್ಥಳಗಳು, ಸೇತುವೆಗಳು, ಅಣೆಕಟ್ಟುಗಳು ಹೀಗೆ ಪ್ರತಿಯೊಂದೂ ಸೂರ್ಯಾಸ್ತದ ನಂತರ ಕೇಸರಿ ಬಿಳಿ ಹಾಗೂ ಹಸಿರು ಬಣ್ಣಗಳ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಈಗಾಗಲೇ ಮನಸೂರೆಗೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯೂ ಈ ಬಾರಿ ಎಂದಿಗಿಂತ ಹೆಚ್ಚು ಸಡಗರದಿಂದ ಸಂಭ್ರಮಾಚರಣೆಗೆ ಸಜ್ಜಾಗಿದ್ದು, ದೇಶಭಕ್ತಿಯಲ್ಲಿ ಸರ್ವವೂ ಮಿಂದೇಳುತ್ತಾ ತ್ರಿವರ್ಣಗಳ ಬೆಳಕಿನಲ್ಲಿ ಲಕಲಕ ಹೊಳೆಯುತ್ತಿದೆ.
ದೆಹಲಿಯೆಂದರೆ, ಐತಿಹಾಸಿಕ ಸ್ಮಾರಕಗಳ ಸಾಗರ. ದೆಹಲಿಯ ಬಹುತೇಕ ಸ್ಮಾರಕಗಳು, ಐತಿಹಾಸಿಕ ಸ್ಥಳಗಳು, ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿದ್ದರೂ, ಇವಲ್ಲದೆ ಸಾರ್ವಜನಿಕವಾಗಿ ಅಷ್ಟು ಬೆಳಕಿಗೆ ಬಾರದ ಇನ್ನೂ ೭೧ ಐತಿಹಾಸಿಕ ಸ್ಮಾರಕಗಳು ದೆಹಲಿ ಸರ್ಕಾರದ ಉಸ್ತುವಾರಿಯಲ್ಲಿದೆ. ಈ ಸ್ಥಳಗಳು ಅಷ್ಟಾಗಿ ಪ್ರಖ್ಯಾತಿ ಪಡೆದಿಲ್ಲವಾದ್ದರಿಂದ ಇದನ್ನು ನೋಡಲು ಬರುವ ಪ್ರವಾಸಿಗರೂ ಕಡಿಮೆ. ಇವುಗಳನ್ನು ಇದೀಗ ಅಮೃತ ಮಹೋತ್ಸವದ ನೆನಪಿನಲ್ಲಿ ಹೆಚ್ಚು ಜನರಿಗೆ ತಿಳಿಯಪಡಿಸುವಂಥ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಸದ್ಯಕ್ಕೆ ಐದು ಸ್ಥಳಗಳನ್ನು ಆಯ್ದುಕೊಂಡು ತ್ರಿವರ್ಣಗಳ ವಿದ್ಯುದ್ದೀಪಗಳಿಂದ ಅಲಂಕರಿಸಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
ದೇಶ ಕಾಲಕಾಲಕ್ಕೆ ತನ್ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ, ಆಧುನೀಕರಣಗೊಂಡಿದೆ. ಐತಿಹಾಸಿಕ ಸ್ಥಳಗಳು ಹಿಂದಿನ ಹಾಗೂ ಇಂದಿನ ನಡುವಿನ ವ್ಯತ್ಯಾಸ ಕಂಡುಕೊಳ್ಳಲು ಹಾಗೂ ನಾವು ಪ್ರಸ್ತುತ ಎಷ್ಟು ಮುಂದುವರಿದಿದ್ದೇವೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತಿದ್ದು, ಹೆಚ್ಚು ಹೆಚ್ಚು ಯುವಜನರು, ಐತಿಹಾಸಿಕ ಸ್ಥಳಗಳ ವೀಕ್ಷಣೆಯತ್ತ, ಅವುಗಳ ಬಗ್ಗೆ ಜ್ಞಾನವೃದ್ಧಿ ಮಾಡುವತ್ತ ಗಮನ ಹರಿಸಬೇಕು. ಅದಕ್ಕಾಗಿ ಆರಂಭದ ಹಂತದಲ್ಲಿ ಐದು ಐತಿಹಾಸಿಕ ಕಟ್ಟಡಗಳಿಗೆ ತ್ರಿವರ್ಣಗಳಿಂದ ಅಲಂಕಾರ ಮಾಡುತ್ತಿದ್ದು, ಜನರ ಪ್ರತಿಕ್ರಿಯೆಗಳನ್ನು ಗಮನಿಸಿ ನಿಧಾನವಾಗಿ ಉಳಿದವಕ್ಕೂ ಇದನ್ನು ವಿಸ್ತರಿಸಲಾಗುತ್ತದೆ ಎಂದೂ ಹೇಳಿದೆ.
ಇದನ್ನೂ ಓದಿ: ಅಮೃತ ಮಹೋತ್ಸವ | ಬೆಂಗಳೂರಿಗರೇ, ಆಗಸ್ಟ್ 15ರಂದು ರಸ್ತೆಗಿಳಿಯುವ ಮುನ್ನ ಮತ್ತೊಮ್ಮೆ ಯೋಚಿಸಿ!
ದೆಹಲಿಯ ಆರ್ ಕೆ ಪುರಂನಲ್ಲಿರುವ ಬಿರ್ಜಿ ಖಾನ್ ಸಮಾಧಿ, ಬರಾದರಿ ಕುದ್‌ಸಿಯಾ ಬಾಗ್, ವಸಂತ ಉದ್ಯಾನದ ಬಾರಾ ಲಾವ್ ಕಾ ಗುಂಬಡ್, ಲೋಧಿ ಫ್ಲೈ ಓವರ್ ಬಳಿಯ ಗೋಲ್ ಗುಂಬಜ್, ಮುಕರ್ಬಾ ಚೌಕ್ ಬಳಿಯ ಮಕ್‌ಬರಾ ಪೈಕ್ ಇದೇ ಮೊದಲ ಬಾರಿ ತ್ರಿವರ್ಣದಲ್ಲಿ ಅಲಂಕಾರಗೊಳ್ಳುತ್ತಿರುವ ಐತಿಹಾಸಿಕ ಸ್ಥಳಗಳು.
ಇವಲ್ಲದೆ, ಈಗಾಗಲೇ ಪುರಾತತ್ವ ಇಲಾಖೆಯ ವತಿಯಿಂದ ದೆಹಲಿಯ ಇತರ ಪ್ರಮುಖ ಐತಿಹಾಸಿಕ ಸ್ಮಾರಕಗಳು ತ್ರಿವರ್ಣ ವಿದ್ಯುದ್ದೀಪಗಳಿಂದ ಮಿಂಚುತ್ತಿದ್ದು, ಆಗಸ್ಟ್ ೧೫ರವರೆಗೆ ಎಲ್ಲವುಗಳೂ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡುತ್ತಿವೆ. ದೇಶದಲ್ಲಿ ಪುರಾತತ್ವ ಇಲಾಖೆಯಿಂದ ಉಸ್ತುವಾರಿ ನೋಡಿಕೊಳ್ಳಲಾಗುತ್ತಿರುವ ೩,೬೦೦ ಐತಿಹಾಸಿಕ ಸ್ಮಾರಕಗಳಿದ್ದು, ಇವುಗಳ ಪೈಕಿ ೧೧೬ ಸ್ಮಾರಕಗಳು ಮಾತ್ರ ಟಿಕೆಟ್ ಮೂಲಕ ನೋಡುವಂಥದ್ದಾಗಿದೆ. ಇವೆಲ್ಲವೂ ಆಗಸ್ಟ್ ೧೫ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಿವೆ. ೧೯ ರಾಜ್ಯಗಳಲ್ಲಿರುವ ಈ ೧೧೬ ಸ್ಮಾರಕಗಳ ಪೈಕಿ ಉತ್ತರ ಪ್ರದೇಶದ ೧೭, ಮಹಾರಾಷ್ಟ್ರದ ೧೬, ಕರ್ನಾಟಕದ ೧೨, ದೆಹಲಿಯ ೧೦, ಮಧ್ಯಪ್ರದೇಶದ ೮, ತಮಿಳುನಾಡಿನ ೭ ಹಾಗೂ ಗುಜರಾತಿನ ೬ ಸ್ಮಾರಕಗಳು ಸೇರಿವೆ
ದೆಹಲಿಯ ಕೆಂಪುಕೋಟೆ ತ್ರಿವರ್ಣಗಳಿಂದ ಧ್ವಜಾರೋಹಣಕ್ಕೆ ಸಜ್ಜಾಗಿದ್ದು, ೭೫ನೇ ಸ್ವಾತಂತ್ರ್ಯ ಸಂಭ್ರಮವನ್ನು ಪ್ರತಿಯೊಬ್ಬರೂ ಕಣ್ತುಂಬಿಕೊಳ್ಳಲೇಬೇಕಾದದ್ದೇ. ಇದಲ್ಲದೆ, ಮುಂಬೈಯ ಬಾಂದ್ರಾ ವೊರ್ಲಿ ಸೀ ಲಿಂಕ್ ಕೂಡಾ ತ್ರಿವರ್ಣಗಳಲ್ಲಿ ಹೊಳೆಯುತ್ತಿರುವ ದೃಶ್ಯವೀಗ ನಯನ ಮನೋಹರ. ದೆಹಲಿಯ ಹುಮಾಯೂನ್ ಸಮಾಧಿಯನ್ನೂ ಕೂಡಾ ತ್ರಿವರ್ಣದಲ್ಲಿ ಕಣ್ತುಂಬಿಕೊಳ್ಳುವುದು ಬಂದು ಚಂದನೆಯ ಅನುಭವ. ಮುಂಬೈಯ ಛತ್ರಪತಿ ಶಿವಾಜಿ ರೈಲ್ವೇ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳೂ ಕೂಡಾ ಹೀಗೆ ಬೆಳಕಿನ ಚಿತ್ತಾರದಲ್ಲಿ ಅರಳಿದ ಪ್ರಮುಖ ಕಟ್ಟಡಗಳು.
ಇದನ್ನೂ ಓದಿ: ಎರಡು ವರ್ಷದ ಬಾಲೆಯೇ ವಿಶ್ವದ ಅತ್ಯಂತ ಸುಂದರ ಮಮ್ಮಿ !