ನವದೆಹಲಿ: ರಾಹುಲ್ ಗಾಂಧಿ ಅವರು ಮಾನಹಾನಿ ಪ್ರಕರಣದಲ್ಲಿ ಸಂಸತ್‌ನಿಂದ ಅನರ್ಹಗೊಂಡ ಬೆನ್ನಲ್ಲೇ ದೆಹಲಿಯಲ್ಲಿ 12 ಪ್ರತಿಪಕ್ಷಗಳ ನಾಯಕರು ಪ್ರತಿಭಟನಾ ರ‍್ಯಾಲಿ ನಡೆಸಿದ್ದಾರೆ. ರಾಷ್ಟ್ರ ರಾಜಧಾನಿಯ ವಿಜಯ್ ಚೌಕ್‌ನಿಂದ ರಾಷ್ಟ್ರಪತಿ ಭವನದವರೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವು ನಾಯಕರು ಪ್ರತಿಭಟನಾ ರ‍್ಯಾಲಿ ಕೈಗೊಂಡರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಹೆಜ್ಜೆ ಹಾಕಿದರು.
“ಪ್ರಜಾಪ್ರಭುತ್ವ ಅಪಾಯದಲ್ಲಿದೆ” (Democracy In Danger) ಎಂಬ ಬ್ಯಾನರ್ ಹಿಡಿದು ಪ್ರತಿಪಕ್ಷಗಳ ನಾಯಕರು ಪ್ರತಿಭಟನಾ ಮೆರವಣಿಗೆ ಸಾಗಿದರು. ಅದಾನಿ-ಹಿಂಡನ್‌ಬರ್ಗ್ ಪ್ರಕರಣದ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (JPC) ರಚಿಸಬೇಕು ಎಂದು ಆಗ್ರಹಿಸಿ ಅವರು ಪ್ರತಿಭಟನೆ ನಡೆಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ, ಈ ಕುರಿತು ಮನವಿ ಮಾಡುವುದು ಕೂಡ ಅವರ ಉದ್ದೇಶವಾಗಿತ್ತು.
ಪ್ರತಿಪಕ್ಷಗಳ ನಾಯಕರ ಬಂಧನ
ರಾಷ್ಟ್ರಪತಿ ಭವನದವರೆಗೆ ಪ್ರತಿಭಟನಾ ರ‍್ಯಾಲಿ ಕೈಗೊಂಡಿದ್ದ ಪ್ರತಿಪಕ್ಷಗಳ ನಾಯಕರನ್ನು ಪೊಲೀಸರು ಮಧ್ಯದಲ್ಲಿಯೇ ತಡೆದರು. ಪ್ರತಿಭಟನಾ ಮೆರವಣಿಗೆಗೆ ಅನುಮತಿ ಇಲ್ಲದಿರುವುದು ಹಾಗೂ ಪ್ರತಿಪಕ್ಷಗಳ ನಾಯಕರ ಭೇಟಿಗೆ ರಾಷ್ಟ್ರಪತಿ ಅವರು ಸಮಯ ನಿಗದಿಪಡಿಸದ ಕಾರಣ ಪೊಲೀಸರು ಅವರನ್ನು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು ಎಂದು ತಿಳಿದುಬಂದಿದೆ. ಪೊಲೀಸರು ಪ್ರತಿಭಟನಾ ಮೆರವಣಿಗೆಗೆ ಅಡ್ಡಿಪಡಿಸುತ್ತಲೇ ಪ್ರತಿಪಕ್ಷಗಳ ನಾಯಕರು ಇನ್ನಷ್ಟು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಮೆರವಣಿಗೆ ವಿಡಿಯೊ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಿದ್ದು, ಪಕ್ಷದ ನಾಯಕರಾದ ಕೆ.ಸಿ.ವೇಣುಗೋಪಾಲ್, ಅಧೀರ್ ರಂಜನ್ ಚೌಧರಿ ಜತೆಗಿದ್ದರು. ಹಾಗೆಯೇ, ಸಿಪಿಐ, ಸಿಪಿಎಂ, ಶಿವಸೇನಾ, ಜೆಡಿಯು, ಆಮ್ ಆದ್ಮಿ ಪಕ್ಷ ಸೇರಿ ಹಲವು ಪಕ್ಷಗಳ ನಾಯಕರು ಪ್ರತಿಭಟನೆಗೆ ಸಾಥ್ ನೀಡಿದರು. ಪೊಲೀಸರು ಸುಮಾರು 30 ಸಂಸದರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Rahul Gandhi: ಪ್ರಜಾಪ್ರಭುತ್ವಕ್ಕೆ ಅಪಾಯ ಹೇಳಿಕೆ, ಸಂಸದೀಯ ಸಮಿತಿ ಸಭೆಯಲ್ಲಿ ರಾಹುಲ್ ಸ್ಪಷ್ಟನೆ
ಸಂಸತ್ತಿನಲ್ಲಿ ಬಜೆಟ್ ಅಧಿವೇಶನ ಆರಂಭವಾದಾಗಿನಿಂದಲೂ ಪ್ರತಿಪಕ್ಷಗಳು ಅದಾನಿ-ಹಿಂಡನ್‌ಬರ್ಗ್ ಪ್ರಕರಣದ ತನಿಖೆಗೆ ಆಗ್ರಹಿಸುತ್ತಿವೆ. ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಸಂಸತ್ ಆವರಣದಲ್ಲೂ ಪ್ರತಿಭಟನೆ ನಡೆಸುವ ಜತೆಗೆ ಸ್ಪೀಕರ್ ಓಂ ಬಿರ್ಲಾ ಅವರಿಗೂ ಮನವಿ ಮಾಡಿದ್ದಾರೆ.