Site icon Vistara News

Uddhav Thackeray: ‘ದೇಶದಲ್ಲಿ ಪ್ರಜಾಪ್ರಭುತ್ವ ಅಂತ್ಯ’, ಶಿವಸೇನೆ ಚಿಹ್ನೆ ಕಳೆದುಕೊಂಡ ಬಳಿಕ ಉದ್ಧವ್‌ ಆಕ್ರೋಶ

Uddhav Thackeray

ಮುಂಬೈ: ಶಿವಸೇನೆಯ ಹೆಸರು ಹಾಗೂ ಬಿಲ್ಲು ಮತ್ತು ಬಾಣದ ಚಿಹ್ನೆಯನ್ನು ಚುನಾವಣೆ ಆಯೋಗವು ಏಕನಾಥ್‌ ಶಿಂಧೆ ಬಣಕ್ಕೆ ನೀಡಿದ ಬೆನ್ನಲ್ಲೇ ಶಿವಸೇನೆ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ ಬಣ) ಮುಖ್ಯಸ್ಥ ಉದ್ಧವ್‌ ಠಾಕ್ರೆ (Uddhav Thackeray) ಸುದ್ದಿಗೋಷ್ಠಿ ನಡೆಸಿದ್ದು, “ಭಾರತದಲ್ಲಿ ಪ್ರಜಾಪ್ರಭುತ್ವ ಅಂತ್ಯಗೊಂಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಚುನಾವಣೆ ಆಯೋಗವು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿದೆ. ಸುಪ್ರೀಂ ಕೋರ್ಟ್‌ ತೀರ್ಪಿಗೂ ಮೊದಲು ಯಾವುದೇ ಕಾರಣಕ್ಕೂ ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ನೀಡಬಾರದು ಎಂದು ಆಯೋಗಕ್ಕೆ ಮನವಿ ಮಾಡಿದ್ದೆವು. ಆದರೆ, ಇದೆಲ್ಲವನ್ನೂ ಮೀರಿ ಆಯೋಗವು ಏಕನಾಥ್‌ ಶಿಂಧೆ ಬಣಕ್ಕೆ ಹೆಸರು ಹಾಗೂ ಚಿಹ್ನೆ ನೀಡಿದೆ. ಶಾಸಕರು ಹಾಗೂ ಸಂಸದರ ಬಲದಿಂದ ಯಾವುದೇ ಪಕ್ಷವನ್ನು ನಿರ್ಧರಿಸುವುದಾದರೆ, ಯಾವುದೇ ಉದ್ಯಮಿಯು ಶಾಸಕರು ಹಾಗೂ ಸಂಸದರನ್ನು ಖರೀದಿಸಿ ಮುಖ್ಯಮಂತ್ರಿಯಾಗಬಹುದು” ಎಂದು ಹೇಳಿದರು.

ಸುಪ್ರೀಂ ಮೊರೆಹೋಗಲು ತೀರ್ಮಾನ

ಚುನಾವಣೆ ಆಯೋಗದ ತೀರ್ಮಾನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲಾಗುವುದು ಎಂದು ಉದ್ಧವ್‌ ಠಾಕ್ರೆ ಘೋಷಿಸಿದ್ದಾರೆ. “ಖಂಡಿತವಾಗಿಯೂ ನಾವು ಚುನಾವಣೆ ಆಯೋಗದ ತೀರ್ಮಾನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತೇವೆ. ನ್ಯಾಯಾಲಯವು ಚುನಾವಣೆ ಆಯೋಗದ ತೀರ್ಮಾನ ರದ್ದುಗೊಳಿಸಿ, ೧೬ ಶಾಸಕರನ್ನು ಅನರ್ಹಗೊಳಿಸುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಆಯೋಗದ ಮಾನದಂಡವೇನು?

ಉದ್ಧವ್‌ ಠಾಕ್ರೆ ಹಾಗೂ ಏಕನಾಥ್‌ ಶಿಂಧೆ ಬಣಗಳ ಪರ ಇರುವ ಶಾಸಕರು ಹಾಗೂ ಸಂಸದರ ಬೆಂಬಲದ ಆಧಾರ ಸೇರಿ ಹಲವು ಮಾನದಂಡಗಳನ್ನು ಆಧರಿಸಿ ಆಯೋಗವು ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಹಾಗೂ ಚಿಹ್ನೆ ನೀಡಿದೆ. ಏಕನಾಥ್‌ ಶಿಂಧೆ ಅವರು ಶಿವಸೇನೆಯ ೫೫ ಶಾಸಕರ ಪೈಕಿ ೪೦ ಶಾಸಕರು, ೧೯ ಸಂಸದರ ಪೈಕಿ ೧೩ ಸಂಸದರ ಬೆಂಬಲ ಇದೆ ಎಂದು ಏಕನಾಥ್‌ ಶಿಂಧೆ ಅವರು ಆಯೋಗಕ್ಕೆ ತಿಳಿಸಿದ್ದರು.

ಇನ್ನು ಉದ್ಧವ್‌ ಠಾಕ್ರೆ ಅವರು ೫೫ ಶಾಸಕರ ಪೈಕಿ ೧೫ ಶಾಸಕರು, ೧೯ ಸಂಸದರ ಪೈಕಿ ೭ ಸಂಸದರು ಹಾಗೂ ರಾಜ್ಯಸಭೆಯ ಎಲ್ಲ ಮೂವರು ಸದಸ್ಯರ ಬೆಂಬಲವಿದೆ ಎಂದು ತಿಳಿಸಿದ್ದರು. ಹೀಗೆ, ಶಾಸಕರು, ಸಂಸದರು ಹಾಗೂ ಅವರು ಪಡೆದ ಮತಗಳ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ಚುನಾವಣೆ ಆಯೋಗವು ಶಿಂಧೆ ಬಣಕ್ಕೆ ಹೆಸರು ಹಾಗೂ ಚಿಹ್ನೆ ನೀಡಿದೆ. ಇದನ್ನು ಆಯೋಗದ ಆದೇಶದಲ್ಲಿಯೇ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Eknath Shinde: ಏಕನಾಥ್‌ ಶಿಂಧೆಗೆ ಜಯ, ಶಿವಸೇನೆಯ ಬಿಲ್ಲು-ಬಾಣ ಗುರುತು ಶಿಂಧೆ ಬಣಕ್ಕೆ, ಉದ್ಧವ್‌ ಠಾಕ್ರೆಗೆ ಮುಖಭಂಗ

Exit mobile version