ನವದೆಹಲಿ: ದೇಶದಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ (2000 Notes Withdrawn) ತೀರ್ಮಾನಿಸಿದೆ. ಮೇ 23ರಿಂದ ಸೆಪ್ಟೆಂಬರ್ 30ರೊಳಗೆ 2 ಸಾವಿರ ರೂ. ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದಾಗಿದೆ. ಇದರ ಬೆನ್ನಲ್ಲೇ, 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಆರ್‌ಬಿಐ ಬ್ಯಾನ್ ಮಾಡಿದೆ ಅಂದರೆ, ನಿಷೇಧಿಸಿದೆ ಎಂದು ಹೇಳಲಾಗುತ್ತಿದೆ. ಆದರೆ, ಆರ್‌ಬಿಐ ಎರಡು ಸಾವಿರ ರೂ. ನೋಟುಗಳನ್ನು ನಿಷೇಧಿಸಿಲ್ಲ. ಬದಲಾಗಿ, ಅವುಗಳನ್ನು ಹಿಂಪಡೆದಿದೆ.
ನೋಟುಗಳನ್ನು ನಿಷೇಧಿಸುವುದಕ್ಕೂ, ಹಿಂಪಡೆಯುವುದದಕ್ಕೂ ವ್ಯತ್ಯಾಸವಿದೆ. ಹಾಗಾದರೆ, ನೋಟ್ ಬ್ಯಾನ್‌ಗೂ, ಹಿಂಪಡೆಯುವುದಕ್ಕೂ ಏನು ವ್ಯತ್ಯಾಸ? ಎರಡರ ಮಧ್ಯೆ ಯಾವ ಬದಲಾವಣೆ ಇದೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ನೋಟು ನಿಷೇಧ ಎಂದರೇನು?
ಯಾವುದೇ ನೋಟುಗಳನ್ನು ನಿಷೇಧಿಸುವುದು ಎಂದರೆ, ಅವುಗಳು ಅಮಾನ್ಯ ಎಂದು ಘೋಷಿಸುವುದಾಗಿದೆ. ಅಂದರೆ, ನಿಷೇಧಿತ ನೋಟುಗಳ ಬಳಕೆಯೇ ಕಾನೂನುಬಾಹಿರ ಆಗುತ್ತದೆ. ನೋಟು ನಿಷೇಧಿಸಿದರೆ, ನಿಷೇಧಿತ ನೋಟುಗಳ ಬದಲಾಗಿ ಬೇರೆ ನೋಟುಗಳನ್ನು ಮುದ್ರಿಸಲಾಗುತ್ತದೆ. 2016ರಲ್ಲಿ ಕೇಂದ್ರ ಸರ್ಕಾರ ಐನೂರು, ಸಾವಿರ ರೂ. ನೋಟುಗಳನ್ನು ನಿಷೇಧಿಸಿ, ಐನೂರು ಹಾಗೂ ಎರಡು ಸಾವಿರ ರೂ. ಮೌಲ್ಯಗಳ ನೋಟುಗಳನ್ನು ಚಾಲ್ತಿಗೆ ತಂದಿದ್ದೇ ಇದಕ್ಕೆ ನಿದರ್ಶನ.
2000 Notes Withdrawn: 2 ಸಾವಿರ ರೂ. ನೋಟು ವಾಪಸ್ ನಂತರ ಮುಂದೇನು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ನೋಟು ಹಿಂಪಡೆಯುವುದು ಎಂದರೇನು?
ಯಾವುದೇ ನೋಟುಗಳನ್ನು ಹಿಂಪಡೆಯುವುದು ಎಂದರೆ, ಅವುಗಳ ಚಲಾವಣೆಯನ್ನು ಮಾತ್ರ ತಡೆಯುವುದೇ ಹೊರತು, ಅವುಗಳ ಮಾನ್ಯತೆಯನ್ನು ರದ್ದುಗೊಳಿಸುವುದಲ್ಲ. ಇದನ್ನೇ ಹಿಂಪಡೆಯುವುದು (Denomination) ಎನ್ನುತ್ತಾರೆ. ನೋಟುಗಳನ್ನು ಹಿಂಪಡೆದ ಬಳಿಕ ಆ ನೋಟುಗಳ ಚಲಾವಣೆ ಇರುವುದಿಲ್ಲ. ಬ್ಯಾಂಕುಗಳು ಕೂಡ ಆ ನೋಟುಗಳನ್ನು ನೀಡುವುದಿಲ್ಲ. ಆದರೆ, ಹಿಂಪಡೆದ ನೋಟುಗಳು ಅಮಾನ್ಯ ಆಗಿರುವುದಿಲ್ಲ. ಹಾಗಾಗಿ, ನೋಟುಗಳನ್ನು ಹಿಂಪಡೆಯುವುದಕ್ಕೂ, ನಿಷೇಧಗೊಳಿಸುವುದಕ್ಕೂ ವ್ಯತ್ಯಾಸ ಇದೆ.