Site icon Vistara News

Rs 2000 Notes: 10,000 ಕೋಟಿ ರೂ. ಮೌಲ್ಯದ 2,000 ನೋಟುಗಳು ಇನ್ನೂ ಜನರ ಬಳಿ ಇವೆ; ಆರ್‌ಬಿಐ ಗವರ್ನರ್‌

notes

notes

ನವ ದೆಹಲಿ: ಹಿಂಪಡೆದುಕೊಳ್ಳಲಾದ 2 ಸಾವಿರ ರೂ.ಗಳ ನೋಟುಗಳ ಪೈಕಿ ಬಹುತೇಕ ಬ್ಯಾಂಕಿಗೆ ಮರಳಿದೆ (Rs 2000 Notes). 10 ಸಾವಿರ ಕೋಟಿ ರೂ. ಮೌಲ್ಯದ 2 ಸಾವಿರ ರೂ. ನೋಟು ಇನ್ನೂ ಜನರ ಬಳಿಯಲ್ಲೇ ಇದೆ ಎಂದು ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಶಕ್ತಿಕಾಂತ್‌ ದಾಸ್‌ (Reserve Bank Governor Shaktikanta Das) ತಿಳಿಸಿದ್ದಾರೆ. ಸದ್ಯದಲ್ಲೇ ಈ ನೋಟುಗಳು ಮರಳಿ ಬರಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಹಿಂತೆಗೆದುಕೊಳ್ಳಲಾದ 2,000 ರೂ.ಗಳ ಮುಖಬೆಲೆಯ ನೋಟುಗಳ ಪೈಕಿ ಶೇ. 87ರಷ್ಟು ಬ್ಯಾಂಕ್‌ಗಳಲ್ಲಿ ಠೇವಣಿಯಾಗಿ ಮರಳಿದೆ ಮತ್ತು ಉಳಿದವುಗಳನ್ನು ಕೌಂಟರ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಶಕ್ತಿಕಾಂತ್‌ ದಾಸ್ ತಿಳಿಸಿದ್ದರು.

ಮೇ 19ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತ್ವರಿತ ನೋಟು ಅಮಾನ್ಯೀಕರಣ ಪ್ರಯತ್ನದ ಭಾಗವಾಗಿ 2016ರಲ್ಲಿ ಪರಿಚಯಿಸಲಾದ 2,000 ರೂ.ಗಳ ನೋಟನ್ನು ಹಂತ ಹಂತವಾಗಿ ರದ್ದುಗೊಳಿಸುವ ಯೋಜನೆಯನ್ನು ಘೋಷಿಸಿತ್ತು. ಆ ಬಳಿಕ ವಿನಿಮಯ ಮಾಡಿಕೊಳ್ಳಲು ಸಮಯಾವಕಾಶವನ್ನೂ ನೀಡಿತ್ತು. 2 ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಹೊಂದಿರುವ ಸಾರ್ವಜನಿಕರು ಸೆಪ್ಟಂಬರ್‌ 30ರೊಳಗೆ ವಿನಿಮಯ ಮಾಡಿಕೊಳ್ಳಲು ಅಥವಾ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡಲು ಅವಕಾಶ ನೀಡಲಾಗಿತ್ತು. ನಂತರ ಕೊನೆಯ ದಿನಾಂಕವನ್ನು ಅಕ್ಟೋಬರ್ 7ರ ವರೆಗೆ ವಿಸ್ತರಿಸಲಾಯಿತು. ಸದ್ಯ ಆರ್‌ಬಿಐ ನೀಡಿದ್ದ ಗಡುವು ಮುಕ್ತಾಯಗೊಂಡಿದೆ.

ಅಕ್ಟೋಬರ್ 8ರಿಂದ 19 ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳಲ್ಲಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಅಥವಾ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಇದೀಗ 19 ಆರ್‌ಬಿಐ ಶಾಖೆಗಳಲ್ಲಿ ಒಮ್ಮಲೇ 20,000 ರೂ.ಗಳವರೆಗೆ 2,000 ರೂ.ಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಇದೇ ವೇಳೆ 2,000 ರೂ.ಗಳ ನೋಟುಗಳನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ. ಎಷ್ಟು ಬೇಕಾರೂ ಠೇವಣಿ ಇಡಬಹುದಾಗಿದೆ.

2016ರಲ್ಲಿ ನೋಟು ಅಮಾನ್ಯಗೊಳಿಸುವ ಘೋಷಣೆ

2016ರ ನವೆಂಬರ್‌ 8ರ ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ 500 ರೂ. ಹಾಗೂ 1,000 ರೂ. ನೋಟುಗಳನ್ನು ಅಮಾನ್ಯಗೊಳಿಸುವ ಐತಿಹಾಸಿಕ ಘೋಷಣೆಯನ್ನು ಮಾಡಿದ್ದರು. ಮೊದಲು ಹೊಸ 2,000 ರೂ.ಗಳ ನೋಟನ್ನು ಬಿಡುಗಡೆಗೊಳಿಸಲಾಗಿತ್ತು. ಬಳಿಕ ಹೊಸ 500 ರೂ. ಹಾಗೂ 200 ರೂ. ಮುಖಬೆಲೆಯ ನೋಟನ್ನೂ ಪರಿಚಯಿಸಲಾಯಿತು. ಈ ನಡೆ ವ್ಯಾಪಕ ಚರ್ಚೆ ಹುಟ್ಟು ಹಾಕಿತ್ತು. ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಕಪ್ಪುಹಣ ಹಾಗೂ ನಕಲಿ ನೋಟುಗಳ ಹಾವಳಿಯನ್ನು ನಿಯಂತ್ರಿಸಲು ಅಗತ್ಯ ಎಂದು ಬೆಂಬಲಿಸಿದವರು ವಾದಿಸಿದರೆ, ಇದರಿಂದ ಏನೂ ಪ್ರಯೋಜನವಾಗಿಲ್ಲ, ಇದೊಂದು ಘೋರ ಪ್ರಮಾದ ಎನ್ನುವ ಮಂದಿಯೂ ಇದ್ದಾರೆ. ಡಿಮಾನಿಟೈಸೇಶನ್‌ ಆಗಿ ಆರು ವರ್ಷಗಳ ಬಳಿಕವೂ ಯಾವುದು ಸರಿ- ಯಾವುದು ತಪ್ಪು? ಎಂಬ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಮತ್ತೆ 2 ಸಾವಿರ ರೂ. ನೋಟನ್ನು ಹಿಂಪಡೆದದ್ದು ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಡೆಡ್‌ಲೈನ್‌ ಮುಗಿದ್ರೂ 2000 ನೋಟು ಎಕ್ಸ್‌ಚೇಂಜ್ ಮಾಡ್ಕೊಬಹುದು! ಈ ಸಂಗತಿಗಳು ತಿಳಿದಿರಲಿ

Exit mobile version