ಮುಂಬಯಿ: ಗುವಾಹಟಿ ಸೇರಿಕೊಂಡಿರುವ ಏಕನಾಥ್ ಶಿಂಧೆ ಟೀಮ್ ಮೇಲೆ ಅನರ್ಹತೆಯ ತೂಗುಗತ್ತಿ ತೂಗಲು ಆರಂಭಗೊಂಡಿದೆ. ಶಿಂಧೆ ಬಣದ ೧೬ ಶಾಸಕರ ವಿರುದ್ಧ ಉದ್ಧವ್ ಠಾಕ್ರೆ ಬಣ ಸಲ್ಲಿಸಿರುವ ದೂರಿನ ಆಧಾರದಲ್ಲಿ ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರು ನೋಟಿಸ್ ಜಾರಿಗೊಳಿಸಿದ್ದಾರೆ. ʻʻಪಕ್ಷ ವಿರೋಧಿ ಚಟುವಟಿಕೆ ಆಧಾರದಲ್ಲಿ ನಿಮ್ಮನ್ನು ಯಾಕೆ ಶಾಸಕತ್ವದಿಂದ ಅನರ್ಹಗೊಳಿಸಬಾರದುʼʼ ಎಂದು ಪ್ರಶ್ನಿಸಿ ನೋಟಿಸ್ ಜಾರಿಗೊಳಿಸಲಾಗಿದೆ. ಸೋಮವಾರ ಸಂಜೆ (ಜೂನ್ ೨೭) ೫.೩೦ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚಿಸಲಾಗಿದೆ.
ಜೂನ್ ೨೦ರಂದು ರಾತ್ರಿ 20ಕ್ಕೂ ಹೆಚ್ಚು ಶಿವಸೇನಾ ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಸೂರತ್‌ಗೆ ಪ್ರಯಾಣಿಸುವಲ್ಲಿಂದ ಆರಂಭಗೊಂಡ ಬಂಡಾಯ ರಾಜಕೀಯವು ಶಿವಸೇನೆ ಪಕ್ಷದ ವಿರುದ್ಧ ಮಾಡಿರುವ ರಾಜಕೀಯ ಷಢ್ಯಂತ್ರವೆಂದು ಉದ್ಧವ್ ಠಾಕ್ರೆ ಬಣ ಆರೋಪಿಸಿತ್ತು. ಅದಕ್ಕಿಂತಲೂ ಮುಖ್ಯವಾಗಿ ಜೂನ್ ೨೫ರಂದು ಉದ್ಧವ್ ಠಾಕ್ರೆ ಬಣ ಕರೆದ ಶಾಸಕಾಂಗ ಪಕ್ಷ ಸಭೆಗೆ ಹಾಜರಾಗಿಲ್ಲ ಎಂದು ಆರೋಪಿಸಿ ಒಮ್ಮೆ ೧೨ ಮತ್ತೊಮ್ಮೆ ನಾಲ್ಕು ಜನ ಶಾಸಕರ ವಿರುದ್ಧ ಉದ್ಧವ್ ಠಾಕ್ರೆ ಬಣ ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಅವರಿಗೆ ದೂರು ನೀಡಿತ್ತು. ಇದಕ್ಕಿಂತ ಮೊದಲು ಉದ್ಧವ್ ಠಾಕ್ರೆ ಬಣವು ಶಾಸಕಾಂಗ ಪಕ್ಷ ನಾಯಕನ ಸ್ಥಾನದಿಂದ ಏಕನಾಥ್ ಶಿಂಧೆ ಅವರನ್ನು ಪದಚ್ಯುತಗೊಳಿಸಿ ಅಜಯ್ ಚೌಧರಿ ಅವರನ್ನು ನೇಮಕ ಮಾಡಿತ್ತು. ಜತೆಗೆ ಸುನಿಲ್ ಪ್ರಭು ಅವರನ್ನು ಸಚೇತಕರಾಗಿ ನೇಮಕ ಮಾಡಿತ್ತು. ಅವೆರಡೂ ನೇಮಕಗಳನ್ನು ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಒಪ್ಪಿಕೊಂಡಿದ್ದರು. ಇದೀಗ ಸುನಿಲ್ ಪ್ರಭು ಅವರು ನೀಡಿರುವ ದೂರಿನ ಆಧಾರದಲ್ಲಿ ೧೬ ಮಂದಿ ರೆಬೆಲ್ ಶಾಸಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಉತ್ತರ ನೀಡಲಿದೆ ಶಿಂಧೆ ಬಣ
ಈ ನಡುವೆ, ಡೆಪ್ಯುಟಿ ಸ್ಪೀಕರ್ ಅವರ ನೋಟಿಸ್‌ಗೆ ಸೂಕ್ತ ಉತ್ತರ ನೀಡುವುದಾಗಿ ಏಕನಾಥ್ ಶಿಂಧೆ ಬಣ ಹೇಳಿದೆ. ಖುದ್ದು ಶಿಂಧೆ ಅವರೇ ಮುಂಬಯಿಗೆ ಬಂದು ಡೆಪ್ಯೂಟಿ ಸ್ಪೀಕರ್ ಅವರನ್ನು ಭೇಟಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಏನು ಉತ್ತರ ಕೊಡಬಹುದು?
ಏಕನಾಥ್ ಶಿಂಧೆ ಬಣ ರಾತ್ರೋರಾತ್ರಿ ಸೂರತ್‌ಗೆ ತೆರಳಿ ಅಲ್ಲಿಂದ ಗುವಾಹಟಿಗೆ ಶಿಫ್ಟ್ ಆದ ಬಳಿಕ ಜೂನ್ ೨೫ರಂದು ಉದ್ಧವ್ ಠಾಕ್ರೆ ಬಣ ಶಾಸಕಾಂಗ ಪಕ್ಷ ಸಭೆಯನ್ನು ಕರೆದಿತ್ತು. ಸಂಜೆ ಐದು ಗಂಟೆಗೆ ಇರುವ ಸಭೆಯ ಬಗ್ಗೆ ಮಧ್ಯಾಹ್ನದ ಹೊತ್ತಿಗೆ ನೋಟಿಸ್ ನೀಡಲಾಗಿತ್ತು.
ನಿಜವೆಂದರೆ, ಪಕ್ಷ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿರುವುದರಿಂದ ತಕ್ಷಣ ಹೊರಟು ಬನ್ನಿ ಎನ್ನುವ ಅರ್ಥದಲ್ಲಿ ಇಂಥ ಸೂಚನೆಗಳು ಇರುತ್ತವೆ. ಆದರೆ, ಹೇಗೂ ಬಂಡುಕೋರರೇ ಆಗಿರುವುದರಿಂದ ಅಷ್ಟು ಕಡಿಮೆ ಹೊತ್ತಿನಲ್ಲಿ ಬರಲು ಸಾಧ್ಯವಾಗಲಿಲ್ಲ, ನಾನು ಊರಲ್ಲಿ ಇರಲಿಲ್ಲ, ನೋಟಿಸ್ ಸಿಕ್ಕಿಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಬಹುದು.
ಇತ್ತ ಶಿಂಧೆ ಬಣ ಇನ್ನೊಂದು ವಾದವನ್ನೂ ಮುಂದಿಡುತ್ತಿದೆ. ಕಾನೂನು ಪ್ರಕಾರ, ೨೦೧೯ರಲ್ಲಿ ಶಾಸಕಾಂಗ ಪಕ್ಷ ನಾಯಕರಾಗಿ ಆಯ್ಕೆಯಾದ ಶಿಂಧೆ ಅವರೇ ನಿಜವಾದ ನಾಯಕ ಮತ್ತು ಅವರ ತಂಡದಲ್ಲಿರುವವರೇ ನಿಜವಾದ ಮುಖ್ಯ ಸಚೇತಕರು. ಅದಕ್ಕಿಂತಲೂ ಮಿಗಿಲಾಗಿ ಶಿವಸೇನೆಯ ೫೬ ಶಾಸಕರ ಪೈಕಿ ೪೦ರಷ್ಟು ಮಂದಿ ನಮ್ಮ ಟೀಮ್‌ನಲ್ಲಿದ್ದಾರೆ. ಅಲ್ಪಮತದಲ್ಲಿರುವ ಉದ್ಧವ್ ಠಾಕ್ರೆ ಬಣಕ್ಕೆ ಈ ರೀತಿ ವಿಪ್ ಹೊರಡಿಸುವ ಅಧಿಕಾರವೇ ಇಲ್ಲ ಎಂದು ಅದು ವಾದಿಸುವ ಸಾಧ್ಯತೆ ಇದೆ.
ಅಂತೂ ಸೋಮವಾರ ಸಂಜೆ ೫.೩೦ರೊಳಗೆ ನೀಡುವ ಉತ್ತರದ ಆಧಾರದಲ್ಲಿ ಡೆಪ್ಯುಟಿ ಸ್ಪೀಕರ್ ಮುಂದಿನ ಕ್ರಮವನ್ನು ನಿರ್ಧರಿಸಲಿದ್ದಾರೆ.
ಇದನ್ನೂ ಓದಿ| ಶಿವಸೇನಾ ಬಾಳಾ ಸಾಹೇಬ್ ಎಂದು ಹೆಸರು ಇಟ್ಟುಕೊಂಡ ಶಿಂಧೆ ಬಣ, ಯಾವುದೇ ಪಕ್ಷದ ಜತೆ ವಿಲೀನ ಆಗಲ್ಲ