ನವದೆಹಲಿ: ಸ್ವಾಮಿ ವಿವೇಕಾನಂದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಸನ್ಯಾಸಿ ಅಮೋಘ್ ಲೀಲಾ ದಾಸ್ (Amogh Lila Das) ಅವರನ್ನು ಇಸ್ಕಾನ್ ಒಂದು ತಿಂಗಳು ಬ್ಯಾನ್ ಮಾಡಿದೆ. “ವಿವೇಕಾನಂದರು ಮೀನು ತಿನ್ನುತ್ತಿದ್ದರು” ಎಂಬುದು ಸೇರಿ ಹಲವು ವಿಷಯಗಳ ಕುರಿತು ಅಮೋಘ್ ಲೀಲಾ ದಾಸ್ ಮಾತನಾಡಿದ ವಿಡಿಯೊ ವೈರಲ್ ಆಗಿ, ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಒಂದು ತಿಂಗಳು ನಿಷೇಧಿಸಲಾಗಿದೆ.
“ಅಮೋಘ್ ಲೀಲಾ ದಾಸ್ ನೀಡಿದ ಹೇಳಿಕೆಗಳು ಸಮಂಜಸವಾಗಿಲ್ಲ. ಅವರ ಹೇಳಿಕೆಗಳು ಬೋಧನಾತ್ಮಕವಾಗಿಲ್ಲ ಹಾಗೂ ಮೌಲ್ಯಗಳನ್ನು ಹೊಂದಿಲ್ಲ. ಯಾವುದೇ ಧಾರ್ಮಿಕ ಮುಖಂಡರ ಕುರಿತು ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ಸಹಿಸುವುದಿಲ್ಲ. ಹಾಗಾಗಿ, ನಾವು ಅಮೋಘ್ ಲೀಲಾ ದಾಸ್ ಅವರನ್ನು ಒಂದು ತಿಂಗಳು ನಿಷೇಧಿಸಿದ್ದೇವೆ. ಹೇಳಿಕೆಗಳಿಗೆ ಪ್ರಾಯಶ್ಚಿತವಾಗಿ ಅವರು ಒಂದು ತಿಂಗಳು ಗೋವರ್ಧನ್ ಹಿಲ್ಸ್‌ಗೆ ತೆರಳಲಿದ್ದಾರೆ. ಅಲ್ಲಿ ಅವರು ಏಕಾಂತದಲ್ಲಿ ಕಾಲ ಕಳೆಯಲಿದ್ದಾರೆ” ಎಂದು ಇಸ್ಕಾನ್ ತಿಳಿಸಿದೆ.
ಇಲ್ಲಿದೆ ವೈರಲ್ ಆದ ವಿಡಿಯೊ
ইস্কন আমাদের প্রিয়। কিন্তু তার এই বাচালের অসভ্যতা বন্ধ করুন তাঁরা। রামকৃষ্ণ, বিবেকানন্দকে অপমান করে এসব কথা বললে বরদাস্ত করা হবে না। অবিলম্বে এই তথাকথিত সন্ন্যাসীর বিরুদ্ধে ব্যবস্থা নেওয়া হোক। https://t.co/6eO9rRJVms
— Kunal Ghosh (@KunalGhoshAgain) July 11, 2023
ಅಮೋಘ್ ಲೀಲಾ ದಾಸ್ ಹೇಳಿದ್ದೇನು?
ಅಮೋಘ್ ಲೀಲಾ ದಾಸ್ ಅವರು ಬೋಧನೆ ಮಾಡುವಾಗ ವ್ಯಕ್ತಿಯೊಬ್ಬರು, “ದಿವ್ಯಪುರುಷರು ಮಾಂಸ ಸೇವಿಸಬಹುದೇ” ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ಅಮೋಘ್ ಲೀಲಾ ದಾಸ್, “ಯಾವುದೇ ದಿವ್ಯಪುರುಷರು ಒಂದು ಪ್ರಾಣಿಯನ್ನು ಕೊಂದು ಹೇಗೆ ತಿನ್ನುತ್ತಾರೆ? ವಿವೇಕಾನಂದರು ಮೀನು ತಿನ್ನುತ್ತಿದ್ದರು ಎಂದಾದರೆ, ದಿವ್ಯಪುರುಷರು ತಿನ್ನಬಹುದು ಎಂದರ್ಥ. ಆದರೆ, ದಿವ್ಯಪುರುಷರು ಮತ್ತೊಂದು ಜೀವಕ್ಕೆ ತೊಂದರೆ ಕೊಡುವುದಿಲ್ಲ, ಅದನ್ನು ತಿನ್ನುವುದಿಲ್ಲ. ಆದರೆ, ನನಗೆ ವಿವೇಕಾನಂದರ ಬಗ್ಗೆ ಅಪಾರವಾದ ಗೌರವವಿದೆ. ಅವರು ನನ್ನ ಎದುರು ಇದ್ದಿದ್ದರೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿದ್ದೆ” ಎಂದು ಹೇಳಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ISKCON: ಇಸ್ಕಾನ್‌ನಿಂದ ಯುಕೆಯಲ್ಲಿ ಶ್ರೀಲ ಪ್ರಭುಪಾದರ ಜೀವನ ಚರಿತ್ರೆ ‘ಸಿಂಗ್, ಡಾನ್ಸ್ ಆ್ಯಂಡ್ ಪ್ರೇ’ ಪುಸ್ತಕ ಬಿಡುಗಡೆ
ಯಾರಿವರು ಅಮೋಘ್ ಲೀಲಾ ದಾಸ್?
ಅಮೋಘ್ ಲೀಲಾ ದಾಸ್ ಅವರು ಇಸ್ಕಾನ್ ದ್ವಾರಕಾ ವಿಭಾಗದ ಉಪಾಧ್ಯಕ್ಷರಾಗಿದ್ದಾರೆ. ಇವರು ಸ್ಫೂರ್ತಿದಾಯಕ ಮಾತುಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಇವರ ಮೊದಲ ಹೆಸರು ಆಶಿಶ್ ಅರೋರ ಆಗಿದೆ. ಸನ್ಯಾಸತ್ವ ಸ್ವೀಕರಿಸುವ ಮೊದಲು ಇವರು ಎಂಜಿನಿಯರ್ ಆಗಿದ್ದರು. ಆದರೆ, ಸ್ವಾಮಿ ವಿವೇಕಾನಂದರ ಕುರಿತು ಹೇಳಿಕೆ ನೀಡಿದ್ದರಿಂದ ರಾಜಕಾರಣಿಗಳು ಸೇರಿ ಹಲವರು ಇವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇವರು ಸ್ವಾಮಿ ವಿವೇಕಾನಂದರು ಹಾಗೂ ರಾಮಕೃಷ್ಣ ಪರಮಹಂಸರಿಗೆ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.