Site icon Vistara News

Amit Shah: ಉಗ್ರರನ್ನು, ಅವರನ್ನು ಪೋಷಿಸುವ ವ್ಯವಸ್ಥೆಯನ್ನು ಮಟ್ಟ ಹಾಕಿ! ತನಿಖಾ ಸಂಸ್ಥೆಗಳಿಗೆ ಶಾ ಸೂಚನೆ

Amit Shah

No decision on halal ban by Centre yet, says Amit Shah In Hyderabad

ನವ ದೆಹಲಿ: ಹೊಸ ಉಗ್ರರ ಗುಂಪುಗಳು ರೂಪುಗೊಳ್ಳದಂತೆ ಎಲ್ಲಾ ಭಯೋತ್ಪಾದನಾ ವಿರೋಧಿ ಸಂಸ್ಥೆಗಳು ಕಠಿಣ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಗುರುವಾರ ಕರೆ ನೀಡಿದ್ದಾರೆ. ಭಯೋತ್ಪಾದನಾ ನಿಗ್ರಹ ಸಭೆಯಲ್ಲಿ (anti-terror meet) ಗುಡುಗಿದ ಅವರು, ನಾವು ಭಯೋತ್ಪಾದನೆಯನ್ನು ಅದರ ಬುಡಸಮೇತ ನಾಶ ಪಡಿಸಬೇಕಾಗಿದೆ ಎಂದು ಹೇಳಿದ್ದಾರೆ.

ಮೋದಿ ಸರ್ಕಾರದ ಕಠಿಣ ನಿರ್ಧಾರಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಲಾಗಿದೆ. ಮಾತ್ರವಲ್ಲ ನಕ್ಸಲ್ ಪೀಡಿತ ಪ್ರದೇಶಗಳು ಮತ್ತು ಈಶಾನ್ಯ ಭಾಗದಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ಕಡಿಮೆ ಮಾಡುವಲ್ಲಿ ಭಾರಿ ಯಶಸ್ಸನ್ನು ಸಾಧಿಸಲಾಗಿದೆ ಎಂದು ಶಾ ಅಭಿಪ್ರಾಯ ಪಟ್ಟಿದ್ದಾರೆ.

“ಮೋದಿ ಸರ್ಕಾರವು ಕಳೆದ 5 ವರ್ಷಗಳಲ್ಲಿ ಅಗತ್ಯವಾದ ಎಲ್ಲಾ ಮಾಹಿತಿಗಳನ್ನು ಕಲೆಹಾಕಿದೆ. ಕೇಂದ್ರ ಮತ್ತು ರಾಜ್ಯದ ಎಲ್ಲಾ ಏಜೆನ್ಸಿಗಳು ಅವುಗಳನ್ನು ಬಹು ಆಯಾಮದಲ್ಲಿ ಬಳಸಬೇಕು. ಆಗ ಮಾತ್ರ ನಾವು ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸಂಪೂರ್ಣ ಯಶಸ್ವಿಯಾಗುತ್ತೇವೆ. ತನಿಖೆ, ಕಾನೂನು ಕ್ರಮ, ಅಕ್ರಮ ಚಟುವಟಿಕೆ ತಡೆ ಮತ್ತು ಕ್ರಮಕ್ಕಾಗಿ ಈ ಮಾಹಿತಿಗಳನ್ನು ಸಮರ್ಪಕವಾಗಿ ಬಳಸಬೇಕುʼʼ ಎಂದು ಅವರು ಕರೆ ನೀಡಿದ್ದಾರೆ.

ಸಮನ್ವಯದ ಮಹತ್ವ ಒತ್ತಿ ಗೇಳಿದ ಗೃಹ ಸಚಿವ

ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಅಗತ್ಯ ಎನ್ನುವುದನ್ನು ಶಾ ಪ್ರತಿಪಾದಿಸಿದರು. “ಎನ್ಐಎ (National Investigation Agency) ಆಶ್ರಯದಲ್ಲಿ ಮಾದರಿ ಭಯೋತ್ಪಾದನಾ ನಿಗ್ರಹ ಪಡೆ ರಚನೆಯನ್ನು ರಚಿಸಿ. ಭಯೋತ್ಪಾದನಾ ನಿಗ್ರಹ ಸಂಸ್ಥೆಗಳ ತನಿಖೆಯ ರೀತಿ, ರಚನೆ ಮತ್ತು ಎಸ್ಒಪಿಗಳು ಎಲ್ಲಾ ರಾಜ್ಯಗಳಲ್ಲಿ ಒಂದೇ ಆಗಿರಬೇಕು. ಇದರಿಂದ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯತೆ ಸಾಧಿಸಲು ಸಾಧ್ಯವಾಗುತ್ತದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದ ವಿಧಾನದಲ್ಲಿ ಏಕರೂಪತೆಯನ್ನು ತರಲು ನಾವು ಸಾಮಾನ್ಯ ತರಬೇತಿ ಘಟಕ ರಚಿಸಲು ಕೆಲಸ ಮಾಡಬೇಕಾಗಿದೆ” ಎಂದು ಅವರು ಹೇಳಿದ್ದಾರೆ.

ʼʼಎನ್ಐಎ, ಎಟಿಎಸ್ ಮತ್ತು ಎಸ್‌ಟಿಎಫ್‌ ಘಟಕಗಳ ಕೆಲಸ ಕೇವಲ ತನಿಖೆ ಮಾಡುವುದಲ್ಲ. ತನಿಖೆಯ ವ್ಯಾಪ್ತಿಯನ್ನು ಮೀರಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಬೇಕುʼʼ ಎಂದು ಗೃಹ ಸಚಿವರು ತಿಳಿಸಿದ್ದಾರೆ. “ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಎಲ್ಲರೊಂದಿಗೆ ಕೈಜೋಡಿಸಿ ಕೆಲಸ ಮಾಡುವ ಅವಶ್ಯಕತೆಯಿದೆ. ಕ್ರಿಪ್ಟೋ, ಹವಾಲಾ, ಭಯೋತ್ಪಾದಕರಿಗೆ ಧನ ಸಹಾಯ, ಸಂಘಟಿತ ಅಪರಾಧ ಮತ್ತು ಮಾದಕವಸ್ತು-ಭಯೋತ್ಪಾದಕ ಸಂಪರ್ಕಗಳಂತಹ ಎಲ್ಲಾ ಚಟುವಟಿಕೆಗಳ ವಿರುದ್ಧ ಬಗ್ಗೆ ಮೋದಿ ಸರ್ಕಾರ ಕಠಿಣ ನಿಲುವನ್ನು ತೆಗೆದುಕೊಂಡಿದೆ. ಇದು ಉತ್ತಮ ಫಲಿತಾಂಶವನ್ನೂ ನೀಡಿದೆ. ಇಲ್ಲಿಗೇ ಮುಗಿದಿಲ್ಲ. ಇನ್ನೂ ಬಹಳಷ್ಟು ಕೆಲಸ ಉಳಿದಿದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ʼʼದೇಶದಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ನರೇಂದ್ರ ಮೋದಿ ಸರ್ಕಾರ ದೃಢ ಸಂಕಲ್ಪ ತೊಟ್ಟಿದೆ. ದೇಶವು ಅಳವಡಿಸಿಕೊಂಡಿರುವ ʼಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆʼಯ ನೀತಿಯ ಹಿಂದೆ ಮೋದಿ ಅವರ ದೃಷ್ಟಿಕೋನವಿದೆʼʼ ಎಂದು ಶಾ ತಿಳಿಸಿದ್ದಾರೆ.

ಇದನ್ನೂ ಓದಿ: Allahabad High Court: ‘ಸಪ್ತಪದಿ’ ತುಳಿಯದ ಮದ್ವೆ ಮದುವೆಯೇ ಅಲ್ಲ! ಅಲಹಾಬಾದ್ ಹೈಕೋರ್ಟ್

“ನಮ್ಮ ದೇಶದಿಂದ ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯಲು ಮೋದಿ ಸರ್ಕಾರ ಬದ್ಧವಾಗಿದೆ. ನವದೆಹಲಿಯಲ್ಲಿ ಎನ್‌ಐಎ ಆಯೋಜಿಸಿರುವ ‘3ನೇ ಭಯೋತ್ಪಾದನಾ ನಿಗ್ರಹ ಸಮ್ಮೇಳನ’ವನ್ನು ಉದ್ಘಾಟಿಸಲಿದ್ದೇನೆ” ಎಂದು ಅಮಿತ್‌ ಶಾ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version