Site icon Vistara News

Mamata Banerjee: ‘ನಾನು ಕಾಫಿರ್‌ ಅಲ್ಲ’ ಎಂದ ಮಮತಾ ಬ್ಯಾನರ್ಜಿಗೆ ಬಿಜೆಪಿ ತಿರುಗೇಟು; ಏನಿದು ವಿವಾದ?

Mamata Banerjee

Destroying Social Fabric: BJP Slams Mamata Banerjee Over I Am Not A Kafir Remark

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ನೀಡಿದ ಒಂದು ಹೇಳಿಕೆ ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದು ಬಿಜೆಪಿ ಆಕ್ರೋಶಕ್ಕೂ ಗುರಿಯಾಗಿದೆ. “ನಾನು ಕಾಫಿರ್‌ ಅಲ್ಲ” ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದು, ಇದಕ್ಕೆ ಬಿಜೆಪಿ ನಾಯಕ ಅಮಿತ್‌ ಮಾಳವಿಯ (Amit Malviya) ಅವರು ತಿರುಗೇಟು ನೀಡಿದ್ದು, “ಸಾಮಾಜಿಕ ಸಾಮರಸ್ಯವನ್ನು ಮಮತಾ ಬ್ಯಾನರ್ಜಿ ಅವರು ಹಾಳು ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಫಿರ್‌ ಎಂದರೆ ಮುಸ್ಲಿಮೇತರ ಅಥವಾ ಇಸ್ಲಾಂನಲ್ಲಿ ನಂಬಿಕೆ ಇರದವರು ಎಂಬ ಅರ್ಥವಿದೆ. ಸಮಾವೇಶವೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, “ಯಾರು ಹೆದರುತ್ತಾರೋ, ಅವರು ಸಾಯುತ್ತಾರೆ. ನಾನು ಕಾಫಿರ್‌ ಅಲ್ಲ. ನಾನು ದೇಶದ್ರೋಹಿ ಅಲ್ಲ” ಎಂಬುದಾಗಿ ಅವರು ಹೇಳಿದ್ದರು. ಅಷ್ಟೇ ಅಲ್ಲ, “ನಾನು ಪಶ್ಚಿಮ ಬಂಗಾಳದ ಸಂಬಂಧವು ಭಾರತದ ಜತೆ ಉತ್ತಮವಾಗಿರಲಿ ಎಂದೇ ಬಯಸುತ್ತೇನೆ. ಅಖಿಲೇಶ್‌ ಯಾದವ್‌ ಅವರು ಇಲ್ಲಿಗೆ ಬಂದರು, ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ” ಎಂದಿದ್ದಾರೆ. ಹಾಗಾಗಿ, “ಪಶ್ಚಿಮ ಬಂಗಾಳವು ಭಾರತದ ಭಾಗವಲ್ಲವೇ? ಅದೊಂದು ಪ್ರತ್ಯೇಕ ದೇಶವೇ” ಎಂಬುದಾಗಿ ಬಿಜೆಪಿಯ ಶೆಹಜಾದ್‌ ಪೂನಾವಾಲಾ ಅವರು ಪ್ರಶ್ನಿಸಿದ್ದಾರೆ.

ಅಮಿತ್‌ ಮಾಳವೀಯ ವಾದ ಹೀಗಿದೆ…

“ನಾನು ಕಾಫಿರ್‌ ಅಲ್ಲ ಎಂಬುದಾಗಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಆ ಮೂಲಕ ಅವರು ಕಾಫಿರರು ಹೇಡಿಗಳು ಎಂಬಂತೆ ಮಮತಾ ಬ್ಯಾನರ್ಜಿ ಬಿಂಬಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ಕೋಲ್ಕೊತಾ ಮೇಯರ್‌ ಪಕ್ಕದಲ್ಲಿ ಕೂತು, ಎಲ್ಲರೂ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಬೇಕು ಎಂಬುದಾಗಿ ಕರೆ ನೀಡಿದ್ದರು. ಅಷ್ಟೇ ಅಲ್ಲ, ಅವರು ಬಹಿರಂಗವಾಗಿಯೇ ಮುಸ್ಲಿಮೇತರರ ವಿರುದ್ಧ ಮಾತನಾಡುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್‌ ಪಕ್ಷವು ದೇಶದ ಸಾಮಾಜಿಕ ಸಾಮರಸ್ಯವನ್ನೇ ಹಾಳು ಮಾಡುತ್ತಿದೆ” ಎಂದು ಅಮಿತ್‌ ಮಾಳವೀಯ ಹೇಳಿದ್ದಾರೆ.

“ಪಶ್ಚಿಮ ಬಂಗಾಳವು ಭಾರತದ ಅವಿಭಾಜ್ಯ ಅಂಗವಾಗಿದೆ. ಇದನ್ನು ಮಮತಾ ಬ್ಯಾನರ್ಜಿ ಅವರು ಅರ್ಥ ಮಾಡಿಕೊಳ್ಳಬೇಕು. ಲಕ್ಷಾಂತರ ಹಿಂದು ಬೆಂಗಾಲಿಗಳು ತಾಯ್ನಾಡಿಗಾಗಿ ಹೋರಾಟ ಮಾಡಿದ್ದಾರೆ. ಹಾಗಾಗಿ, ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳವನ್ನು, ಆ ರಾಜ್ಯದ ಜನರನ್ನು ಕಡೆಗಣಿಸಿ ಮಾತನಾಡಬಾರದು. ಒಬ್ಬ ಮುಖ್ಯಮಂತ್ರಿಯಾಗಿ ಈ ರೀತಿಯ ದೇಶದ್ರೋಹದ ಮಾತುಗಳನ್ನು ಆಡಬಾರದು. ಇಂತಹ ರಾಜಕೀಯ ಮೇಲಾಟಗಳ ಮೂಲಕ ಅವರು ಗದ್ದುಗೆ ಏರುತ್ತೇನೆ ಎಂಬ ಕನಸು ಕಾಣುತ್ತಿದ್ದಾರೆ. ಆದರೆ ಅದು ಕೈಗೂಡುವುದಿಲ್ಲ” ಎಂದು ಅಮಿತ್‌ ಮಾಳವೀಯ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: Viral Video: ಪ.ಬಂಗಾಳದಲ್ಲಿ ಮತ್ತೊಬ್ಬ ಮಹಿಳೆ ಮೇಲೆ ಬರ್ಬರ ಹಲ್ಲೆ; ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ‌ ಮೇಲೆ ಕಿಡಿಕಾರಿದ ಜನ

Exit mobile version