Site icon Vistara News

Mohan Bhagwat: ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ದೇಶದ ಏಳಿಗೆ ಸಹಿಸಲ್ಲ; ಮೋಹನ್‌ ಭಾಗವತ್‌ ಆಕ್ರೋಶ

Mohan Bhagwat

Destructive forces attack on cultural Marxists: RSS Chief Mohan Bhagwat

ಮುಂಬೈ: “ದೇಶದಲ್ಲಿ ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಭಾರತದ ಏಳಿಗೆಯನ್ನು ಸಹಿಸುತ್ತಿಲ್ಲ ಹಾಗೂ ಅವರು ಹಗೆತನವನ್ನು ಪಸರಿಸುತ್ತಿದ್ದಾರೆ” ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು. ವಿಜಯ ದಶಮಿ ಹಿನ್ನೆಲೆಯಲ್ಲಿ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಕಚೇರಿಯಲ್ಲಿ ಆಯೋಜಿಸಿದ್ದ ವಿಜಯ ದಶಮಿ ಉತ್ಸವದಲ್ಲಿ ಮಾತನಾಡುವ ವೇಳೆ ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳ ವಿರುದ್ಧ ಹರಿಹಾಯ್ದರು.

“ಭಾರತವು ವೈವಿಧ್ಯತೆಯಲ್ಲೂ ಏಕತೆ ಹೊಂದಿದೆ. ಜಗತ್ತಿನಲ್ಲೇ ವೇಗವಾಗಿ ಭಾರತ ಅಭಿವೃದ್ಧಿ ಹೊಂದುತ್ತಿದೆ. ಆದರೆ, ತಮ್ಮನ್ನು ತಾವು ಸಾಂಸ್ಕೃತಿಕ ಮಾರ್ಕ್ಸ್‌ವಾದಿಗಳು ಎಂದು ಕರೆದುಕೊಳ್ಳುವವರು ಹಗೆತನವನ್ನು ಪಸರಿಸುತ್ತಿದ್ದಾರೆ. ಭಾರತವು ಜಗತ್ತಿನಲ್ಲಿ ಏಳಿಗೆ ಹೊಂದಲು ಅವರು ಇಷ್ಟಪಡುವುದಿಲ್ಲ. ಸ್ವಾರ್ಥ, ಪಂಥೀಯ ಅಭಿಮಾನ, ತಾರತಮ್ಯ ಪರ ಇರುವ ವಿಧ್ವಂಸಕ ಶಕ್ತಿಗಳು ಭಾರತದ ಸಾಮಾಜಿಕ ಸಾಮರಸ್ಯ ಒಡೆಯಲು ಯತ್ನಿಸುತ್ತಿವೆ. ಇವು ದೇಶದ ಶಿಕ್ಷಣ, ಸಂಸ್ಕೃತಿಯನ್ನು ಕೂಡ ವಿಭಜಿಸಲು ಪ್ರಯತ್ನಿಸುತ್ತಿವೆ” ಎಂದು ಹೇಳಿದರು.

ರಾಮಮಂದಿರ, ಜಿ-20 ಶೃಂಗಸಭೆ ಜತೆಗೆ ಹಲವು ವಿಷಯಗಳ ಕುರಿತು ಮೋಹನ್‌ ಭಾಗವತ್‌ ಮಾತನಾಡಿದರು. “ನಿಸರ್ಗದ ಜತೆ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕು. ಏಕಬಳಕೆ ಪ್ಲಾಸ್ಟಿಕ್‌ಅನ್ನು ಸಂಪೂರ್ಣ ತ್ಯಜಿಸಬೇಕು. ದೇಶೀಯ ಉತ್ಪನ್ನಗಳ ಬಳಕೆ ಹೆಚ್ಚಿಸಬೇಕು. ಹಾಗೆಯೇ, ದೇಶದಲ್ಲಿ ಉದ್ಯೋಗಾವಕಾಶಗಳು ಇನ್ನಷ್ಟು ಹೆಚ್ಚಾಗಬೇಕು. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಸಾಮರಸ್ಯ ಹಾಗೂ ಸಹಕಾರದ ಮನೋಭಾವ ಎಲ್ಲರಲ್ಲೂ ಒಡಮೂಡಬೇಕು” ಎಂದರು.

ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ದಿನಾಂಕ ಫಿಕ್ಸ್‌; ವಿಜಯ ದಶಮಿ ದಿನ ಮೋಹನ್‌ ಭಾಗವತ್‌ ಘೋಷಣೆ

ರಾಮಮಂದಿರ ಕುರಿತು ಮಾತನಾಡಿದ ಅವರು, “ರಾಮಮಂದಿರವು ದೇಶದ ಶಾಂತಿ, ದೈವತ್ವ ಹಾಗೂ ಏಕತೆಯ ಸಂಕೇತವಾಗಿದೆ. ಅಮೃತ ಮಹೋತ್ಸವದ ವೇಳೆಯೇ ಮಂದಿರಕ್ಕೆ ಚಾಲನೆ ಸಿಗುತ್ತಿರುವುದು ಸಂತೋಷದ ಸಂಗತಿಯಾಗಿದೆ” ಎಂದರು. “ಜಗತ್ತಿನಲ್ಲಿ ಪ್ರತಿ ವರ್ಷ ಭಾರತದ ಘನತೆ, ಜನಪ್ರಿಯತೆ, ವರ್ಚಸ್ಸು ಹೆಚ್ಚಾಗುತ್ತಲೇ ಇದೆ. ಈ ವರ್ಷ ಜಿ-20 ಶೃಂಗಸಭೆಯನ್ನು ಭಾರತದಲ್ಲಿಯೇ ಆಯೋಜಿಸಿರುವುದು ಮಹತ್ವದ ಸಂಗತಿಯಾಗಿದೆ. ಭಾರತದ ಆತಿಥ್ಯ, ಸಂಸ್ಕೃತಿ ಪರಿಚಯ ಸೇರಿ ಹಲವು ದಿಸೆಯಲ್ಲಿ ಆಯೋಜನೆಯ ಜವಾಬ್ದಾರಿ ಸಿಕ್ಕಿದ್ದು ಒಳ್ಳೆಯ ಅವಕಾಶ” ಎಂದು ತಿಳಿಸಿದರು.

Exit mobile version