Site icon Vistara News

ಉಪ ರಾಷ್ಟ್ರಪತಿ | ನ್ಯಾಯವಾದಿ, ದೇವಿಲಾಲ್‌ ಅವರ ನೆಚ್ಚಿನ ಬಂಟ ಜಗದೀಪ್‌ ಧನಕರ್

Vice President Election 2022

ಕಳೆದ ಹಲವು ವರ್ಷಗಳಿಂದ, ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸದಾ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ತಿಕ್ಕಾಟದಿಂದಲೇ ಸುದ್ದಿಯಾಗಿದ್ದ ಜಗದೀಪ್‌ ಧನಕರ್‌ ಅವರು ಈಗ ಉಪರಾಷ್ಟ್ರಪತಿ ಸ್ಥಾನಕ್ಕೆ ಏರಿದ್ದಾರೆ. ತಮ್ಮ ಹೊಸ ಇನ್ನಿಂಗ್ಸ್‌ ಆರಂಭಿಸಲು ಮುಂದಾಗಿದ್ದಾರೆ.

ಇವರು ಉಪ ರಾಷ್ಟ್ರಪತಿ ಸ್ಥಾನಕ್ಕೆ ಏರುತ್ತಿರುವ ಎರಡನೇ ರಾಜಸ್ಥಾನಿ. ಇದಕ್ಕೂ ಮೊದಲು ರಾಜ್ಯದಿಂದ ಭೈರೋನ್‌ ಸಿಂಗ್‌ ಶೇಖಾವತ್‌ ಉಪ ರಾಷ್ಟ್ರಪತಿಯಾಗಿದ್ದರು.

ರಾಜಸ್ಥಾನದ ಕುಗ್ರಾಮ ಝುಂಝುನ್‌ ಎಂಬಲ್ಲಿನ ಬಡ ಕೃಷಿ ಕುಟುಂಬದಲ್ಲಿ 1951ರ ಮೇ 18ರಂದು ಜನಿಸಿದವರು ಜಗದೀಪ್.‌ ಚಿತ್ತೋಡ್‌ಗಢದಲ್ಲಿ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ, ಭೌತಶಾಸ್ತ್ರದಲ್ಲಿ ಪದವಿ, ರಾಜಸ್ಥಾನ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ. 1979ರಲ್ಲಿ ಸುದೇಶ್‌ ಅವರನ್ನು ಮದುವೆಯಾಗಿ, ಒಬ್ಬಳು ಮಗಳಿದ್ದಾಳೆ.

ನ್ಯಾಯವಾದಿಯಾಗಿ ತಮ್ಮ ಕೆರಿಯರ್‌ ಅನ್ನು 1979ರಲ್ಲಿ ರಾಜಸ್ಥಾನ ಬಾರ್‌ ಕೌನ್ಸಿಲ್‌ನಲ್ಲಿ ಆರಂಭಿಸಿದರು. ನಂತರ ಅಲ್ಲೇ ಸೀನಿಯರ್‌ ಅಡ್ವೊಕೇಟ್‌ ಆದರು. 2019ರಲ್ಲಿ ಪಶ್ಚಿಮ ಬಂಗಾಳದ ಗವರ್ನರ್‌ ಆಗುವವರೆಗೂ ಅವರು ರಾಜಸ್ಥಾನ ಹೈಕೋರ್ಟ್‌ನ ಅತೀ ಹಿರಿಯ ನ್ಯಾಯವಾದಿ ಆಗಿದ್ದರು. ಸುಪ್ರೀಂ ಕೋರ್ಟ್‌ನ ನ್ಯಾಯವಾದಿಯಾಗಿ, ದೇಶದ ಬೇರೆ ಬೇರೆ ಹೈಕೋರ್ಟ್‌ಗಳಲ್ಲೂ ನ್ಯಾಯವಾದಿಯಾಇ ಭಾಗವಹಿಸಿದ್ದುಂಟು.

1989ರಲ್ಲಿ ರಾಜಕೀಯ ಪ್ರವೇಶಿಸಿದರು. ಝುಂಝುನು ಕ್ಷೇತ್ರದಿಂದ ಜನತಾ ದಳದ ಟಿಕೆಟ್‌ ಪಡೆದು ಲೋಕಸಭೆಗೆ ಸ್ಪರ್ಧಿಸಿದರು. ಗೆದ್ದು ಬಂದುದು ಮಾತ್ರವಲ್ಲದೆ, 1990ರಲ್ಲಿ ಕೇಂದ್ರ ಸಚಿವರೂ ಆದರು. ಇದು ಅಲ್ಪಾವಧಿಯದಾಗಿತ್ತು. 1993ರಲ್ಲಿ ಮತ್ತೆ ಚುನಾವಣೆ ನಡೆದಾಗ ರಾಜಸ್ಥಾನದ ಕಿಶನ್‌ಗಢ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಬಂದು, 1998ರವರೆಗೆ ಶಾಸಕರಾಗಿದ್ದರು.

ಜನತಾ ದಳದ ಮುಖಂಡರಾಗಿದ್ದ ದೇವಿಲಾಲ್‌ ಅವರ ನಿಷ್ಠಾವಂತ ಅನುಯಾಯಿ ಆಗಿದ್ದವರು ಧನಕರ್.‌ ದೇವಿಲಾಲ್‌ ಅವರೇ ಧನಕರ್‌ ಅವರನ್ನು ಝುಂಝುನು ಅಭ್ಯರ್ಥಿಯಾಗಿ ಆರಿಸಿದ್ದರು. 1990ರ ಅಲ್ಪಮತದ ಚಂದ್ರಶೇಖರ್‌ ಅವರ ಸರಕಾರದಲ್ಲಿ ದೇವಿಲಾಲ್‌ ಸೇರಿಕೊಂಡಾಗ ಧನಕರ್‌ ಅವರು ಸಚಿವರಾದುದು.

ದೇವಿಲಾಲ್‌ ಅವರ ಯುಗ ಮುಗಿದ ಬಳಿಕ, ಧನಕರ್‌ ಅವರು ಬಿಜೆಪಿ ಸೇರಿಕೊಂಡು ವಸುಂಧರಾ ರಾಜೆ ಅವರ ಬಣದಲ್ಲಿ ಗುರುತಿಸಿಕೊಂಡಿದ್ದರು. ನಂತರ ಅದನ್ನೂ ಬಿಟ್ಟು ವಕೀಲಿಕೆ ಮುಂದುವರಿಸಿದ್ದರು. ನರೇಂದ್ರ ಮೋದಿ ಅವರ ಸರ್ಕಾರ ಇವರನ್ನು ಪಶ್ಚಿಮ ಬಂಗಾಳದ ರಾಜ್ಯಪಾಲರನ್ನಾಗಿ ನೇಮಿಸಿತ್ತು. ಇದಾದ ಬಳಿಕ ಧನಕರ್‌ ಅವರಿಗೂ ಮಮತಾ ಬ್ಯಾನರ್ಜಿ ಅವರಿಗೂ ಸತತ ತಿಕ್ಕಾಟಗಳು ನಡೆದು ಪದೇ ಪದೆ ಹೆಡ್‌ಲೈನ್‌ ಆಗಿದ್ದವು.

ಇದನ್ನೂ ಓದಿ: Vice President of India | ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಧನಕರ್ ಜಯಭೇರಿ​​, ನಿರೀಕ್ಷೆಗಿಂತ ಹೆಚ್ಚಿನ ಮತ

Exit mobile version