ಮುಂಬಯಿ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದರೊಂದಿಗೆ ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ಬುಧವಾರ ರಾತ್ರಿಯೇ ಪತನವಾಗಿದೆ. ಶಿವಸೇನಾ- ಎನ್‌ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಆಳ್ವಿಕೆ ಅಂತ್ಯವಾಗಿದೆ. ಮತ್ತೊಂದು ಕಡೆ ಬಿಜೆಪಿ ಪಾಳೆಯದಲ್ಲಿ ಸಂಭ್ರಮ ಗರಿಗೆದರಿದ್ದು, ದೇವೇಂದ್ರ ಫಡ್ನವಿಸ್ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಲು ಸಜ್ಜಾಗಿದ್ದಾರೆ. ಶಿವಸೇನಾದ ರೆಬೆಲ್ ಶಾಸಕರ ಬೆಂಬಲ ಪಡೆದು ನೂತನ ಸರ್ಕಾರ ರಚನೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ನಾಳೆ (ಜುಲೈ೧) ಫಡ್ನವಿಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ಬಹುಮತ ಪರೀಕ್ಷೆಗೆ ಸುಪ್ರೀಂಕೋರ್ಟ್ ಹಸಿರು ನಿಶಾನೆ ತೋರಿಸಿದ ಬೆನ್ನಲ್ಲೇ ಸಿಎಂ ಉದ್ಧವ್ ಠಾಕ್ರೆ ಬುಧವಾರ ರಾತ್ರಿ ರಾಜೀನಾಮೆ ಘೋಷಿಸಿದರು. ಸಿಎಂ ರಾಜೀನಾಮೆ ಹಿನ್ನೆಲೆಯಲ್ಲಿ ಸರ್ಕಾರ ಪತನವಾಗಿದ್ದು, ಬಹುಮತ ಸಾಬೀತುಪಡಿಸಬೇಕಾದ ಅವಶ್ಯಕತೆ ಇಲ್ಲ. ಹೀಗಾಗಿ ರಾಜ್ಯಪಾಲ ಬಿ.ಎಸ್ ಕೋಶ್ಯಾರಿ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಹೊಸ ಸರ್ಕಾರ ರಚನೆಗೆ ಆಹ್ವಾನಿಸಲಿದ್ದಾರೆ. ರೆಬೆಲ್ ಶಾಸಕರ ನಾಯಕ ಏಕನಾಥ್ ಶಿಂಧೆ ಉಪಮುಖ್ಯಮಂತ್ರಿಯಾಗುವ ನಿರೀಕ್ಷೆ ಇದೆ.
2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ವೇಳೆ ” ನಾನು ಪುನಃ ಬರುವೆʼ ಎನ್ನುವುದು ದೇವೇಂದ್ರ ಫಡ್ನವಿಸ್ ಅವರ ಘೋಷಾ ವಾಕ್ಯವಾಗಿತ್ತು. ಆದರೆ ವಾಸ್ತವವಾಗಿ ಹಾಗಾಗಿರಲಿಲ್ಲ. ಶಿವಸೇನಾ ಬಿಜೆಪಿ ಜತೆಗಿನ ಮೈತ್ರಿ ಕಡಿದುಕೊಂಡಿತ್ತು. ರಾತ್ರೊರಾತ್ರಿ ಫಡ್ನವಿಸ್ ಅವರು ಎನ್‌ಸಿಪಿಯ ಅಜಿತ್ ಪವಾರ್ ಜತೆಗೂಡಿ ಅಧಿಕಾರದ ಗದ್ದುಗೆ ಏರಲು ಬಯಸಿದರೂ, ಸಾಧ್ಯವಾಗಿರಲಿಲ್ಲ. ಮಹಾರಾಷ್ಟ್ರ ವಿಕಾಸ ಅಘಾಡಿ ಸರ್ಕಾರ ಅಸ್ತಿತ್ವಕ್ಕೆ ಬಂದು ಉದ್ಧವ್ ಠಾಕ್ರೆ ಸಿಎಂ ಆಗಿದ್ದರು. ಎರಡೂವರೆ ವರ್ಷಗಳ ಬಳಿಕ ಫಡ್ನವಿಸ್ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಾರೆ.
ಶಾಂತಿ ಕಾಪಾಡಲು ಕಾರ್ಯಕರ್ತರಿಗೆ ಉದ್ಧವ್ ಮನವಿ
ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಉದ್ಧವ್ ಠಾಕ್ರೆ, ರೆಬೆಲ್ ಶಾಸಕರ ವಿರುದ್ಧ ಗಲಾಟೆ ಮಾಡದಂತೆ, ತೊಂದರೆ ಕೊಡದಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ಸಹಯೋಗ ನೀಡಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಆಗುವ ತನಕ ಹುದ್ದೆಯಲ್ಲಿ ಮುಂದುವರಿಯುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ರಾಜೀನಾಮೆ ಸಲ್ಲಿಸಿದ ಬಳಿಕ ತಮ್ಮ ನಿವಾಸ ಮಾತೋಶ್ರಿಗೆ ಮರಳಿದ ಉದ್ಧವ್ ಠಾಕ್ರೆ, ರಾಜೀನಾಮೆಯಿಂದ ವಿಚಲಿತರಾಗಿಲ್ಲ ಎಂದರು. ಮಗ ಆದಿತ್ಯ ಠಾಕ್ರೆ ಜತೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಮುಂಬಯಿ ಏರ್‌ಪೋರ್ಟ್ ಹೈ ಅಲರ್ಟ್:
ಶಿವಸೇನಾದಿಂದ ಬಂಡಾಯವೆದ್ದಿರುವ ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಮುಂಬಯಿಗೆ ಇಂದು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಬಯಿ ಏರ್ ಪೋರ್ಟ್‌ನಲ್ಲಿ ಹೈ ಅಲರ್ಟ್ ಫೋಷಿಸಲಾಗಿದೆ.