ಇಂದೋರ್: ಮಧ್ಯ ಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದೇಗುಲ (Ujjain Mahakaleshwar Temple)ದಲ್ಲಿ ಭಕ್ತರ ಮಧ್ಯೆ ಹೊಡೆದಾಟ ನಡೆದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ದೇಗುಲದ ಆವರಣದಲ್ಲಿ ಎರಡು ಗುಂಪುಗಳು ಕೈಕೈ ಮಿಲಾಯಿಸಿಕೊಂಡಿದ್ದನ್ನು ನೋಡಬಹುದು. ಇತ್ತ ಒಂದಷ್ಟು ಭಕ್ತರು ಸರತಿ ಸಾಲಿನಲ್ಲಿ ಒಳಗೆ ಸಾಗುತ್ತಿದ್ದರೆ, ಅಲ್ಲೇ ಪಕ್ಕದಲ್ಲಿ ಮತ್ತೊಂದಷ್ಟು ಜನ ಹೊಡೆದಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಪು ತೊಟ್ಟು, ದೇವರಿಗೆ ಪೂಜಿಸಲೆಂದು ಬಂದವರು ಕಡುಕೋಪದಿಂದ-ಆಕ್ರೋಶದಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ.
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗಷ್ಟೇ 900 ಮೀಟರ್ ಉದ್ದದ, ಎರಡು ಪ್ರವೇಶ ದ್ವಾರ ಇರುವ ಕಾರಿಡಾರ್ ಉದ್ಘಾಟನೆಯಾಗಿದೆ. ಈ ಕಾರಿಡಾರ್ನಲ್ಲಿ ಸುತ್ತಾಡಲು ಇ-ರಿಕ್ಷಾ ವ್ಯವಸ್ಥೆಯೂ ಭಕ್ತರಿಗೆ ಲಭ್ಯವಿದೆ. ಈಗ ಭಕ್ತರ ನಡುವೆ ಹೊಡೆದಾಟವಾಗಲು ಇದೇ ಕಾರಣವೂ ಆಗಿದೆ. ಅಲ್ಲಿ ಒಂದು ಇ-ರಿಕ್ಷಾ ಇತ್ತು. ಅದರಲ್ಲಿದ್ದ ಸೀಮಿತ ಸೀಟ್ಗಳನ್ನು ಬುಕ್ ಮಾಡಲು ಎರಡು ಗುಂಪಿನ ಭಕ್ತರು ಏಕಕಾಲಕ್ಕೆ ಪ್ರಯತ್ನಿಸಿದ್ದಾರೆ. ಬಳಿಕ ಜಗಳವಾಡಿಕೊಂಡಿದ್ದಾರೆ. ನಾವು ಮೊದಲು-ತಾವು ಮೊದಲು ಎಂದು ಕಿತ್ತಾಡಿಕೊಂಡು, ಬಡಿದಾಡಿಕೊಂಡಿದ್ದಾಗಿ ವರದಿಯಾಗಿದೆ. ಹೀಗೆ ಹೊಡೆದಾಡುತ್ತಲೇ ಅವರು ಅಲ್ಲಿಂದ ಮುಂದೆ ಸಾಗಿದ್ದನ್ನು ವಿಡಿಯೊದಲ್ಲಿ ನೋಡಬಹುದು. ಹಾಗಂತ ಯಾರೂ ಪೊಲೀಸರಿಗೆ ದೂರು ಕೊಟ್ಟಿಲ್ಲ. ಪೊಲೀಸರೂ ಕೂಡ ಕೇಸ್ ದಾಖಲು ಮಾಡಿಲ್ಲ.
ದೇಶ ಮಟ್ಟದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://vistaranews.com/attribute-category/national/