ನವದೆಹಲಿ: ವಿಮಾನಗಳ ವಿಳಂಬಗಳ (Flight Delays) ಬಗ್ಗೆ ನಿಖರವಾದ ನೈಜ-ಸಮಯದ ಮಾಹಿತಿಯನ್ನು ಪ್ರಯಾಣಿಕರಿಗೆ ವಿಮಾನಯಾನ ಸಂಸ್ಥೆಗಳು (Airlines) ನೀಡಬೇಕು ಎಂದು ವಿಮಾನಯಾನ ವಾಚ್‌ಡಾಗ್ ಡಿಜಿಸಿಎ (DGCA) ಸೋಮವಾರ ಹೇಳಿದೆ. ವಿಮಾನ ನಿಲ್ದಾಣಗಳಲ್ಲಿ ಮಂಜು-ಸಂಬಂಧಿತ ಅಡೆತಡೆಗಳಿಗೆ ಸಂಬಂಧಿಸಿದಂತೆ ಪ್ರಯಾಣಿಕರೊಂದಿಗೆ ಸೂಕ್ತವಾಗಿ ಸಂವಹನ ನಡೆಸಲು ವಿಮಾನ ನಿಲ್ದಾಣಗಳಲ್ಲಿನ ಸಿಬ್ಬಂದಿಯನ್ನು ಸೂಕ್ತವಾಗಿ ತರಬೇತುಗೊಳಿಸುವಂತೆ ಸೂಚಿಸಲಾಗಿದೆ. ಅಲ್ಲದೇ, ಮೂರು ಗಂಟೆಗಳಿಗಿಂತ ಹೆಚ್ಚು ವಿಳಂಬವಾದರೆ ಅಂಥ ವಿಮಾನಗಳ ಪ್ರಯಾಣ ರದ್ದುಗೊಳಿಸಬೇಕು ಎಂದು ಡಿಜಿಸಿಎ ಹೇಳಿದೆ.
ಗಮನಾರ್ಹ ಸಂಖ್ಯೆಯ ವಿಮಾನಗಳು ವಿಳಂಬವಾಗುತ್ತಿರುವ ಮತ್ತು ರದ್ದಾದ ಹಿನ್ನೆಲೆಯಲ್ಲಿ ಮತ್ತು ಪ್ರಯಾಣಿಕರು ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ನಿಯಂತ್ರಕವು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳ ಒಂದು ಸೆಟ್ ಅನ್ನು ಹೊರತಂದಿದೆ. ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳ ವಿಳಂಬದ ಬಗ್ಗೆ ನಿಖರವಾದ ನೈಜ-ಸಮಯದ ಮಾಹಿತಿಯನ್ನು ಪ್ರಕಟಿಸಬೇಕು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಹೇಳಿದೆ.
ಮಂಜು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ನಿವಾರಿಸುವುದು, ವಿಮಾನಯಾನ ಸಂಸ್ಥೆಗಳು ದಟ್ಟಣೆಯನ್ನು ನಿವಾರಿಸುವ ದೃಷ್ಟಿಯಿಂದ 3 ಗಂಟೆಗಳ ಅವಧಿಗೆ ಮೀರಿದ ಅಂತಹ ಪರಿಸ್ಥಿತಿಗಳ ಕಾರಣದಿಂದಾಗಿ ವಿಳಂಬವಾಗುವ ಅಥವಾ ಪರಿಣಾಮವಾಗಿ ವಿಳಂಬವಾಗುವ ನಿರೀಕ್ಷೆಯಿರುವ ಅಂತಹ ವಿಮಾನಗಳನ್ನು ಸಾಕಷ್ಟು ಮುಂಚಿತವಾಗಿ ರದ್ದುಗೊಳಿಸಬೇಕು. ಇದರಿಂದ ಪ್ರಯಾಣಿಕರ ಅನನುಕೂಲತೆಯನ್ನು ತಗ್ಗಿಸಲು ಸಹಾಯವಾಗುತ್ತದೆ ಎಂದು ಹೇಳಿದೆ ಡಿಜಿಸಿಎ ಹೇಳಿದರು.
ದೆಹಲಿ ವಿಮಾನ ನಿಲ್ದಾಣ ಸೇರಿದಂತೆ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಮಂಜು ಸಂಬಂಧಿ ಅಡಚಣೆಗಳು ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಪ್ರಯಾಣಿಕರಿಗೆ ಅನುಕೂಲತೆಗಳನ್ನು ಕಲ್ಪಿಸುವ ಕೊಡುವುದಕ್ಕಾಗಿಯೇ ಎಸ್‌ಒಪಿಗಳನ್ನು ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ವಿಮಾನ ಹಾರಾಟ ವಿಳಂಬ ಎಂದು ಪೈಲಟ್‌ಗೆ ಹೊಡೆದ ಪ್ರಯಾಣಿಕ
ಭಾರಿ ಮಳೆ, ಚಂಡಮಾರುತ ಸೇರಿ ಯಾವುದೇ ರೀತಿಯಲ್ಲಿ ಹವಾಮಾನ ವೈಪರೀತ್ಯ ಉಂಟಾದರೆ ವಿಮಾನಗಳ ಹಾರಾಟ ವಿಳಂಬವಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಪೇಚಾಡುವುದು ಕೂಡ ಅಷ್ಟೇ ಸಾಮಾನ್ಯ. ಹೀಗೆ, ಭಾನುವಾರ (ಜನವರಿ 14) ದಟ್ಟ ಮಂಜಿನಿಂದಾಗಿ ವಿಮಾನದ ಹಾರಾಟ ವಿಳಂಬವಾಗಿಯಿತು ಎಂದು ಇಂಡಿಗೋ ವಿಮಾನದ (IndiGo Flight) ಪ್ರಯಾಣಿಕನೊಬ್ಬ ಪೈಲಟ್ (Pilot) ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ವಿಡಿಯೊ (Viral Video) ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾನುವಾರ ಬೆಳಗಿನ ಜಾವ ಇಂಡಿಗೋ ವಿಮಾನವು ದೆಹಲಿಯಿಂದ ಗೋವಾಗೆ ಹೊರಡಬೇಕಿತ್ತು. ಆದರೆ, ದೆಹಲಿಯಲ್ಲಿ ದಟ್ಟ ಮಂಜು ಕವಿದ ಕಾರಣ ವಿಮಾನದ ಹಾರಾಟ ವಿಳಂಬವಾಗಿದೆ. ಸುಮಾರು 13 ತಾಸು ಪ್ರಯಾಣಿಕರು ವಿಮಾನದಲ್ಲಿಯೇ ಕಾದು ಕುಳಿತಿದಿದ್ದಾರೆ. ಇದೇ ವೇಳೆ ವಿಮಾನದ ಪೈಲಟ್ ಎಲ್ಲ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವಿಮಾನ ಹಾರಾಟ ವಿಳಂಬವಾಗಿರುವ ಕುರಿತು ಹೇಳುತ್ತಿದ್ದರು. ಆದರೆ, ಇದೇ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಪೈಲಟ್ ಮೇಲೆ ಎರಗಿ, ಪೈಲಟ್‌ಗೆ ಹಲ್ಲೆ ನಡೆಸಿದ್ದಾನೆ. “ವಿಮಾನ ಹಾರಿಸಿದರೆ ಹಾರಿಸು, ಇಲ್ಲ ಸುಮ್ಮನಿರು” ಎಂದು ವ್ಯಕ್ತಿಯು ಗದರಿದ್ದಾನೆ.
ವಿಮಾನ ಪ್ರಯಾಣಿಕನು ಪೈಲಟ್ ಮೇಲೆಯೇ ಹಲ್ಲೆ ನಡೆಸಿದ ಕೂಡಲೇ ವಿಮಾನದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. “ಇದೇನು ಮಾಡುತ್ತಿದ್ದೀರಿ” ಎಂದು ಗಗನಸಖಿಯು ಪ್ರಯಾಣಿಕನ ಮೇಲೆ ಗದರಿದ್ದಾರೆ. ಇಷ್ಟಾದರೂ ಪ್ರಯಾಣಿಕನು ಪೈಲಟ್‌ಗೆ ಬೈದಿದ್ದಾನೆ. ಒಂದಷ್ಟು ಸಿಬ್ಬಂದಿಯು ವ್ಯಕ್ತಿಯನ್ನು ಸಮಾಧಾನಪಡಿಸಿ ಕೂರಿಸಿದ್ದಾರೆ. ಇದಾದ ಬಳಿಕ ಇಂಡಿಗೋ ವಿಮಾನಯಾನ ಸಂಸ್ಥೆಯು ದೂರು ದಾಖಲಿಸಿದ್ದು, ಹಲ್ಲೆ ನಡೆಸಿದ ಪ್ರಯಾಣಿಕನನ್ನು ಬಂಧಿಸಲಾಗಿದೆ. ಹಲ್ಲೆ ಮಾಡಿದ ಪ್ರಯಾಣಿಕನನ್ನು ಸಾಹಿಲ್ ಕಟಾರಿಯಾ ಎಂದು ಗುರುತಿಸಲಾಗಿದೆ. ಈತನು ಅನೂಪ್ ಕುಮಾರ್ ಎಂಬ ಪೈಲಟ್ ಮೇಲೆ ಹಲ್ಲೆ ನಡೆಸಿದ್ದಾನೆ.
ವಿಮಾನದ ಪೈಲಟ್ ಸೇರಿ ಯಾವುದೇ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ನಮ್ಮ ಸಂಸ್ಥೆಯು ಖಂಡಿಸುತ್ತದೆ. ಹಾಗಾಗಿ, ಪೈಲಟ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ. ದೆಹಲಿಯ ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್ ವಿಮಾನ ನಿಲ್ದಾಣದ ಮೂಲಕ ದೆಹಲಿ ಪೊಲೀಸರಿಗೆ ದೂರು ದಾಖಲಿಸಲಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಾದ ಬಳಿಕ ಆರೋಪಿಯು ಕ್ಷಮೆಯಾಚಿಸಿದ್ದಾನೆ ಎಂದು ತಿಳಿದುಬಂದಿದೆ. ಆದರೂ, ವಿಮಾನಯಾನ ಸಂಸ್ಥೆಯು ಈತನನ್ನು ನೋ ಫ್ಲೈ (ಹಾರಾಟಕ್ಕೆ ಅನುಮತಿ ಇಲ್ಲದವರ ಪಟ್ಟಿ) ಲಿಸ್ಟ್‌ಗೆ ಸೇರಿಸಲು ತೀರ್ಮಾನಿಸಿದೆ ಎನ್ನಲಾಗಿದೆ. ಅಲ್ಲದೆ, ಸೋಮವಾರವೂ ದೆಹಲಿಯಲ್ಲಿ ದಟ್ಟ ಮಂಜು ಕವಿದ ಕಾರಣ 40ಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದಾಗಿದೆ. ಇನ್ನೂ ಕೆಲವು ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಸ್ಪೈಸ್‌ಜೆಟ್ ಫ್ಲೈಟ್‌ನಲ್ಲಿ ಮತ್ತೆ ದೋಷ; ದುಬೈನಿಂದ ಆಗಮಿಸಬೇಕಿದ್ದ ವಿಮಾನ ವಿಳಂಬ