ಭುವನೇಶ್ವರ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ರಾಜಕೀಯ ನಾಯಕರ ವಾಗ್ದಾಳಿ, ತಿರುಗೇಟು, ವ್ಯಂಗ್ಯ, ಆರೋಪ, ಪ್ರತ್ಯಾರೋಪ, ಪಕ್ಷಾಂತರಗಳು ಶುರುವಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “2024ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಮತ್ತೆ ಗೆದ್ದರೆ ದೇಶದಲ್ಲಿ ನಿರಂಕುಶ ಪ್ರಭುತ್ವ ಜಾರಿಯಾಗುತ್ತದೆ” ಎಂದಿದ್ದಾರೆ.
ಒಡಿಶಾದ ಭುವನೇಶ್ವರದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, “ಪ್ರಜಾಪ್ರಭುತ್ವವನ್ನು ಕಾಪಾಡಲು, ಅದನ್ನು ಉಳಿಸಿಕೊಳ್ಳಲು ದೇಶದ ಜನರಿಗೆ ಇದೇ ಕೊನೆಯ ಅವಕಾಶ. ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಿ ಆಯ್ಕೆಯಾದರೆ, ದೇಶದಲ್ಲಿ ಪ್ರಜಾಪ್ರಭುತ್ವವೇ ಇರುವುದಿಲ್ಲ. ಅವರು ದೇಶದಲ್ಲಿ ಸರ್ವಾಧಿಕಾರವನ್ನು ಜಾರಿಗೊಳಿಸುತ್ತಾರೆ. ರಷ್ಯಾದಲ್ಲಿ ವ್ಲಾಡಿಮಿರ್ ಪುಟಿನ್ ಆಡಳಿತ ನಡೆಸಿದಂತೆ, ಬಿಜೆಪಿಯು ಭಾರತವನ್ನು ಆಳಲಿದೆ. ಮೋದಿ ಮತ್ತೆ ಗೆದ್ದರೆ 2024ರ ನಂತರ ಚುನಾವಣೆಗಳೇ ಇರುವುದಿಲ್ಲ” ಎಂದು ಹೇಳಿದರು.
ये आख़री chance है आप के पास वोट देने का, इसके बाद लोकतंत्र नहीं बचेगा !
— Mallikarjun Kharge (@kharge) January 29, 2024
संविधान व लोकतंत्र को बचाना और चुनाव बार-बार कराना इसकी ज़िम्मेदारी अब जनता के ऊपर है।
📍भुवनेश्वर pic.twitter.com/sALRwQkM4s
“ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಚುನಾವಣೆಯಲ್ಲಿ ಜನರಿಗೆ ಅವಕಾಶವಿದೆ. ಜನರಿಗೆ ಉಳಿದಿರುವ ಕೊನೆಯ ಅವಕಾಶವಿದೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಿದ್ಧಾಂತಗಳು ವಿಷ ಇದ್ದಂತೆ. ಆ ಸಿದ್ಧಾಂತಗಳು ದೇಶಕ್ಕೆ ಅಪಾಯಕಾರಿಯಾಗಿವೆ. ರಾಜಕೀಯ ಪ್ರತಿಸ್ಪರ್ಧಿಗಳನ್ನು ಮಟ್ಟಹಾಕಬೇಕು ಎಂದು ಪ್ರತಿಪಕ್ಷಗಳ ನಾಯಕರಿಗೆ ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ನೋಟಿಸ್ ನೀಡಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಆದರೂ, ರಾಹುಲ್ ಗಾಂಧಿ ಅವರು ಬಿಜೆಪಿಯ ಎಲ್ಲ ಷಡ್ಯಂತ್ರಗಳನ್ನೂ ಮೀರಿ, ಎದೆಗುಂದದೆ ಜನರಿಗಾಗಿ ಹೋರಾಟ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿ: Chakravarthy Sulibele: ಖರ್ಗೆ ʼಅಯೋಗ್ಯʼ ಹೇಳಿಕೆ; ಚಕ್ರವರ್ತಿ ಸೂಲಿಬೆಲೆಗೆ ಬಂಧನ ಭೀತಿ
ಇಂಡಿಯಾ ಒಕ್ಕೂಟದಲ್ಲಿ ಬಿರುಕು
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂದು ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟದಲ್ಲಿ ಭಾರಿ ಬಿರುಕು ಮೂಡಿದೆ. ಜೆಡಿಯುನ ನಿತೀಶ್ ಕುಮಾರ್ ಅವರು ಮೈತ್ರಿ ತೊರೆದು, ಎನ್‌ಡಿಎ ಮೈತ್ರಿಕೂಟ ಸೇರಿದ್ದಾರೆ. ಸೀಟು ಹಂಚಿಕೆ ಬಿಕ್ಕಟ್ಟಿನಿಂದಾಗಿಯೇ ಮಮತಾ ಬ್ಯಾನರ್ಜಿ ಅವರ ಟಿಎಂಸಿಯು ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಇದೇ ಕಾರಣಕ್ಕಾಗಿಯೇ ಪಂಜಾಬ್‌ನಲ್ಲಿ ಆಪ್ ಕೂಡ ಏಕಾಂಗಿ ಸ್ಪರ್ಧೆಗೆ ಮುಂದಾಗಿದೆ. ಇದು ಇಂಡಿಯಾ ಒಕ್ಕೂಟಕ್ಕೆ ಉಂಟಾದ ಭಾರಿ ಹಿನ್ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ