Site icon Vistara News

Mallikarjun Kharge: ಬಿಜೆಪಿ 400 ಸೀಟು ಗೆಲ್ಲುತ್ತೆ ಅಂತಾ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರಾ?

Did Mallikarjun kharge Said BJP will cross 400 seats in lok Sabha election?

ನವದೆಹಲಿ: ಪ್ರತಿಪಕ್ಷ ನಾಯಕ (Leader of Opposition) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಅಜಾಗರೂಕ ಭಾಷಣವು ರಾಜ್ಯಸಭೆಯ ಆಡಳಿತ ಸಾಲಿನಲ್ಲಿ (Ruling Party) ಭಾರೀ ಖುಷಿಗೆ ಕಾರಣವಾಯಿತು. ಖರ್ಗೆ ಅವರ ಮಾತಿಗೆ ಆಡಳಿತ ಪಕ್ಷದ ಸಂಸದರೆಲ್ಲರೂ ಒಪ್ಪಿಗೆ ಸೂಚಿಸಿದ ಅಪರೂದ ಘಟನೆ ನಡೆಯಿತು! ಹಾಗಂತ, ಇದು ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ದೊರೆತ ಒಪ್ಪಿಗೆಯಲ್ಲ, ಬದಲಿಗೆ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿಯನ್ನು (PM Narendra Modi) ತಮಗರಿವಿಲ್ಲದಂತೆ ಹೊಗಳಿದ್ದಕ್ಕಾಗಿ ದೊರೆತ ಮೆಚ್ಚುಗೆಯಾಗಿತ್ತು.

ಮಹಿಳಾ ಪ್ರಾತಿನಿಧ್ಯದ ವಿಷಯದ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಖರ್ಗೆ ಅವರು, ಲೋಕಸಭೆಯಲ್ಲಿ ಸರ್ಕಾರದ ಬಹುಮತದ ಬಗ್ಗೆ ಪ್ರಸ್ತಾಪಿಸಿದರು. ಖರ್ಗೆ ಅವರು, ಆಪ್ಕಾ ಇತ್ನಾ ಬಹುಮತ್ ಹೈ, ಪೆಹ್ಲೆ 330, 334 ಥಿ, ಅಬ್ ತೋ ‘400 ಪಾರ್’ ಹೋ ರಹಾ ಹೈ ( ನಿಮಗೆ 330, 334 ಸ್ಥಾನಗಳ ಬಹುಮತವಿದೆ ಮತ್ತು ಈಗ 400 ದಾಟುತ್ತಿದೆ) ಎಂದು ಹೇಳಿದರು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿರುವ ಬಿಜೆಪಿ ಘೋಷಣೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ಉಲ್ಲೇಖಿಸಿತ್ತಿದ್ದರು. ಆಗ ಸದನದಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಇತರರು ಸಚಿವರು ನಗಲಾರಂಭಿಸಿದರು. ರಾಜ್ಯಸಭಾ ಚೇರ್ಮನ್ ಜಗದೀಪ್ ಧನಕರ್ ಕೂಡ ನಕ್ಕರು.

ತಮ್ಮ ಅಜಾಗರೂಕ ಮಾತುಗಳ ಬಗ್ಗೆ ಗೊತ್ತಾಗುತ್ತಿದ್ದಂತೆ ಖರ್ಗೆ ಅವರು ಸ್ಪಷ್ಟಣೆ ನೀಡಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಪಿಯೂಷ್ ಗೋಯೆಲ್ ಅವರು, ಇಂದು ಕೊನೆಗೂ ಮಲ್ಲಿಕಾರ್ಜುನ ಖರ್ಗೆ ಅವರು ಸತ್ಯವನ್ನು ಹೇಳಿದ್ದಾರೆ ಮತ್ತು ಅದು ಸತ್ಯವನ್ನು ಹೊರತುಪಡಿಸಿ ಬೇರೇನೂ ಅಲ್ಲ ಎಂದು ಹೇಳಿದರು.

ಪಿಯೂಷ್ ಗೋಯೆಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ಯಸಭಾ ಚೇರ್ಮನ್ ಜಗದೀಪ್ ಧನಕರ್ ಅವರು, ಬಹುಶಃ ಇದೇ ಮೊದಲ ಬಾರಿಗೆ ಪ್ರತಿಪಕ್ಷದ ನಾಯಕರು ಇಷ್ಟೊಂದು ಸರ್ಕಾರವನ್ನು ಎಂದಿಗೂ ಹೊಗಳಿಲ್ಲ ಅನಿಸುತ್ತೆ. ಇದೊಂದು ದಾಖಲೆ. ನಿಮ್ಮ ಭಾಷಣಕ್ಕೆ ಮೆಚ್ಚುಗೆ ಇದೆ ಎಂದು ಹೇಳಿದರು .

ಆಗ ಪ್ರತಿಕ್ರಿಯಿಸಿದ ಖರ್ಗೆ ಅವರು, ಯಾಕೆ ಮೆಚ್ಚುಗೆ ಸೂಚಿಸುತ್ತಿದ್ದೀರಿ ಎಂದು ನನಗೆ ಗೊತ್ತು. ಅವರು(ಬಿಜೆಪಿ), 400 ಸೀಟು ಗೆಲ್ಲುತ್ತೇವೆ, 500 ಸೀಟು ಗೆಲ್ಲುತ್ತೇವೆ ಎಂದು ತಮ್ಮ ತುತ್ತೂರಿಯನ್ನು ತಾವೇ ಊದಿಕೊಳ್ಳುತ್ತಿದ್ದಾರೆ. ಆದರೆ, ಅವರು 100 ಸೀಟು ದಾಟಲಾರರು. ಇಂಡಿಯಾ ಕೂಟ ಸ್ಟ್ರಾಂಗ್ ಆಗಿದೆ ಎಂದು ಹೇಳಿದರು.

ಖರ್ಗೆ ಅವರು ರಾಜ್ಯಸಭೆಯಲ್ಲಿ ಮಾತನಾಡಿರುವ ವಿಡಿಯೋ ಕ್ಲಿಪ್ ಅನ್ನು ಷೇರ್ ಮಾಡಿಕೊಂಡಿರುವ ಭಾರತೀಯ ಜನತಾ ಪಾರ್ಟಿಯು, ಮೋದಿ ಹೀಗೆ ಹೇಳುತ್ತಿರಬಹುದು. ನನಗೆ ಹೊಸ ವೈರಿಗಳು ಬೇಕು. ಹಳಬರು ನನ್ನ ಅಭಿಮಾನಿಗಳಾಗಿ ಬಿಡುತ್ತಾರೆ.. ಎಂದು ಕಿಚಾಯಿಸುವ ರೀತಿಯಲ್ಲಿ ಬರೆದುಕೊಂಡಿದೆ.

ಈ ಸುದ್ದಿಯನ್ನೂ ಓದಿ: Mallikarjun Kharge: ಮೋದಿ ಮತ್ತೆ ಗೆದ್ದರೆ ಸರ್ವಾಧಿಕಾರ ಜಾರಿ; ಮಲ್ಲಿಕಾರ್ಜುನ ಖರ್ಗೆ ಭವಿಷ್ಯ

Exit mobile version