ಭೋಪಾಲ್: ಕೆಜಿಎಫ್ ಚಾಪ್ಟರ್ ೨ನ ‘ರಮಿಕಾ ಸೇನ್’ ಪಾತ್ರದ ಮೂಲಕ ಹೆಚ್ಚಿನ ಖ್ಯಾತಿ ಗಳಿಸಿದ ಬಾಲಿವುಡ್ ನಟಿ ರವೀನಾ ಟಂಡನ್ (Raveena Tandon) ಅವರು ವಿವಾದದ ಸುಳಿಗೆ ಸಿಲುಕಿದ್ದಾರೆ. ಮಧ್ಯಪ್ರದೇಶದ ಸತ್ಪುರಾ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿ ಹೋದಾಗ ಫೋಟೊ ತೆಗೆಯುವ ಹಾಗೂ ವಿಡಿಯೊ ಮಾಡುವ ಭರದಲ್ಲಿ ಹುಲಿಗಳಿಗೆ ತೊಂದರೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ವಿವಾದಕ್ಕೆ ಕಾರಣ ಏನು?
ನವೆಂಬರ್ ೨೨ರಂದು ಅರಣ್ಯ ಇಲಾಖೆಯ ಜೀಪ್‌ನಲ್ಲಿಯೇ ರವೀನಾ ಟಂಡನ್ ಅವರು ಸಫಾರಿ ಹೋಗಿದ್ದರು. ಇದೇ ವೇಳೆ ಹುಲಿಗಳ ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಹುಲಿಗಳ ಸಮೀಪದಿಂದ ಫೋಟೊ ತೆಗೆದ ಕಾರಣ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಬಾಲಿವುಡ್ ನಟಿಯು ವನ್ಯಜೀವಿಗಳಿಗೆ ತೊಂದರೆ ಕೊಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ನಟಿ ಕೊಟ್ಟ ಸ್ಪಷ್ಟನೆ ಏನು?
ವನ್ಯಜೀವಿ ಫೋಟೊಗ್ರಫಿಯಲ್ಲಿ ಆಸಕ್ತಿ ಹೊಂದಿರುವ ರವೀನಾ ಟಂಡನ್ ಅವರು ವಿವಾದದ ಕುರಿತು ಸ್ಪಷ್ಟನೆ ನೀಡಿದ್ದಾರೆ. “ಅರಣ್ಯ ಇಲಾಖೆ ಪರವಾನಗಿ ನೀಡಿದ ಜೀಪ್‌ನಲ್ಲಿಯೇ ಸಫಾರಿ ಹೋಗಿದ್ದೆ. ಜೀಪ್‌ನಲ್ಲಿ ಅಧಿಕಾರಿಗಳು, ತಜ್ಞರು ಕೂಡ ಇದ್ದರು. ವಾಹನ ಚಲಿಸುವ ಮಾರ್ಗದ ಹೊರತಾಗಿ ಬೇರೆಲ್ಲೂ ಸಂಚರಿಸಿಲ್ಲ. ಅಷ್ಟಕ್ಕೂ, ಅರಣ್ಯದಲ್ಲಿ ಹುಲಿಗಳು ನಡೆದಿದ್ದೇ ದಾರಿ. ನಾವು ಅವುಗಳ ತಂಟೆಗೆ ಹೋಗಿಲ್ಲ, ತೊಂದರೆ ಕೊಟ್ಟಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ. ರವೀನಾ ಟಂಡನ್ ಚಲಿಸುತ್ತಿದ್ದ ವಾಹನದ ಸಮೀಪವೇ ಹುಲಿಗಳು ಬಂದಿದ್ದು, ಆಗ ಅವರು ಫೋಟೊ ತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪ್ರಕರಣದ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | Vijay Deverakonda | ಇ.ಡಿ ವಿಚಾರಣೆಗೆ ಹಾಜರಾದ ನಟ ವಿಜಯ್ ದೇವರಕೊಂಡ, ಕಾರಣ ಏನು?