ಹೊಸ ದಿಲ್ಲಿ: ಜೂನ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಕಾಯಿದೆಯ (Digital India act) ಕರಡನ್ನು ಬಿಡುಗಡೆ ಮಾಡಲಿದೆ ಎಂದು ವಿದ್ಯುನ್ಮಾನ ಮತ್ತು ಐಟಿ ಸಹಕಾರ ಸಚಿವ ರಾಜೀವ್ ಚಂದ್ರಶೇಖರ್ (Rajiv Chandrashekhar) ತಿಳಿಸಿದ್ದಾರೆ.
ದಶಕಗಳಷ್ಟು ಹಳೆಯದಾದ ಅಂತರ್ಜಾಲ ಕಾನೂನಾಗಿರುವ ಮಾಹಿತಿ ತಂತ್ರಜ್ಞಾನ ಕಾಯಿದೆ-2000 ಅನ್ನು ಬದಲಾಯಿಸಲು ಕೇಂದ್ರ ಮುಂದಾಗಿದೆ. ಸೋಶಿಯಲ್ ಮೀಡಿಯಾ ತಾಣಗಳು ಸೇರಿದಂತೆ ಎಲ್ಲ ಡಿಜಿಟಲ್ ಸೇವೆಗಳನ್ನು ಈ ಕಾಯಿದೆಯ ಮೂಲಕ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಇದಕ್ಕೆ ಸಂಬಂಧಿಸಿದ ಎರಡನೇ ಸಭೆಯನ್ನು ಉದ್ದೇಶಿಸಿ ರಾಜೀವ್ ಮಾತನಾಡಿದರು. ಮೊದಲ ಹಂತದ ಸಭೆ ಮಾರ್ಚ್‌ನಲ್ಲಿ ನಡೆದಿತ್ತು. ಚಾಟ್‌ಜಿಪಿಟಿಯಂಥ ಮುಂದುವರಿದ ತಂತ್ರಜ್ಞಾನಗಳನ್ನು ಕೂಡ ಈ ಹೊಸ ಕಾಯಿದೆ ಉದ್ದೇಶಿಸಲಿದ್ದು, ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಪರಿಶೀಲಿಸಲಿದೆ ಎಂದವರು ಹೇಳಿದ್ದಾರೆ.
ಈಗಾಗಲೇ ರೂಪಿಸಲಾಗಿರುವ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಕಾಯಿದೆ-2022, ಭಾರತೀಯ ದೂರಸಂಪರ್ಕ ಕಾಯಿದೆ- 2022 ಹಾಗೂ ವೈಯಕ್ತಿಕವಲ್ಲದ ಡೇಟಾ ಆಡಳಿತಕ್ಕೆ ಸಂಬಂಧಿಸಿದ ನೀತಿಗಳನ್ನೂ ಒಳಗೊಂಡು ನೂತನ ಡಿಜಿಟಲ್ ಕಾಯಿದೆಯು ಮಹತ್ವದ ತಂತ್ರಜ್ಞಾನ ವಿಧಾಯಕ ಉಪಕ್ರಮ ಎನಿಸಲಿದೆ.
ಐಟಿ ಕಾಯಿದೆ-2000ರ ಅಡಿಯಲ್ಲಿ ಸಾಮಾಜಿಕ ಜಾಲತಾಣಗಳಂಥ ಮಧ್ಯವರ್ತಿ ಸಂಸ್ಥೆಗಳು, ತಮ್ಮ ಬಳಕೆದಾರರು ಸೃಷ್ಟಿಸುವ ಕಂಟೆಂಟ್‌ಗಳಿಗೆ ಹೊಣೆ ಹೊರುವುದರಿಂದ ಕೆಲವು ರಕ್ಷಣೆ ನೀಡಲಾಗಿದೆ. ಸರ್ಕಾರ ನಿರ್ದೇಶಿಸಿದಾಗ ಅಂಥ ಆಕ್ಷೇಪಾರ್ಹ ಕಂಟೆಂಟ್‌ಗಳನ್ನು ತೆಗೆದುಹಾಕಿದರೆ ಮಧ್ಯವರ್ತಿ ಸಂಸ್ಥೆಗಳು ಕಾನೂನು ಕ್ರಮದಿಂದ ರಕ್ಷಣೆ ಪಡೆಯುತ್ತವೆ. ಇಂಥ ರಕ್ಷಣಾ ಕ್ರಮಗಳನ್ನು ಹಾಗೇ ಮುಂದುವರಿಸಬೇಕೋ ಅಥವಾ ಶರತ್ತುಬದ್ಧಗೊಳಿಸಬೇಕೋ ಎಂಬುದು ಕೂಡ ಈ ಕಾಯಿದೆ ಕರಡಿನಲ್ಲಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರ, ಆಡಳಿತಾತ್ಮಕ ನಿಯಂತ್ರಣ ಹೊಂದಿದ ಒಂದು ಸತ್ಯಶೋಧನಾ ಸಂಸ್ಥೆಯನ್ನು ನೇಮಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸರ್ಕಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಫ್ಯಾಕ್ಟ್ ಚೆಕಿಂಗ್‌ಗೆ ಒಳಪಡಿಸುವುದಾಗಿ ಹೇಳಿತ್ತು. ಈ ಸಮಿತಿ ಸೂಚಿಸಿದರೆ ಆಕ್ಷೇಪಾರ್ಹ ವಿಚಾರಗಳನ್ನು ಜಾಲತಾಣದಿಂದ ತೆಗೆಯಬೇಕಾಗುತ್ತದೆ; ಇಲ್ಲವೇ ಕಾನೂನು ಕ್ರಮ ಎದುರಿಸಬೇಕು.
ಇದನ್ನೂ ಓದಿ: Digital Sansad: ಈಗ ಸಂಸತ್ತು ಕೂಡ ಡಿಜಿಟಲ್, ಟ್ಯಾಬ್ಲೆಟ್ ನೋಡಿಯೇ ಸದಸ್ಯರ ಹೆಸರು ಕೂಗಿದ ಧನ್‌ಕರ್