ನವದೆಹಲಿ: ದೇಶದ ಪ್ರತಿಯೊಬ್ಬ ನಾಗರಿಕರ ಡಿಜಿಟಲ್ ಡೇಟಾ ರಕ್ಷಣೆ ದಿಸೆಯಲ್ಲಿ ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ವಿಧೇಯಕಕ್ಕೆ (Data Protection Bill) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯು ಬುಧವಾರ ಅನುಮೋದನೆ ನೀಡಿದೆ. ಜುಲೈ 20ರಿಂದ ಆರಂಭವಾಗುವ ಸಂಸತ್ ಮುಂಗಾರು ಅಧಿವೇಶನದಲ್ಲಿಯೇ ನೂತನ ವಿಧೇಯಕವನ್ನು ಮಂಡಿಸಲಾಗುತ್ತದೆ. ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಿ, ಕಾಯ್ದೆ ರೂಪಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ಕೇಂದ್ರ ಸರ್ಕಾರವು ಇದಕ್ಕೂ ಮೊದಲು ವೈಯುಕ್ತಿಕ ಮಾಹಿತಿ ರಕ್ಷಣಾ ವಿಧೇಯಕ-2019 ರಚಿಸಿ, ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ, ವಿಧೇಯಕದಲ್ಲಿ 81 ತಿದ್ದುಪಡಿಗಳಿಗೆ ಜಂಟಿ ಸಂಸದೀಯ ಸಮಿತಿಯು ಸೂಚಿಸಿದ ಹಿನ್ನೆಲೆಯಲ್ಲಿ ಹಾಗೂ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಿಧೇಯಕವನ್ನು ಹಿಂಪಡೆದಿತ್ತು. ಆದರೆ, ಸಾರ್ವಜನಿಕರು, ತಜ್ಞರು ಸೇರಿ ಹಲವರಿಂದ ಮಾಹಿತಿ ಸಂಗ್ರಹಿಸಿ ನೂತನ ವಿಧೇಯಕವನ್ನು ರಚಿಸಲಾಗಿದೆ.
ಏನಿದು ಡೇಟಾ ಪ್ರೊಟೆಕ್ಷನ್ ಬಿಲ್?
ದೇಶವೀಗ ಡಿಜಿಟಲ್ ಯುಗಕ್ಕೆ ತೆರೆದುಕೊಂಡಿದೆ. ದೇಶದ ಬಹುತೇಕ ನಾಗರಿಕರು ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳು ಕೂಡ ಸಾಮಾನ್ಯ ಎನಿಸಿವೆ. ಹಾಗಾಗಿ, ದೇಶದ ನಾಗರಿಕರೀಗ ಡಿಜಿಟಲ್ ನಾಗರಿಕರಾಗಿದ್ದಾರೆ. ಈ ಡಿಜಿಟಲ್ ನಾಗರಿಕರ ವೈಯಕ್ತಿಕ ಮಾಹಿತಿಯ ರಕ್ಷಣೆಗಾಗಿ ಕಾನೂನು ರೂಪಿಸುವ ಕುರಿತು ಕೇಂದ್ರ ಸರ್ಕಾರ ಸಿದ್ಧಪಡಿಸಿರುವುದೇ ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟಕ್ಷನ್ ವಿಧೇಯಕ ಆಗಿದೆ. ವೈಯಕ್ತಿಕ ಡೇಟಾ ರಕ್ಷಣೆ ಕುರಿತು ಕಾನೂನು ರೂಪಿಸುವ ದಿಸೆಯಲ್ಲಿ ವಿಧೇಯಕ ರಚಿಸಲಾಗಿದೆ.
ಇದನ್ನೂ ಓದಿ: CoWIN Data Leak: ಕೋವಿನ್ ಪೋರ್ಟಲ್‌ನಿಂದ ಡೇಟಾ ಸೋರಿಕೆ: ಬಿಹಾರ ಮೂಲದ ವ್ಯಕ್ತಿ ಬಂಧನ
ದೇಶದ ನಾಗರಿಕರ ಡಿಜಿಟಲ್ ಮಾಹಿತಿ ಸಂಗ್ರಹ, ಬಳಕೆದಾರರ ಹಕ್ಕುಗಳು, ಕರ್ತವ್ಯಗಳು, ಡೇಟಾ ಸಂಗ್ರಹಣೆಯ ವಿಶ್ವಾಸಾರ್ಹತೆ, ಅಪರಾಧಗಳು ನಡೆದಾಗ ಬೇರೆ ದೇಶಗಳಿಗೆ ಡಿಜಿಟಲ್ ಡೇಟಾ ಟ್ರಾನ್ಸ್‌ಫರ್, ಬೇರೆ ದೇಶಗಳಿಂದ ಡೇಟಾ ಪಡೆಯುವುದು, ಕಂಪನಿಗಳು ಡೇಟಾ ಸಂರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು, ನಿಯಮ ಉಲ್ಲಂಘಿಸಿದರೆ ವಿಧಿಸುವ ದಂಡ ಸೇರಿ ನೂತನ ವಿಧೇಯಕವು ಹತ್ತಾರು ಅಂಶಗಳನ್ನು ಹೊಂದಿದೆ. ಹಾಗಾಗಿ, ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್ ಬಿಲ್ ಮಹತ್ವ ಪಡೆದಿದೆ.
2018ರಲ್ಲಿ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ನೇತೃತ್ವದ ಪರಿಣಿತ ಸಮಿತಿ ಈ ಮಸೂದೆಯನ್ನು ರೂಪಿಸಿತ್ತು. ಕೇಂದ್ರ ಸರ್ಕಾರವು 2019 ರಲ್ಲಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. ಅದನ್ನು ಅದೇ ವರ್ಷ ಡಿಸೆಂಬರ್‌ನಲ್ಲಿ ಜಂಟಿ ಸಂಸದೀಯ ಸಮಿತಿಯ ಮುಂದಿಡಲಾಯಿತು. ಸಮಿತಿಯ ವರದಿಗೆ ತಿದ್ದುಪಡಿ ಸೂಚಿಸಿದ ನಂತರ ಡಿಸೆಂಬರ್ 2021 ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಕೊನೆಗೆ ಮೊದಲ ವಿಧೇಯಕವನ್ನು ಹಿಂಪಡೆಯಲಾಗಿತ್ತು.