ನವದೆಹಲಿ: ಭ್ರಷ್ಟಾಚಾರ ಆರೋಪದ ಎದುರಿಸುತ್ತಿದ್ದ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಬುಧವಾರ ತನ್ನ ನಿರ್ದೇಶಕರೊಬ್ಬರನ್ನು ಅಮಾನತುಗೊಳಿಸಿದೆ(Director Suspended). ಭ್ರಷ್ಟಾಚಾರ ಶೂನ್ಯ ನೀತಿಯನ್ನು ಅನುಸರಿಸುತ್ತಿದ್ದೇವೆ. ಯಾವುದೇ ಸಮಸ್ಯೆಯನ್ನು ಯಾವಾಗಲೂ ಕಾನೂನಿಗೆ ಅನುಗುಣವಾಗಿ ಕಠಿಣ ಕ್ರಮಗಳೊಂದಿಗೆ ವ್ಯವಹರಿಸಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವ (Minister of Civil Aviation) ಜ್ಯೋತಿರಾದಿತ್ಯ ಸಿಂಧಿಯಾ (jyotiraditya scindia) ಹೇಳಿದ್ದಾರೆ. ಅಮಾನತು ಆಗಿರುವ ನಿರ್ದೇಶಕ ಕ್ಯಾಪ್ಟನ್ ಅನಿಲ್ ಗಿಲ್ (Anil Gill) ಅವರು ವಿಮಾನಗಳನ್ನೇ ಲಂಚವಾಗಿ ಪಡೆದ ಆರೋಪವನ್ನು ಎದುರಿಸುತ್ತಿದ್ದರು (aircraft as a bribe).
ಡಿಜಿಸಿಎ ನಿರ್ದೇಶಕ ಕ್ಯಾಪ್ಟನ್ ಅನಿಲ್ ಗಿಲ್ ಅವರ ವಿರುದ್ಧದ ಲಂಚದ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ಮತ್ತು ಜಾರಿ ನಿರ್ದೇಶನಾಲಯಕ್ಕೆ (ED) ವರ್ಗಾಯಿಸಲು ವಿಮಾನಯಾನ ನಿಯಂತ್ರಕರು ಸಚಿವಾಲಯವನ್ನು ಕೋರಿದ ಕೆಲವೇ ದಿನಗಳ ಬೆನ್ನಲ್ಲೇ ಸಚಿವಾಲಯವು ಈ ನಿರ್ಧಾರವನ್ನು ಕೈಗೊಂಡಿದೆ.
ಇತ್ತೀಚೆಗಷ್ಟೇ ಏರೋಸ್ಪೋರ್ಟ್ಸ್ ವಿಭಾಗಕ್ಕೆ ಮರುನಿಯೋಜನೆಗೊಂಡಿದ್ದ ಗಿಲ್ ವಿರುದ್ಧ ಸಚಿವಾಲಯ ಮತ್ತು ಡಿಜಿಸಿಎಗಳಿಗೆ ಅನಾಮಧೇಯ ಮೇಲ್‌ಗಳು ಬಂದಿದ್ದವು. ಈ ಕುರಿತು ತನಿಖೆ ನಡೆಸಲಾಗಿತ್ತು. ಗಿಲ್ ಅವರು ಪೈಪರ್ ಪಿಎ-28 ಏರ್‌ಕ್ರಾಫ್ಟ್‌ನಲ್ಲಿ ತರಬೇತಿಗಾಗಿ ಜೆಕ್ ರಿಪಬ್ಲಿಕ್‌ಗೆ ಕಳುಹಿಸಲು ಸ್ಕೈನೆಕ್ಸ್ ಏರೋಫ್ಲೈಟ್ ಸೊಲ್ಯೂಷನ್ಸ್ (ಡಿಜಿಸಿಎಯಿಂದ ಅನುಮೋದಿತ ಎಫ್‌ಟಿಒ) ಎಂಬ ಕಂಪನಿಯನ್ನು, ಅಗತ್ಯವಿಲ್ಲದಿದ್ದರೂ ಮಾಡಿದ್ದರು ಎಂದು ಇಮೇಲ್‌ನಲ್ಲಿ ಆರೋಪಿಸಲಾಗಿತ್ತು.
ಗಿಲ್ ತಮ್ಮ ಬೇನಾಮಿ ಕಂಪನಿಯಾದ ಸೇಬರ್ಸ್ ಕಾರ್ಪೊರೇಟ್ ಸೊಲ್ಯೂಷನ್ಸ್ ಮತ್ತು ವಿಮಾನ ತಯಾರಕ (ಬ್ರಿಸ್ಟೆಲ್ ಏರ್‌ಕ್ರಾಫ್ಟ್) ನಡುವಿನ ಡೀಲರ್‌ಶಿಪ್ ಸಂಬಂಧಗಳನ್ನು ಕಾರ್ಯಗತಗೊಳಿಸಲು ತಮ್ಮ ಅಧಿಕಾರವನ್ನು ಬಳಸಿದ್ದಾರೆ. ಅಲ್ಲದೇ ವಿದೇಶೀ ವಿನಿಮಯದಲ್ಲಿ ಕಮಿಷನ್ ಪಡೆಯುತ್ತಿದ್ದರು. ಆದರೆ, ಎಫ್‌ಟಿಒಗೆ ನೇರವಾಗಿ ವಿಮಾನಗಳನ್ನು ಪೂರೈಸುವ ಒಪ್ಪಂದವಿದ್ದರೂ ಅವರು ಕಮಿಷನ್ ಪಡೆಯುತ್ತಿದ್ದರು ಎಂದು ಇ ಮೇಲ್‌ನಲ್ಲಿ ಆರೋಪಿಸಲಾಗಿತ್ತು.
ಗಿಲ್ ವಿರುದ್ಧ ಬರೆಯಲಾಗಿದ್ದ ಎರಡನೇ ಅನಾಮಧೇಯ ಇಮೇಲ್‌ನಲ್ಲಿ, ಗಿಲ್ ನಡೆಸುತ್ತಿರುವ ವ್ಯವಹಾರವು ನೇರವಾಗಿ ವಿದೇಶ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ಆರೋಪಿಸಲಾಗಿತ್ತು. ಗಿಲ್ ಅವರು ಲಂಚವಾಗಿ ವಿಮಾನವನ್ನು ಪಡೆದುಕೊಂಡ ಆರೋಪ ಹಾಗೂ ಇತರ ಸಮಸ್ಯೆಗಳಿಂದಾಗಿ ಅವರನ್ನು ಎಫ್‌ಟಿಯಿಂದ ಏರೋಸ್ಪೋರ್ಟ್ಸ್‌ಗೆ ವರ್ಗಾವಣೆ ಮಾಡಲಾಗಿತ್ತು.
ಫ್ಲೈಯಿಂಗ್ ಸ್ಕೂಲ್‌ಗಳಿಂದ ಮೂರು ವಿಮಾನಗಳನ್ನು ಲಂಚವಾಗಿ ತೆಗೆದುಕೊಳ್ಳಲು ಕ್ಯಾಪ್ಟನ್ ಗಿಲ್ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದರು ಮತ್ತು ಆ ವಿಮಾನಗಳನ್ನು ವಿವಿಧ ತರಬೇತಿ ಶಾಲೆಗಳಿಗೆ 90 ಲಕ್ಷ ರೂ.ಗೆ ಲೀಸ್ ನೀಡಿದ್ದರು ಎಂದು ಆರೋಪಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: ವಿಮಾನದ ಪೈಲಟ್, ಸಿಬ್ಬಂದಿ ಪರ್ಫ್ಯೂಮ್ ಬಳಸುವಂತಿಲ್ಲ! ಡಿಜಿಸಿಎ ಹೊಸ ರೂಲ್ಸ್?