ನವದೆಹಲಿ: ಪ್ರಧಾನಿ ಕನಸು ಕಾಣುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿರುವ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೆ ಹಿನ್ನಡೆಯಾಗಿದೆ. ರಾಷ್ಟ್ರವ್ಯಾಪಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ಈಶಾನ್ಯ ಭಾರತದ ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯಗಳಲ್ಲೂ ಟಿಎಂಸಿ ಸ್ಪರ್ಧೆ ಮಾಡಿತ್ತು. ಆದರೆ, ರಿಸಲ್ಟ್ ಪ್ರಕಟವಾದಾಗ(Election Results), ಗೋವಾ ಫಲಿತಾಂಶವೇ ರಿಪೀಟ್ ಆಗಿದೆ!
ಮೇಘಾಲಯದಲ್ಲಿ 5 ಸೀಟು ಗೆಲುವು
ತ್ರಿಪುರಾದಲ್ಲಿ ಟಿಎಂಸಿ ಖಾತೆ ತೆರೆಯಲು ವಿಫಲವಾಗಿದೆ. ಇನ್ನೂ ಮೇಘಾಲಯದಲ್ಲಿ ಕೇವಲ ಐದು ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಟಿಎಂಸಿ ಯಶಸ್ವಿಯಾಗಿದೆ. ಎನ್‌ಪಿಪಿಯನ್ನು ಸೋಲಿಸಿ, ಮೇಘಾಲಯದಲ್ಲಿ ಅಧಿಕಾರ ಹಿಡಿಯುವ ಪ್ರಮುಖ ಗುರಿಯೊಂದಿಗೆ ಟಿಎಂಸಿ 57 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.
ತ್ರಿಪುರಾದಲ್ಲಿ ಖಾತೆ ತೆರೆಯಲಿಲ್ಲ ಟಿಎಂಸಿ
ಪಶ್ಚಿಮ ಬಂಗಾಳದ ಸ್ಥಿತಿಯನ್ನೇ ಹೋಲುವ ತ್ರಿಪುರಾದಲ್ಲಿ ತನ್ನ ಅಸ್ತಿತ್ವವನ್ನು ಹಿಗ್ಗಿಸಿಕೊಳ್ಳುವುದಕ್ಕಾಗಿ ಟಿಎಂಸಿ ವಿಶೇಷ ಪ್ರಯತ್ನ ಮಾಡಿತ್ತು. 2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ಗೆದ್ದ ಬಳಿಕ ಈಶಾನ್ಯ ಭಾರತದಿಂದ ಬಿಜೆಪಿಯನ್ನು ಕಿತ್ತು ಹಾಕುವ ಶಕ್ತಿ ಟಿಎಂಸಿಗೇ ಇದೆ ಎಂದು ನಾಯಕ ಅಭಿಷೇಕ ಬ್ಯಾನರ್ಜಿ ಅವರು ಹೇಳಿದ್ದರು. ಆದರೆ, ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಮಾತ್ರವೇ ಸ್ಪರ್ಧಿಸಿದ್ದ ಟಿಎಂಸಿ ಒಂದೂ ಸೀಟು ಗೆಲ್ಲಲಿಲ್ಲ.
ಇದನ್ನೂ ಓದಿ: North East Election Results: ಬಿಜೆಪಿ ಬೆಂಬಲಿಸಿದ ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯ ಜನರಿಗೆ ಮೋದಿ ಧನ್ಯವಾದ
ಗೋವಾ ಫಲಿತಾಂಶ ರಿಪೀಟ್
ಗೋವಾದಲ್ಲಿ ತನ್ನ ಪಕ್ಷವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರು ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಅದರ ಪರಿಣಾಮ, 2022 ಫೆಬ್ರವರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಅತ್ಯುತ್ಸಾಹದಿಂದಲೇ ಸ್ಪರ್ಧಿಸಿತ್ತು. ಹಲವು ಕಾಂಗ್ರೆಸ್ ನಾಯಕರನ್ನು ಸೆಳೆದುಕೊಂಡಿತ್ತು. ಆದರೆ, ರಿಸಲ್ಟ್ ಪ್ರಕಟವಾದಾಗ ಶೂನ್ಯ ಸಾಧನೆ ಮಾಡಿತ್ತು.