ನವದೆಹಲಿ: ಚುನಾವಣಾ ಬಾಂಡ್‌ಗಳ (Electoral Bonds) ಕುರಿತು ಮಾಹಿತಿ ನೀಡಲು ಹೆಚ್ಚಿನ ಕಾಲಾವಕಾಶ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court), ನಾಳೆಯೊಳಗೆ (ಮಾರ್ಚ್ 12) ಚುನಾವಣೆ ಬಾಂಡ್‌ಗಳ ಕುರಿತು ಎಸ್‌ಬಿಐ ಮಾಹಿತಿ ಒದಗಿಸಬೇಕು ಎಂದು ಆದೇಶಿಸಿದೆ. ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ನೀಡಲು ಜೂನ್ 30ರವರೆಗೆ ಹೆಚ್ಚುವರಿ ಕಾಲಾವಕಾಶ ಬೇಕು ಎಂದು ಎಸ್‌ಬಿಐ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಮಂಗಳವಾರ ಸಂಜೆಯೊಳಗೆ ಚುನಾವಣೆ ಬಾಂಡ್‌ಗಳ ಕುರಿತ ಮಾಹಿತಿಯನ್ನು ನೀಡಬೇಕು ಎಂದು ಆದೇಶಿಸಿತು.
“ಮಂಗಳವಾರದ ಕೆಲಸದ ಅವಧಿಯಲ್ಲಿಯೇ (Business Hours) ಚುನಾವಣಾ ಬಾಂಡ್‌ಗಳ ಕುರಿತು ಎಸ್‌ಬಿಐ, ಚುನಾವಣೆ ಆಯೋಗಕ್ಕೆ ಮಾಹಿತಿ ನೀಡಬೇಕು. ಇನ್ನು ಚುನಾವಣೆ ಆಯೋಗವು ಮಾರ್ಚ್ 15ರ ಸಂಜೆ 5 ಗಂಟೆಯೊಳಗೆ ಎಸ್‌ಬಿಐ ನೀಡಿದ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು” ಎಂದು ಆದೇಶಿಸಿತು. ಇದರಿಂದಾಗಿ ಹೆಚ್ಚಿನ ಕಾಲಾವಧಿ ಬೇಕು ಎಂದು ಅರ್ಜಿ ಸಲ್ಲಿಸಿದ ಎಸ್‌ಬಿಐಗೆ ತೀವ್ರ ಹಿನ್ನಡೆಯಾದಂತಾಗಿದೆ.
Supreme Court dismisses an application of State Bank of India (SBI) seeking an extension of time till June 30 to submit details of Electoral Bonds to the Election Commission of India.
— ANI (@ANI) March 11, 2024
Court asks SBI to disclose the details of Electoral Bonds by the close of business hours on… pic.twitter.com/f91v4no7MM
ಎರಡು ವಿಭಾಗಗಳಲ್ಲಿ ಮಾಹಿತಿ ನೀಡಲು ಸೂಚನೆ
ಎರಡು ವಿಭಾಗಗಳಲ್ಲಿ ಎಸ್‌ಬಿಐ ಮಾಹಿತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಒಂದು ವಿಭಾಗದಲ್ಲಿ, ಚುನಾವಣೆ ಬಾಂಡ್‌ಗಳನ್ನು ಖರೀದಿಸಿ ದೇಣಿಗೆ ನೀಡಿದವರ ಮಾಹಿತಿ, ಹೆಸರು, ಅವರು ನೀಡಿದ ಮೊತ್ತದ ದಾಖಲೆ ಇರಬೇಕು. ಇನ್ನು, ಎರಡನೇ ಭಾಗದಲ್ಲಿ ರಾಜಕೀಯ ಪಕ್ಷಗಳು ಬಾಂಡ್‌ಗಳ ಮೂಲಕ ದೇಣಿಗೆಯನ್ನು ನಗದೀಕರಣ (Redeem) ಮಾಡಿಕೊಂಡಿರುವ ಕುರಿತು ಮಾಹಿತಿ ಇರಬೇಕು ಎಂದು ಸೂಚಿಸಿದೆ.
ಎಸ್‌ಬಿಐ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್. ಗವಾಯಿ, ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸಿತು. ಎಸ್‌ಬಿಐ ಪರ ಹರೀಶ್ ಸಾಳ್ವೆ ವಾದ ಮಂಡಿಸಿದರು. “ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ನೀಡಲು ಇನ್ನಷ್ಟು ಸಮಯ ಬೇಕು. ಎಲ್ಲ ಮಾಹಿತಿಯನ್ನು ಒಗ್ಗೂಡಿಸಿ ಚುನಾವಣೆ ಆಯೋಗಕ್ಕೆ ನೀಡಲಾಗುತ್ತದೆ. ಅದಕ್ಕಾಗಿ ಸಮಯ ಬೇಕು” ಎಂದು ವಾದ ಮಂಡಿಸಿದರು.
ಎಸ್‌ಬಿಐ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅಸಮಾಧಾನ ವ್ಯಕ್ತಪಡಿಸಿತು. “ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರ ಕುರಿತು ಮಾಹಿತಿ ಒದಗಿಸಬೇಕು ಎಂದು ಫೆಬ್ರವರಿ 15ರಂದೇ ತೀರ್ಪು ನೀಡಲಾಗಿದೆ. ಎಸ್‌ಬಿಐ ಇದುವರೆಗೆ ಏನು ಮಾಡಿತು? ಇಷ್ಟು ದಿನವಾದರೂ ಏಕೆ ಮಾಹಿತಿ ಸಂಗ್ರಹಿಸಲು ಆಗಲಿಲ್ಲ? ಅಷ್ಟಕ್ಕೂ, ಮುಚ್ಚಿದ ಲಕೋಟೆಯಲ್ಲಿ ಏನಿದೆ? ಅದನ್ನು ಮೊದಲು ಬಹಿರಂಗಪಡಿಸಿ. ಎಸ್‌ಬಿಐ ನೀಡಿದ ಡೆಡ್‌ಲೈನ್ ಮುಗಿಯಲು ಎರಡು ದಿನ ಬಾಕಿ ಇರುವಾಗ ಹೆಚ್ಚಿನ ಸಮಯ ಬೇಕು ಎಂದು ಅರ್ಜಿ ಸಲ್ಲಿಸಿದ್ದೀರಿ. ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕು ಎಂದು ಸಲ್ಲಿಸಲಾಗಿದೆ” ಎಂದು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು.
22,217 ಚುನಾವಣಾ ಬಾಂಡ್‌ಗಳ ಮಾರಾಟದ ಕುರಿತು ಎಲ್ಲ ಮಾಹಿತಿ ಸಂಗ್ರಹಿಸಲು ಇನ್ನಷ್ಟು ಸಮಯ ಬೇಕು ಎಂದು ಸಪ್ರೀಂ ಕೋರ್ಟ್‌ಗೆ ಎಸ್‌ಬಿಐ ಮನವಿ ಮಾಡಿತ್ತು. ಫೆಬ್ರವರಿ 15ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ತೀರ್ಪಿನ ಪ್ರಕಾರ, ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ಗಳ ಕುರಿತು ಮಾಹಿತಿ ನೀಡಬೇಕಿತ್ತು. ಅಷ್ಟೇ ಅಲ್ಲ, ವೆಬ್‌ಸೈಟ್‌ನಲ್ಲಿ ದೇಣಿಗೆ ನೀಡಿದವರ ಮಾಹಿತಿಯನ್ನು ಮಾರ್ಚ್ 13ರೊಳಗೆ ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕಿತ್ತು. ಕೊನೆಗೆ ನ್ಯಾಯಾಲಯವು, ಜೂನ್ 30ರವರೆಗೆ ಕಾಲಾವಕಾಶ ಕೋರಿದ್ದ ಎಸ್‌ಬಿಐ ಅರ್ಜಿಯನ್ನು ತಿರಸ್ಕರಿಸಿ, ಮಂಗಳವಾರ ಸಂಜೆಯೊಳಗೆ ಮಾಹಿತಿ ಒದಗಿಸಬೇಕು ಎಂದು ಆದೇಶಿಸಿತು.
ಏನಿದು ಚುನಾವಣಾ ಬಾಂಡ್ ಯೋಜನೆ?
ಚುನಾವಣಾ ಬಾಂಡ್ ಯೋಜನೆಯನ್ನು 2017ರಲ್ಲಿ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಅಧಿವೇಶನದಲ್ಲಿ ಮೊದಲು ಪ್ರಸ್ತಾಪಿಸಿದ್ದರು. ಹಣಕಾಸು ಕಾಯ್ದೆ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಗಳಿಗೆ ತಿದ್ದುಪಡಿ ತಂದು 2018ರ ಜನವರಿಯಲ್ಲಿ ಚುನಾವಣಾ ಬಾಂಡ್ ಯೋಜನೆ ಜಾರಿ ಕುರಿತು ಅಧಿಸೂಚನೆ ಹೊರಡಿಸಲಾಗಿತ್ತು. ಆ ಮೂಲಕ ಚುನಾವಣಾ ಬಾಂಡ್ ಯೋಜನೆ ಜಾರಿಗೊಳಿಸಲಾಗಿತ್ತು.
ಇದನ್ನೂ ಓದಿ: Election Commission: ಪ್ರಧಾನಿ ಮೋದಿ ನೇತೃತ್ವದಲ್ಲಿ ಮಾ. 15ರೊಳಗೆ ನೂತನ ಚುನಾವಣಾ ಆಯುಕ್ತರ ನೇಮಕ
ಚುನಾವಣಾ ಬಾಂಡ್ ಯೋಜನೆ ಅಡಿಯಲ್ಲಿ ಭಾರತದ ನಾಗರಿಕ ಅಥವಾ ಭಾರತದಲ್ಲಿ ನೋಂದಣಿಯಾದ ಕಂಪನಿಯು ಯಾವುದೇ ರಾಜಕೀಯ ಪಕ್ಷಕ್ಕೆ ಚುನಾವಣೆ ಬಾಂಡ್‌ಗಳನ್ನು ಖರೀದಿಸುವ ಮೂಲಕ ದೇಣಿಗೆ ನೀಡಬಹುದಾಗಿತ್ತು. ಭಾರತೀಯ ಸ್ಟೇಟ್ ಬ್ಯಾಂಕ್‌ನ (SBI) ಆಯ್ದ ಶಾಖೆಗಳಲ್ಲಿ 1 ಸಾವಿರ, 10 ಸಾವಿರ, ಲಕ್ಷ, 10 ಲಕ್ಷ ಹಾಗೂ 1 ಕೋಟಿ ರೂ.ವರೆಗೆ ಚುನಾವಣೆ ಬಾಂಡ್ ಖರೀದಿಸಿ ದೇಣಿಗೆ ನೀಡಬಹುದಾಗಿತ್ತು. ಇಲ್ಲಿ ದೇಣಿಗೆ ನೀಡಿದವರ ಕುರಿತು ಯಾವುದೇ ಮಾಹಿತಿ ಬಹಿರಂಗವಾಗುತ್ತಿರಲಿಲ್ಲ. ಹಾಗೆಯೇ, ಇಷ್ಟು ಮೊತ್ತದ ದೇಣಿಗೆಗೆ ತೆರಿಗೆಯಿಂದ ವಿನಾಯಿತಿ ನೀಡಲಾಗಿತ್ತು. ಹಾಗಾಗಿ ಇದು ವಿವಾದಕ್ಕೆ ಗುರಿಯಾಗಿತ್ತು. ಬಳಿಕ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ