ನವದೆಹಲಿ: ರಾಜಕೀಯದಲ್ಲಿ ಸರಿಯಾದ ಸ್ಥಾನಮಾನ ಸಿಗದಿದ್ದರೆ, ಚುನಾವಣೆ ವೇಳೆ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಆ ಪಕ್ಷದ ವಿರುದ್ಧ ಬಂಡಾಯವೇಳುವುದು, ನಾಯಕರ ವಿರುದ್ಧವೇ ಮಾತನಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ (MCD Election 2022) ಸ್ಪರ್ಧಿಸಲು ಪಕ್ಷವು ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷದ ಮುಖಂಡರೊಬ್ಬರು ಟ್ರಾನ್ಸ್‌ಮಿಷನ್ ಟವರ್ ಹತ್ತಿ ಕೂತಿದ್ದಾರೆ. ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡು ಅವರು ಹೀಗೆ ಮಾಡಿದ್ದು, ಅವರು ಟವರ್ ಹತ್ತಿ ಕುಳಿತ ವಿಡಿಯೊ ವೈರಲ್ (Viral Video) ಆಗಿದೆ.
ದೆಹಲಿ ಮಹಾನಗರ ಪಾಲಿಕೆಯ ಮಾಜಿ ಕೌನ್ಸಿಲರ್ ಆದ ಆಪ್ ಮುಖಂಡ ಹಸೀಬ್ ಉಲ್ ಹಸನ್ (Haseeb-ul-Hasan) ಅವರಿಗೆ ಪಕ್ಷವು ಟಿಕೆಟ್ ನಿರಾಕರಿಸಿದೆ. ಇದರಿಂದ ಹತಾಶಗೊಂಡ ಅವರು ಶಾಸ್ತ್ರಿ ಪಾರ್ಕ್ ಮೆಟ್ರೋ ಸ್ಟೇಷನ್ ಬಳಿಯ ಟ್ರಾನ್ಸ್‌ಮಿಷನ್ ಟವರ್ ಹತ್ತಿದ್ದಾರೆ. ಇದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ಡಿಸೆಂಬರ್ 4ರಂದು ಎಂಸಿಡಿ ಚುನಾವಣೆ ನಡೆಯಲಿದ್ದು, ಆಪ್ 117 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.
ಟವರ್ ಮೇಲಿನಿಂದಲೇ ಸುದ್ದಿಗಾರರೊಂದಿಗೆ ಮಾತನಾಡಿದ ಹಸೀಬ್ ಉಲ್ ಹಸನ್, “ನನಗೆ ಪಕ್ಷದಲ್ಲಿ ಮೋಸ ಮಾಡಿದ್ದಾರೆ. ದುರ್ಗೇಶ್ ಪಾಠಕ್, ಆತಿಶಿ ಹಾಗೂ ಸಂಜಯ್ ಸಿಂಗ್ ಅವರು ನನಗೆ ಟಿಕೆಟ್ ನೀಡಿಲ್ಲ. ಟಿಕೆಟ್ ನೀಡಲು ನನ್ನ ಬಳಿ ಹಣ ಕೇಳಿದರು. ಇದಕ್ಕೆ ನನ್ನ ಬಳಿ ಹಣ ಇಲ್ಲ ಎಂದೆ. ಆದರೆ, ಅವರು ಮೂರು ಕೋಟಿ ರೂ. ಪಡೆದು ದೀಪು ಚೌಧರಿ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ | Jagdish Tytler | ಸಿಖ್ ವಿರೋಧಿ ದಂಗೆ ಆರೋಪಿ ಜಗದೀಶ್ ಟೈಟ್ಲರ್‌ಗೆ ಚುನಾವಣೆ ಸಮಿತಿ ಹುದ್ದೆ ನೀಡಿದ ಕಾಂಗ್ರೆಸ್