Site icon Vistara News

Rahul Gandhi: ಅನರ್ಹನಾದ ಬಳಿಕವೇ ನನಗೆ ಹೆಚ್ಚುಅವಕಾಶ: ಅಮೆರಿಕದಲ್ಲಿ ರಾಹುಲ್‌ ಗಾಂಧಿ ಹೇಳಿಕೆ

Rahul Gandhi Speech At Stanford University

Disqualification As MP Gave Me Huge Opportunity To Serve: Says Rahul Gandhi

ಕ್ಯಾಲಿಫೋರ್ನಿಯಾ: ಅಮೆರಿಕ, ಬ್ರಿಟನ್‌ ಸೇರಿ 10 ದಿನಗಳ ವಿದೇಶ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ (Rahul Gandhi) ಸದ್ಯ ಅಮೆರಿಕದ ಹಲವು ನಗರಗಳಲ್ಲಿ, ವಿಶ್ವವಿದ್ಯಾಲಯಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿರುವ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾರತದ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಅವರು, “ನಾನು ಲೋಕಸಭೆಯಿಂದ ಅನರ್ಹನಾದ ಬಳಿಕವೇ ಹೆಚ್ಚು ಅವಕಾಶಗಳು ದೊರೆತಿವೆ” ಎಂದು ಹೇಳಿದ್ದಾರೆ.

ಅನರ್ಹತೆ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು 2000ನೇ ಇಸವಿಯಲ್ಲಿ ರಾಜಕೀಯ ಪ್ರವೇಶಿಸಿದಾಗ, ನಾನು ಅನರ್ಹನಾಗುತ್ತೇನೆ, ನನಗೂ ಒಂದು ದಿನ ಅಂತಹ ಪರಿಸ್ಥಿತಿ ಬರುತ್ತದೆ ಎಂದು ಭಾವಿಸಿರಲಿಲ್ಲ. ಆದರೆ, ನಾನು ಲೋಕಸಭೆಯಿಂದ ಅನರ್ಹಗೊಂಡ ಬಳಿಕ ಹೆಚ್ಚಿನ ಅವಕಾಶಗಳು ಸಿಗುತ್ತಿವೆ. ನಾನು ಸಂಸದನಾಗಿದ್ದಾಗ ಸಿಗುತ್ತಿರುವುದಕ್ಕಿಂತ ಹೆಚ್ಚು ಅವಕಾಶಗಳು ಸಿಕ್ಕಿವೆ. ರಾಜಕೀಯ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಇದೇ ನಿದರ್ಶನ” ಎಂದು ತಿಳಿಸಿದರು.

ವಿದ್ಯಾರ್ಥಿಗಳೊಂದಿಗೆ ರಾಹುಲ್‌ ಗಾಂಧಿ ಸಂವಾದ

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು 2019ರಲ್ಲಿ ಮಾನಹಾನಿಯಾಗುವ ರೀತಿಯಲ್ಲಿ ರಾಹುಲ್‌ ಗಾಂಧಿ ಅವರು ಕರ್ನಾಟಕದಲ್ಲಿ ಭಾಷಣ ಮಾಡಿದ್ದರು. ರಾಹುಲ್‌ ಗಾಂಧಿ ವಿರುದ್ಧ ಸೂರತ್‌ನಲ್ಲಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಅದರಂತೆ, ರಾಹುಲ್‌ ಗಾಂಧಿ ಅವರು ದೋಷಿ ಎಂದು ಕೆಲ ತಿಂಗಳ ಹಿಂದೆ ಸೂರತ್‌ ನ್ಯಾಯಾಲಯ ತೀರ್ಪು ನೀಡಿದೆ. ಹಾಗಾಗಿ, ರಾಹುಲ್‌ ಗಾಂಧಿ ಲೋಕಸಭೆಯಿಂದ ಅನರ್ಹಗೊಂಡಿದ್ದಾರೆ.

“ಆರು ತಿಂಗಳ ಹಿಂದೆಯೇ ಡ್ರಾಮಾ ಶುರುವಾಯಿತು. ಆರು ತಿಂಗಳ ಹಿಂದೆ ನಾವು ಹೋರಾಟ ನಡೆಸುತ್ತಿದ್ದೆವು. ದೇಶದಲ್ಲಿ ಎಲ್ಲ ಪ್ರತಿಪಕ್ಷಗಳು ಸಂಕಷ್ಟದಲ್ಲಿದ್ದವು. ಹಣಕಾಸು ತೊಂದರೆ ಉಂಟಾಗಿತ್ತು. ಸರ್ಕಾರಿ ಸಂಸ್ಥೆಗಳನ್ನು ನಿಯಂತ್ರಿಸಲಾಗುತ್ತಿತ್ತು. ಅವುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಾವು ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಸಲು ಹೋರಾಡಲು ಕೂಡ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಗ, ನಾನು ಭಾರತ್‌ ಜೋಡೋ ಯಾತ್ರೆ ಆರಂಭಿಸಲು ತೀರ್ಮಾನಿಸಿದೆ” ಎಂದು ಹೇಳಿದರು.

ಇದನ್ನೂ ಓದಿ: Rahul Gandhi: ಅಮೆರಿಕದಲ್ಲಿ ರಾಹುಲ್‌ ಗಾಂಧಿ ಭಾಷಣದ ವೇಳೆ ಖಲಿಸ್ತಾನ್‌ ಜಿಂದಾಬಾದ್‌ ಘೋಷಣೆ; ವಿಡಿಯೊ ವೈರಲ್

ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ

“ನಮ್ಮ ಹೋರಾಟ ನಮ್ಮದು ಎಂಬ ಸ್ಪಷ್ಟ ವಿಚಾರ ನನ್ನಲ್ಲಿದೆ. ಆದರೆ, ಭಾರತೀಯ ವಿದ್ಯಾರ್ಥಿಗಳ ತಂಡ ಇಲ್ಲಿದೆ. ನಾನು ವಿದ್ಯಾರ್ಥಿಗಳ ಜತೆ ಉತ್ತಮ ಸಂಬಂಧ ಇಟ್ಟುಕೊಳ್ಳುತ್ತೇನೆ ಹಾಗೂ ಅವರ ಜತೆ ಸಂವಾದ ನಡೆಸಲು ಇಷ್ಟಪಡುತ್ತೇನೆ. ನಾನು ಅಮೆರಿಕಕ್ಕೆ ಪದೇಪದೆ ಬರುತ್ತೇನೆ ಎಂದ ಮಾತ್ರಕ್ಕೆ, ನನಗೆ ಬೆಂಬಲ ಬೇಕು ಎಂದು ಅರ್ಥವಲ್ಲ. ನಿಮ್ಮ ಜತೆ ಉತ್ತಮ ಸಂಬಂಧಕ್ಕಾಗಿ ಬರುತ್ತೇನೆ. ಖಂಡಿತವಾಗಿಯೂ, ಇಲ್ಲಿಗೆ ಪ್ರಧಾನಮಂತ್ರಿ ಬಂದು ನಿಮ್ಮ ಜತೆ ಮಾತನಾಡಲಾರರು” ಎಂದು ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದರು.

ದೇಶದ ಮತ್ತಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Exit mobile version