ನವದೆಹಲಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ (CM Eknath Shinde) ಸೇರಿದಂತೆ ಹಲವು ಶಾಸಕರ (MLAs) ವಿರುದ್ಧ ಅನರ್ಹತೆಯ ಅರ್ಜಿಗಳ (Disqualification petitions) ವಿಚಾರಣೆಗೆ ಸ್ಪೀಕರ್ (Maharashtra Speaker) ಅವರಿಗೆ ನಿಗದಿ ಮಾಡಿದ್ದ ಗಡುವನ್ನು ಸುಪ್ರೀಂ ಕೋರ್ಟ್ (Supreme Court) ಜನವರಿ 10ವರೆಗೆ ವಿಸ್ತರಿಸಿದೆ. ಸಿಎಂ ಏಕನಾಥ ಶಿಂಧೆ ಹಾಗೂ ಅವರ ಕ್ಯಾಂಪಿನ ಶಾಸಕರ ಅನರ್ಹತೆಯ ಅರ್ಜಿ ವಿಚಾರಗೆ ಸ್ಪೀಕರ್ ಅಂತಿಮ ನಿರ್ಧಾರವನ್ನು ಕೈಗೊಳ್ಳಲೇಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದಕ್ಕೂ ಮೊದಲು ಡಿಸೆಂಬರ್ 30ರೊಳಗೇ ಅನರ್ಹತೆಯ ಅರ್ಜಿಗಳನ್ನು ವಿಚಾರಣೆ ಮಾಡುವಂತೆ ಸುಪ್ರೀಂ ಕೋರ್ಟ್ ಮಹಾರಾಷ್ಟ್ರದ ವಿಧಾನಸಭೆಯ ಸ್ಪೀಕರ್ ಅವರಿಗೆ ಸೂಚಿಸಿತ್ತು. ಆದರೆ, ಈ ಅರ್ಜಿಗಳ ವಿಚಾರಣೆಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಸ್ಪೀಕರ್ ನಾರ್ವೇಕರ್ ಅವರು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರಿದ್ದ ಪೀಠವು ಈಗ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದು ಜನವರಿ 10ರೊಳಗೆ ಸ್ಪೀಕರ್ ಅವರು ತಮ್ಮ ಮುಂದಿರುವ ಅನರ್ಹತೆಯ ಅರ್ಜಿಗಳನ್ನು ವಿಲೇವಾರಿ ಮಾಡಲೇಬೇಕು ಎಂದು ತಿಳಿಸಿದೆ.
ಡಿಸೆಂಬರ್ 20ಕ್ಕೆ ವಿಧಾನಸಭೆ ಕಲಾಪ ಮುಗಿಯಲಿದೆ ಎಂದು ಸ್ಪೀಕರ್ ಅವರು ಸೂಚಿಸಿದ್ದಾರೆ ಮತ್ತು ಹಾಗಾಗಿ, ಇನ್ನಷ್ಟು ಸಮಯವನ್ನು ಅವರು ಕೋರಿದ್ದಾರೆ. ಈ ಹಿಂದೆ ನಿಗದಿಪಡಿಸಿದ ಸಮಯದ ಮಿತಿಯನ್ನು ಗಮನದಲ್ಲಿಟ್ಟುಕೊಂಡು, ತೀರ್ಪು ನೀಡಲು ಸ್ಪೀಕರ್‌ಗೆ ನಾವು ಜನವರಿ 10 ರವರೆಗೆ ಸಮಯವನ್ನು ವಿಸ್ತರಿಸುತ್ತೇವೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರು ಹೇಳಿದರು.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು ಅವರ ಪಾಳಯದಲ್ಲಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆಯ ಉದ್ಧವ್ ಠಾಕ್ರೆ ಬಣ ಮತ್ತು ಎನ್‌ಸಿಪಿಯ ಶರದ್ ಪವಾರ್ ಬಣದಿಂದ ಅರ್ಜಿ ಸಲ್ಲಿಸಲಾಗಿದೆ. ಆದರೆ, ಸ್ಪೀಕರ್ ಅವರು ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದ್ದರಿಂದ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
2022ರ ಜೂನ್ ತಿಂಗಳಲ್ಲಿ ಹೊಸ ಸರ್ಕಾರ ರಚಿಸಲು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಏಕನಾಥ್ ಶಿಂಧೆ ಮತ್ತು ಶಿವಸೇನಾ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ತೀರ್ಪಿನ ವೇಳಾಪಟ್ಟಿಯನ್ನು ವಿವರಿಸಲು ಸೆಪ್ಟೆಂಬರ್ 18 ರಂದು ಪೀಠವು ಸ್ಪೀಕರ್‌ಗೆ ಸೂಚಿಸಿತ್ತು. ಏಕನಾಥ್ ಶಿಂಧೆ ಹಾಗೂ ಡಜನ್‌ಗೂ ಹೆಚ್ಚು ಶಿವಸೇನೆಯ ಶಾಸಕರು ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ಬಂಡಾಯ ಎದ್ದು, ಬಿಜೆಪಿಯನ್ನು ಸೇರಿದ್ದರು. ಬಳಿಕ ಸರ್ಕಾರ ರಚನೆ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: Maharashtra Politics: ‘ಜನರಲ್ ಡಯರ್’, ‘ರಾವಣ’ ಎಂದು ಪರಸ್ಪರ ಬೈದಾಡಿಕೊಂಡ ಉದ್ಧವ್ ಠಾಕ್ರೆ, ಸಿಎಂ ಏಕನಾಥ್ ಶಿಂಧೆ!