ನವದೆಹಲಿ: ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹತೆಯ (Disqualification Row) ಕುರಿತು ರಾಜಕೀಯ ವಾದ-ವಿವಾದಗಳು ಭುಗಿಲೆದ್ದ ಬೆನ್ನಲ್ಲೇ, ಲಕ್ಷದ್ವೀಪವನ್ನು ಪ್ರತಿನಿಧಿಸುತ್ತಿದ್ದ ಎನ್‌ಸಿಪಿಯ ಮೊಹಮ್ಮದ್ ಫೈಜಲ್ (Lakshadweep MP Mohammed Faizal) ಅವರ ಲೋಕಸಭೆ ಸದಸ್ಯತ್ವ ಅನರ್ಹತೆಯನ್ನು ಬುಧವಾರ ರದ್ದು ಮಾಡಲಾಗಿದೆ. ಕೊಲೆ ಯತ್ನ ಪ್ರಕರಣವೊಂದರಲ್ಲಿ ಫೈಜಲ್ ವಿರುದ್ಧ ನ್ಯಾಯಾಲಯವು 10 ವರ್ಷ ಶಿಕ್ಷೆ ವಿಧಿಸಿತ್ತು. ಪರಿಣಾಮ ಅವರ ಸಂಸತ್ ಸದಸ್ಯತ್ವ ರದ್ದಾಗಿತ್ತು. ಈ ಶಿಕ್ಷೆಗೆ ಕೇರಳ ಹೈಕೋರ್ಟ್ ಜನವರಿಯಲ್ಲೇ ತಡೆ ನೀಡಿತ್ತು. ಹೀಗಿದ್ದೂ, ಫೈಜಲ್ ಅವರ ಅನರ್ಹತೆಯನ್ನು ಲೋಕಸಭೆ ಕಾರ್ಯದರ್ಶಿ ರದ್ದು ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ, ಫೈಜಲ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಬುಧವಾರ, ಫೈಜಲ್ ಅವರ ಅನರ್ಹತೆಯನ್ನು ರದ್ದು ಮಾಡಿದ್ದರಿಂದ, ಸುಪ್ರೀಂ ಕೋರ್ಟ್ ಫೈಜಲ್ ಅರ್ಜಿಯನ್ನು ವಿಲೇವಾರಿ ಮಾಡಿದೆ. ಈ ಸಂಗತಿಯನ್ನು ಬಳಸಿಕೊಂಡು ರಾಹುಲ್ ಗಾಂಧಿ ಅವರ ತಂಡವು ಕಾನೂನು ಆಯ್ಕೆಗಳನ್ನು ಪರಿಗಣಿಸುತ್ತಿದೆ ಎನ್ನಲಾಗಿದೆ.
ಕೇಂದ್ರ ಚುನಾವಣಾ ಆಯೋಗವು ಬುಧವಾರ ಸುದ್ದಿಗೋಷ್ಠಿ ನಡೆಸಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜತೆಗೆ, ಹಲವು ರಾಜ್ಯಗಳಲ್ಲಿನ ಬೈ ಎಲೆಕ್ಷನ್ ವೇಳಾಪಟ್ಟಿಯನ್ನು ತಿಳಿಸಿದೆ. ಆದರೆ, ರಾಹುಲ್ ಗಾಂಧಿ ಪ್ರತಿನಿಧಿಸುತ್ತಿದ್ದ ವಯನಾಡ ಕ್ಷೇತ್ರಕ್ಕೆ ಬೈಎಲೆಕ್ಷನ್ ಘೋಷಣೆ ಮಾಡಿಲ್ಲ. ರಾಹುಲ್ ಗಾಂಧಿ ಅವರ ಮನವಿ ಮತ್ತು ಅದರ ಬಗ್ಗೆ ನಿರ್ಧಾರಕ್ಕೆ ಮುಂಚಿತವಾಗಿ ಚುನಾವಣೆಯನ್ನು ಘೋಷಿಸಿದ್ದರೆ ಚುನಾವಣಾ ಸಂಸ್ಥೆಗೆ ಸವಾಲು ಹಾಕುವುದಾಗಿ ಕಾಂಗ್ರೆಸ್ ಹೇಳಿತ್ತು.
ಇದನ್ನೂ ಓದಿ: Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್ ಶಾಕ್; ಸಂಸದ ಸ್ಥಾನದಿಂದ ಅನರ್ಹ
ಮೊಹಮ್ಮದ್ ಫೈಜಲ್‌ಗೆ ಏಕೆ ಶಿಕ್ಷೆ?
ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಸಂಸದ ಮೊಹಮ್ಮದ್ ಫೈಜಲ್‌ಗೆ ಕೊಲೆ ಯತ್ನ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಹಾಗಾಗಿ, ಸ್ವಯಂ ಆಗಿ ಅವರ ಸಂಸತ್ ಸದಸ್ಯತ್ವ ರದ್ದಾಗಿತ್ತು. ಇದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಅವರು ಮನವಿ ಮಾಡಿದ್ದರು. ಶಿಕ್ಷೆಯನ್ನು ತಡೆಹಿಡಿಯಲಾದ ಎರಡು ತಿಂಗಳ ನಂತರ, ಸಂಸದನಾಗಿ ಅನರ್ಹತೆಯನ್ನು ಹಿಂತೆಗೆದುಕೊಳ್ಳದ ಲೋಕಸಭೆಯ ಕಾರ್ಯದರ್ಶಿಯ ಕಾನೂನುಬಾಹಿರ ಕ್ರಮವನ್ನು ಫೈಜಲ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ನ್ಯಾಯಾಲಯವು ಬುಧವಾರ ವಿಚಾರಣೆಗೆ ಮುಂದಾಗಿತ್ತು. ಈ ಮಧ್ಯೆಯೇ, ಲೋಕಸಭೆ ಕಾರ್ಯದರ್ಶಿಯು ಅವರ ಅನರ್ಹತೆಯನ್ನು ರದ್ದು ಮಾಡಿದ್ದಾರೆ.