ಮುಂಬೈ: ಬಹುಮತವನ್ನು ಹೊಂದಿರುವ ಸಿಎಂ ಏಕನಾಥ ಶಿಂಧೆ (CM Eknath Shinde) ಅವರ ಶಿವಸೇನೆ ಬಣವೇ ನಿಜವಾದ ಶಿವಸೇನೆ (Real Sihv Sena) ರಾಜಕೀಯ ಪಕ್ಷವಾಗಿದೆ. ಹಾಗಾಗಿ, 36 ಶಾಸಕರನ್ನು ಅನರ್ಹಗೊಳಿಸುವ (Disqualification) ಉದ್ಧವ್ ಠಾಕ್ರೆ ಬಣದ ಅರ್ಜಿ ಊರ್ಜಿತವಲ್ಲ. ಶಾಸಕರನ್ನು ಪಕ್ಷಾಂತರ ಕಾಯ್ದೆಯಡಿ ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ (Speaker Rahul Narvekar) ಅವರು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ. ಶಿವಸೇನೆಯ ವಿಭಜನೆಯ ನಂತರ ಪರಸ್ಪರ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಶಿವಸೇನೆ ಬಣಗಳು ಅರ್ಜಿ ಸಲ್ಲಿಸಿದ್ದವು. ಬುಧವಾರ, ಸ್ಪೀಕರ್ ಅವರು ಶಾಸಕರ ಅನರ್ಹತೆಯ ಕುರತು ತಮ್ಮ ತೀರ್ಪು ಪ್ರಕಟಿಸಿದ್ದಾರೆ. ಈ ತೀರ್ಪಿನಿಂದ ಉದ್ಧವ್ ಠಾಕ್ರೆ ಬಣಕ್ಕೆ ಭಾರೀ ಹಿನ್ನಡೆಯಾಗಿದೆ.
ಪಕ್ಷದ ಸಂವಿಧಾನದ ಪ್ರಕಾರ ಉದ್ಧವ್ ಠಾಕ್ರೆ ಅವರಿಗೆ ಯಾವುದೇ ನಾಯಕನನ್ನು ಉಚ್ಚಾಟಿಸುವ ಅಧಿಕಾರ ಇರಲಿಲ್ಲ. ಉದ್ಧವ್ ನಾಯಕತ್ವವೇ ಪಕ್ಷದ ಇಚ್ಛೆಯಾಗುವುದಿಲ್ಲ. ಶಿಂಧೆ ಅವರನ್ನು ಪಕ್ಷದಿಂದ ಉಚ್ಟಾಟಿಸುವ ಕ್ರಮವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಹೇಳಿದ್ದಾರೆ.
1999ರ ಶಿವಸೇನೆಯ ಸಂವಿಧಾನವನ್ನು ಪಕ್ಷದ ಸಂವಿಧಾನವನ್ನು ಮಾನ್ಯ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ವಾದಿಸಿದ್ದಾರೆ. 2018ರ ಸಂವಿಧಾನವನ್ನು ಮಾನ್ಯ ಮಾಡುವಂತೆ ಉದ್ಧವ್ ಬಣ ಸಲ್ಲಿಸಿದ್ದ ಮನವಿಯನ್ನು ನಾರ್ವೇಕರ್ ತಿರಸ್ಕರಿಸಿದ್ದಾರೆ.
2022ರ ಜೂನ್‌ನಲ್ಲಿ ಹಿಂದಿನ ಉದ್ಧವ್ ಠಾಕ್ರೆ ಸರ್ಕಾರವನ್ನು ತೊರೆದು ಸಮ್ಮಿಶ್ರ ಸರ್ಕಾರ ರಚಿಸಲು ಬಿಜೆಪಿಯೊಂದಿಗೆ ಕೈಜೋಡಿಸಿದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಅವರ ಬೆಂಬಲಿಗರಾದ 36 ಶಾಸಕರನ್ನು ಅನರ್ಹಗೊಳಿಸುವ ಕುರಿತು ಉದ್ಧವ್ ಬಣ ಅರ್ಜಿ ಸಲ್ಲಿಸಿತ್ತು. ಈ ಮಧ್ಯೆ ರಾಹುಲ್ ನಾರ್ವೇಕರ್ ಅವರು ರಾಜಕೀಯ ಪಕ್ಷಪಾತ ಮಾಡಿದ್ದಾರೆ ಎಂದು ಆರೋಪಿಸಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಈ ಕುರಿತು ಸುಪ್ರೀಂ ಕೋರ್ಟ್ ಹಲವು ಬಾರ ಗಡುವು ನೀಡಿತ್ತು.
ಮಹಾರಾಷ್ಟ್ರದ ಸ್ಪೀಕರ್ ಅವರು ತಮ್ಮ ತೀರ್ಪನ್ನು ನೀಡದೇ ವಿಳಂಬ ನೀತಿ ಅನುಸರಿಸುತ್ತಿದ್ದಾರೆಂದು ಉದ್ದವ್ ಠಾಕ್ರೆ ಬಣ ಆರೋಪಿಸಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್, ಜನವರಿ 10ರೊಳಗೇ ತೀರ್ಪು ನೀಡುವಂತೆ ಸ್ಪೀಕರ್ ಅವರಿಗೆ ಸೂಚಿಸಿತ್ತು. ಒಂದೊಮ್ಮೆ ವಿಫಲವಾದರೆ, ಈ ಕುರಿತು ತಾನೇ ನಿರ್ಧಾರ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು.
ಏನಿದು ವಿವಾದ?
2022ರಲ್ಲಿ ಶಿವಸೇನೆಯು ಇಬ್ಭಾಗವಾಗಿತ್ತು. ಬಿಜೆಪಿಯ ಜತೆ ಕೈ ಜೋಡಿಸಿದ್ದ ಶಿವಸೇನೆಯ ಹಿರಿಯ ನಾಯಕ ಏನನಾಥ ಸಿಂಧೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಇದರಿಂದಾಗಿ ಶಿವಸೇನೆಯ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನಗೊಂಡಿತ್ತು. ಬಳಿಕ ಶಿವಸೇನೆಯ ಎರಡೂ ಬಣದವರು ಪರಸ್ಪರ ಅನರ್ಹತೆ ಕೋರಿ ಅರ್ಜಿ ಸಲ್ಲಿಸಿದ್ದರು.
ಚುನಾವಣಾ ಆಯೋಗವು ಶಿಂಧೆ ನೇತೃತ್ವದ ಬಣಕ್ಕೆ ‘ಶಿವಸೇನೆ’ ಹೆಸರು ಮತ್ತು ‘ಬಿಲ್ಲು ಬಾಣ’ ಚಿಹ್ನೆಯನ್ನು ನೀಡಿತ್ತು. ಬಳಿಕ ಉದ್ಧವ್ ಠಾಕ್ರೆ ನೇತೃತ್ವದ ಬಣ ಶಿವಸೇನೆ (Uddhav Balasaheb Thackeray-UBT)ಎಂಬ ಹೆಸರಿನಿಂದ ಗುರುತಿಸಿಕೊಂಡಿತ್ತು. ಕಳೆದ ವರ್ಷ ಜುಲೈಯಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಬಣವೂ ಶಿಂಧೆ ನೇತೃತ್ವದ ಸರ್ಕಾರವನ್ನು ಸೇರಿಕೊಂಡಿತು. ಮಹಾರಾಷ್ಟ್ರದಲ್ಲಿ 2024ರ ದ್ವಿತೀಯಾರ್ಧದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಈ ಸುದ್ದಿಯನ್ನೂ ಓದಿ: Disqualification Verdict: ಸಿಎಂ ಶಿಂಧೆ ಬಣವೇ ನಿಜವಾದ ಶಿವಸೇನೆ, ಉದ್ಧವ್ ಠಾಕ್ರೆಗೆ ಭಾರೀ ಹಿನ್ನಡೆ