Site icon Vistara News

Disqualification Verdict: ಶಿಂಧೆ ಬಣವೇ ರಿಯಲ್ ಶಿವಸೇನೆ ಎಂದು ಸ್ಪೀಕರ್ ತೀರ್ಪು ಕೊಟ್ಟಿದ್ದೇಕೆ?

Disqualification Verdict, Why did speaker says faction of Eknath Shinde is real Shiv Sena

ಮುಂಬೈ: ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಬಾಕಿ ಉಳಿದಿದ್ದ ಶಿವಸೇನೆ (Factions of Shiv Sena) ಎರಡೂ ಬಣಗಳ ಶಾಸಕರ ಅನರ್ಹತೆಯ ಕುರಿತ ಅರ್ಜಿಗಳಿಗೆ (Disqualification Appeal) ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ (Speaker Rahul Narvekar) ಅವರು ಬುಧವಾರ ತೀರ್ಪು ಪ್ರಕಟಿಸಿದ್ದಾರೆ. ಸಿಎಂ ಏಕನಾಥ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆಯಾಗಿದೆ (Real Shiv Sena) ಮತ್ತು ಬಹುಮತವನ್ನು ಹೊಂದಿದೆ. ಹಾಗಾಗಿ, ಶಾಸಕರನ್ನು ಅನರ್ಹಗೊಳಿಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಸ್ಪೀಕರ್ ಅವರು ಸುದೀರ್ಘ ವಿವರಣೆ ನೀಡಿದ್ದಾರೆ. ತಾವೇಕೆ, ಶಿಂಧೆ ಬಣವನ್ನು ರಿಯಲ್ ಶಿವಸೇನೆ ಎಂದು ಪರಿಗಣಿಸಿದೆ ಎಂಬುದಕ್ಕೆ ಕಾನೂನು ಬದ್ಧ ಅಂಶಗಳನ್ನು ಗುರುತಿಸಿದ್ದಾರೆ.

ಸಹಜವಾಗಿಯೇ, ಉದ್ದವ್ ಠಾಕ್ರೆ ಬಣವು ಸ್ಪೀಕರ್ ಅವರ ಆದೇಶವನ್ನು ತಿರಸ್ಕರಿಸಿದ್ದು, ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಹೇಳಿದೆ. ಅಲ್ಲದೇ, ಇದು ಪ್ರಜಾಪ್ರಭುತ್ವದ ಕೊಲೆ ಮತ್ತು ಸ್ಪೀಕರ್ ಅವರು ಷಡ್ಯಂತ್ರ ನಡೆಸಿದ್ದಾರೆಂದು ಆರೋಪಿಸಿದೆ.

ಸ್ಪೀಕರ್ ನೀಡಿದ ಕಾರಣಗಳೇನು?

-ಪಕ್ಷದ ಸಂವಿಧಾನವು ನಿಜವಾದ ನಾಯಕ ಯಾರು ಎಂಬುದನ್ನು ತಿಳಿಸುತ್ತದೆ. ಹಾಗಾಗಿ, ಶಿವಸೇನೆಯ ಎರಡು ಬಣಗಳ ಪೈಕಿ ನಿಜವಾದ ಶಿವಸೇನೆ ಯಾವುದು ಎಂಬುದನ್ನು ನಿರ್ಧರಿಸಲು ಪಕ್ಷದ ಸಂವಿಧಾನವು ಸೂಕ್ತ ದಾಖಲೆಯಾಗಿದೆ.
-ಅವಿಭಜಿತ ಶಿವಸೇನೆಯ ಸಂವಿಧಾನವನ್ನು 2018ರಲ್ಲಿ ತಿದ್ದುಪಡಿ ಮಾಡಲಾಗಿದೆ. ಆದರೆ, ಅದು ಎಲ್ಲೂ ದಾಖಲಾಗಿಲ್ಲ. ಆದ್ದರಿಂದ ಭಾರತೀಯ ಚುನಾವಣಾ ಆಯೋಗದಲ್ಲಿರುವ ಶಿವಸೇನೆ ಪಕ್ಷದ 1999ರ ಸಂವಿಧಾನವನ್ನು ಪರಿಗಣಿಸಲಾಗಿದೆ. ಅಲ್ಲದೇ, 2018ರಲ್ಲಿ ಸಾಂಸ್ಥಿಕ ಚುನಾವಣೆಗಳೂ ನಡೆದಿರಲಿಲ್ಲ.
-2018ರ ಸಂವಿಧಾನದಲ್ಲಿ ನಾಯಕತ್ವ ರಚನೆಯಲ್ಲಿ ಪಕ್ಷ ಪ್ರಮುಖ್‌ನನ್ನು ಅತ್ಯುನ್ನತ ಅಧಿಕಾರಿ ಎಂದು ಉಲ್ಲೇಖಿಸಲಾಗಿದೆ. 2018ರ ನಾಯಕತ್ವ ರಚನೆಯು ಪಕ್ಷದ ಸಂವಿಧಾನಕ್ಕೆ ಅನುಗುಣವಾಗಿಲ್ಲ.
-ಆದರೆ, 1999ರ ಸಂವಿಧಾನ ಪ್ರಕಾರ ಪಕ್ಷದ ಅತ್ಯುನ್ನತ ಅಧಿಕಾರವನ್ನು, ಪಕ್ಷದ ಕಾರ್ಯಕಾರಿ ಮಂಡಳಿ ಹೊಂದಿದೆ ಹೊರತು ಪಕ್ಷ ಪ್ರಮುಖ್ ಅಲ್ಲ ಎಂದು ಸ್ಪೀಕರ್ ಅಭಿಪ್ರಾಯಪಟ್ಟಿದ್ದಾರೆ.
-ಪಕ್ಷದ ಸಂವಿಧಾನದ ಪ್ರಕಾರ, ಪಕ್ಷ ಪ್ರಮುಖ್‌ ಅವರಿಗೆ ಯಾವುದೇ ಅಪರಿಮಿತ ಅಧಿಕಾರಗಳಿಲ್ಲ. ಅವರು ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಜತೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಬೇಕು.
-ಹಾಗಾಗಿ, ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಉದ್ಧವ್ ಠಾಕ್ರೆ ಅವರನ್ನು ಕಿತ್ತು ಹಾಕುವ ಅಧಿಕಾರ ಉದ್ಧವ್ ಠಾಕ್ರೆ ಅವರಿಗೆ ಇಲ್ಲ. ಉದ್ಧವ್ ಅವರ ನಿರ್ಧಾರವು ಪಕ್ಷದ ನಿರ್ಧಾರವಲ್ಲ.
-ಪಕ್ಷವು ಹೋಳಾಗಿರುವಾಗ ಎರಡೂ ಕಡೆಯ ನಾಯಕರು ತಾವೇ ಮೂಲ ಪಕ್ಷವೆಂದು ಹೇಳಿಕೊಳ್ಳಬಹುದು. 2022ರ ಜೂನ್ ತಿಂಗಳಲ್ಲಿ ಪ್ರತಿಸ್ಪರ್ಧಿ ಬಣಗಳು ಹುಟ್ಟಿಕೊಂಡವು. ಶಿಂಧೆ ಗುಂಪು 54 ಶಾಸಕರಲ್ಲಿ 37 ಶಾಸಕರ ಬಹುಮತವನ್ನು ಹೊಂದಿತ್ತು ಎಂದು ಸ್ಪೀಕರ್ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
-ಶಿಂಧೆ ಬಣವು ಬಿಜೆಪಿ ಪಕ್ಷದೊಂದಿಗೆ ಶಾಮೀಲಾಗಿ ವರ್ತಿಸಿದೆ ಎಂದು ಉದ್ಧವ್ ಬಣ ಹೇಳಿಕೊಂಡಿದೆ. ಆದರೆ ಉದ್ಧವ್ ಬಣವು ಈ ಆರೋಪಕ್ಕೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲವಾದ್ದರಿಂದ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ.
-ಶಿಂಧೆ ಬಣವು ಯಾರ ಸಂಪರ್ಕಕ್ಕೂ ಸಿಗದಂತೆ ಅಜ್ಞಾತ ಸ್ಥಳಕ್ಕೆ ತೆರಳಿತು ಎಂದು ಉದ್ಧವ್ ಬಣವು ಆರೋಪಿಸಿದೆ. ಆದರೆ ಉದ್ಧವ್ ಬಣದ ಇಬ್ಬರು ನಾಯಕರು ಶಿಂಧೆ ಮತ್ತು ಇತರ ಶಾಸಕರನ್ನು ಗುವಾಹಟಿಯಲ್ಲಿ ಭೇಟಿಯಾಗಿದ್ದಾರೆ. ಹಾಗಾಗಿ, ಅಜ್ಞಾತರಾಗಿದ್ದರು ಎಂಬುದೇ ಅನರ್ಹತೆಗೆ ಕಾರಣವಾಗಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Disqualification Verdict: ಸಿಎಂ ಶಿಂಧೆ ಬಣದ ಶಾಸಕರ ಅನರ್ಹತೆ ಇಲ್ಲ; ‘ಮಹಾ’ ಸ್ಪೀಕರ್ ತೀರ್ಪು

Exit mobile version