ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ತಮ್ಮ ನಿವಾಸದಲ್ಲಿ ಶುಕ್ರವಾರ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಹ್ಯಾರಿಸ್ ಪತಿ ಡೌಗ್ಲಾಸ್ ಎಂಹಾಫ್ ಕೂಡ ಇದ್ದರು. ಅಷ್ಟೇ ಅಲ್ಲ, ಹ್ಯಾರಿಸ್ ನಿವಾಸದಲ್ಲಿ ಆಯೋಜಿಸಲಾಗಿದ್ದ ಬೆಳಕಿನ ಹಬ್ಬದ ಆಚರಣೆಯಲ್ಲಿ ಭಾರತೀಯ ಮೂಲದ ಅಮೆರಿಕ ನಿವಾಸಿಗಳೂ ಭಾಗವಹಿಸಿದ್ದರು. ಯುಎಸ್ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳಲ್ಲಿರುವ ವಿವೇಕ್ ಮೂರ್ತಿ, ರಿಚ್ ವರ್ಮಾ, ಅಜಯ್ ಭುಟೋರಿಯಾ ಕೂಡ ಪಾಲ್ಗೊಂಡಿದ್ದರು. ಎಲ್ಲರೂ ಸೇರಿ ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೊ ವೈರಲ್ ಆಗಿದೆ.
ಕಮಲಾ ಹ್ಯಾರಿಸ್ ಮೂಲತಃ ಭಾರತದವರು. ಅವರ ತಾಯಿ ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಬಳಿಕ ಯುಎಸ್ಗೆ ತೆರಳಿ, ಅಲ್ಲಿನವರನ್ನೇ ಮದುವೆಯಾಗಿ ನೆಲೆಸಿದ್ದರು. ಯುಎಸ್ ಉಪಾಧ್ಯಕ್ಷೆ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೂ ಕಮಲಾ ಹ್ಯಾರಿಸ್ ಪಾತ್ರರಾಗಿದ್ದಾರೆ. ಅವರು ಯುಎಸ್ ಉಪಾಧ್ಯಕ್ಷ ಚುನಾವಣೆಯಲ್ಲಿ ಗೆದ್ದಾಗ ಚೆನ್ನೈನಲ್ಲಿರುವ ಅವರ ಪೂರ್ವಜರ ಊರಿನಲ್ಲಿ ಭರ್ಜರಿ ಸಂಭ್ರಮ ಏರ್ಪಟ್ಟಿತ್ತು. ಸಿಹಿ ವಿತರಣೆಯೂ ನಡೆದಿತ್ತು.
ದೀಪಾವಳಿ ಹಬ್ಬದ ಆಚರಣೆ ಬಗ್ಗೆ ಮಾತನಾಡಿದ ಕಮಲಾ ಹ್ಯಾರಿಸ್, ‘ದೀಪಾವಳಿ ಎಂದರೆ ಸಂಸ್ಕೃತಿಯ ಬಿಂಬ, ಸಂಸ್ಕೃತಿ ಮತ್ತು ಸಮುದಾಯವನ್ನೂ ಮೀರಿದ ಭಾವ, ಬೆಳಕು ಮತ್ತು ಕತ್ತಲ ನಡುವಿನ ಅಸಮತೋಲನವನ್ನು ಹೋಗಲಾಡಿಸುವ ಪರಿಕಲ್ಪನೆಯ ಹಬ್ಬ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ನ್ಯೂಯಾರ್ಕ್ ಸಿಟಿಯಲ್ಲಿ ದೀಪಾವಳಿ ಹಬ್ಬಕ್ಕೆ ಶಾಲೆಗಳಿಗೆ ಸಾರ್ವತ್ರಿಕ ರಜೆ; ಬರುವ ವರ್ಷದಿಂದ ನಿಯಮ ಜಾರಿ