Site icon Vistara News

ಅಕ್ರಮ ಹಣ ವರ್ಗಾವಣೆ ಕೇಸ್‌, ಇ.ಡಿ ವಿಚಾರಣೆಗೆ ಇಂದು ಡಿ ಕೆ ಶಿವಕುಮಾರ್ ಹಾಜರು

dk shivakumar

ನವ ದೆಹಲಿ: ಅಕ್ರಮ ಆಸ್ತಿ ಸಂಪಾದನೆ, ಸರ್ಕಾರದ ತೆರಿಗೆ ವಂಚನೆ ಸೇರಿ ಅನೇಕ ಆರೋಪಗಳನ್ನು ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಶುಕ್ರವಾರ ನವ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ.) ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ.

ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್‌ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ನವ ದೆಹಲಿಯಲ್ಲಿ ಕೊನೆಗೆ ಬಂಧಿಸಿ ತಿಹಾರ್‌ ಜೈಲಿಗೆ ಕಳಿಸಿತ್ತು. ತನಿಖೆ ಪೂರ್ಣಗೊಳಿಸಿರುವ ಇ.ಡಿ ಜೂನ್‌ ಕೊನೆಯ ವಾರದಲ್ಲಿ ದೋಷಾರೋಪ ಪಟ್ಟಿಯನ್ನು ದೆಹಲಿಯಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ದೆಹಲಿಯ ಸಫ್ಧರ್‌ಜಂಗ್ ಅಪಾರ್ಟ್‌ಮೆಂಟ್‌ನಲಿ ಸಿಕ್ಕ 6.61 ಕೋಟಿ ರೂ. ಡಿ.ಕೆ.ಶಿವಕುಮಾರ್ ಅವರದ್ದೇ ಎಂದು ವಿಚಾರಣೆ ವೇಳೆ ಆರೋಪಿ ಆಂಜನೇಯ ಬಾಯಿ ಬಿಟ್ಟಿದ್ದರು. ಡಿ.ಕೆ. ಶಿವಕುಮಾರ್‌ ಅವರ ಅಕ್ರಮ ಹಣದ ವ್ಯವಹಾರವನ್ನು ರಾಜೇಂದ್ರ ಹಾಗೂ ಆಂಜನೇಯ ನೋಡಿಕೊಳ್ಳುತ್ತಿದ್ದರು. ಸುರೇಶ್ ಶರ್ಮಾ ಅವರ ಫ್ಲಾಟ್‌ ಅನ್ನು ಡಿ.ಕೆ.ಶಿವಕುಮಾರ್ ಹಾಗೂ ಸುನಿಲ್ ಶರ್ಮಾ ಹಾಗೂ ಡಿಕೆಶಿ ಅಕ್ರಮ ಹಣ ಸಂಗ್ರಹಣೆ ಬಳಸುತ್ತಿದ್ದರು. ಡಿಕೆಶಿ ಸೂಚನೆ ಮೇರೆಗೆ 1 ಕೋಟಿ ರೂ., 2 ಕೋಟಿ ರೂ., 1.5 ಕೋಟಿ ರೂ. ಹೀಗೆ ಹಲವು ಬಾರಿ ಸಾಗಾಟ ಮಾಡಲಾಗಿದೆ. ಏನೇ ಸಮಸ್ಯೆ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಆಂಜನೇಯಗೆ ಹೇಳಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ಜಾಗ ಕೊಡುವ ಭರವಸೆ ನೀಡಿದ್ದಾರೆ ಎಂಬ ಮಹತ್ವದ ಅಂಶಗಳು ಇ.ಡಿ. ಚಾರ್ಜ್‌ಶೀಟ್‌ನಲ್ಲಿವೆ. (ಚಾರ್ಜ್‌ಶೀಟ್‌ನ ಸಂಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ)

ಆರೋಪ ಪಟ್ಟಿ ಸಲ್ಲಿಕೆ ನಂತರ ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್‌ ನೀಡಿತ್ತು. ಕೆಪಿಸಿಸಿ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ರಾಜ್ಯ ವಿಧಾನಸಭೆ ಚುನಾವಣೆ ಕುರಿತು ಚರ್ಚೆ ನಡೆಸಲು ಮೂರು ದಿನದಿಂದ ನವ ದೆಹಲಿಯಲ್ಲಿ ಉಳಿದುಕೊಂಡಿರುವ ಡಿ.ಕೆ. ಶಿವಕುಮಾರ್‌ ಶುಕ್ರವಾರ ವಿಚಾರಣೆಗೆ ಹಾಜರಾಗಲಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರ ಜತೆಗೆ ಇನ್ನಿತರ ಆರೋಪಿಗಳೂ ವಿಚಾರಣೆಗೆ ಹಾಜರಾಗಲಿದ್ದಾರೆ. ಇದು ಪ್ರಾರಂಭಿಕ ಹಂತವಾದ್ದರಿಂದ ಹೆಚ್ಚಿನ ವಿಚಾರಣೆ, ವಾದ ವಿವಾದ ನಡೆಯುವ ಸಾಧ್ಯತೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಪ್ರಕರಣದ ವಿಚಾರಣೆ ಬಿರುಸು ಪಡೆಯಬಹುದು ಎನ್ನಲಾಗಿದೆ. ಆದರೆ ವಿಧಾನಸಭೆ ಚುನಾವಣೆ ಹತ್ತಿರವಾದಂತೆ ಡಿ.ಕೆ. ಶಿವಕುಮಾರ್‌ ಅವರಿಗೆ ಇ.ಡಿ. ಪ್ರಕರಣದಿಂದ ರಾಜಕೀಯವಾಗಿ ಸಂಕಷ್ಟಗಳು ಎದುರಾಗುವ ಅಪಾಯಗಳಿವೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ | ರಾಹುಲ್‌ಗೆ ಇಂದೂ ಇ.ಡಿ ಅಗ್ನಿ ಪರೀಕ್ಷೆ: ನಾಲ್ಕನೇ ಬಾರಿ ವಿಚಾರಣೆಯ ಬಿಸಿ

Exit mobile version