ಚೆನ್ನೈ: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಭಾರತೀಯ ಸೈನಿಕರೊಬ್ಬರ ಮೇಲೆ ದಾಳಿ ನಡೆಸಿ, ಅವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಂಕೆ ನಾಯಕ, ನಾಗೋಜನಹಳ್ಳಿ ಪಟ್ಟಣ ಪಂಚಾಯಿತಿಯ ಕೌನ್ಸಿಲರ್ ಚಿನ್ನಸ್ವಾಮಿ (DMK Councillor Arrested) ಅವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಮೃತ ಯೋಧನ ಸಹೋದರ ನೀಡಿದ ದೂರಿನ ಮೇರೆಗೆ ಪೊಲೀಸರು ಚಿನ್ನಸ್ವಾಮಿ ಅವರನ್ನು ಬಂಧಿಸಿದ್ದಾರೆ.
ಡಿಎಂಕೆ ಕೌನ್ಸಿಲರ್ ಚಿನ್ನಸ್ವಾಮಿ ವಾಸಿಸುವ ವಾರ್ಡ್‌ನಲ್ಲಿಯೇ ಯೋಧ ಪ್ರಭಾಕರನ್ ಅವರು ವಾಸಿಸುತ್ತಿದ್ದರು. ಆದರೆ, ಚಿನ್ನಸ್ವಾಮಿ ಅವರು ಪ್ರಭಾಕರನ್ ಮನೆಗೆ ನೀರಿನ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದ ಕೋಪಗೊಂಡ ಪ್ರಭಾಕರನ್ ಹಾಗೂ ಅವರ ಸಹೋದರ ಪ್ರಭು ಅವರು ಚಿನ್ನಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಪ್ರಭಾಕರನ್ ಹಾಗೂ ಚಿನ್ನಸ್ವಾಮಿ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಕೌನ್ಸಿಲರ್ ಹಾಗೂ ಅವರ ಬೆಂಬಲಿಗರು ಪ್ರಭಾಕರನ್ ಹಾಗೂ ಪ್ರಭು ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Soldier Lynched | ಮಗಳ ಆಕ್ಷೇಪಾರ್ಹ ವಿಡಿಯೊ ಪೋಸ್ಟ್ ಮಾಡಿದ್ದನ್ನು ಪ್ರಶ್ನಿಸಿ ಪ್ರತಿಭಟನೆ ನಡೆಸಿದ್ದಕ್ಕೇ ಯೋಧನ ಹತ್ಯೆ
ಫೆಬ್ರವರಿ 8ರಂದು ಪ್ರಭಾಕರನ್ ಮೇಲೆ ಹಲ್ಲೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಫೆಬ್ರವರಿ 15ರಂದು ಮೃತಪಟ್ಟಿದ್ದಾರೆ. ಪ್ರಭು ನೀಡಿದ ದೂರಿನ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ, ಅವರ ಪುತ್ರ ರಾಜಪಾಂಡಿ ಸೇರಿ ಒಟ್ಟು 9 ಜನರನ್ನು ಕೃಷ್ಣಗಿರಿ ಪೊಲೀಸರು ಬಂಧಿಸಿದ್ದಾರೆ.