Site icon Vistara News

Khushbu Sundar: ಖುಷ್ಬೂ ಸುಂದರ್‌ ಹಳೇ ಪಾತ್ರೆ ಇದ್ದಂತೆ ಎಂದಿದ್ದ ಡಿಎಂಕೆ ನಾಯಕನ ಬಂಧನ, ಪಕ್ಷದಿಂದ ವಜಾ

Khushbu Sundar And Sivaji Krishnamurthy

DMK Leader Expelled From Party, Arrested For Insulting Remarks About Khushbu Sundar

ಚೆನ್ನೈ: ತಮಿಳುನಾಡು ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ (Khushbu Sundar) ಅವರನ್ನು “ಹಳೇ ಪಾತ್ರೆ” ಎಂದು ಕರೆಯುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಡಿಎಂಕೆ ನಾಯಕ ಶಿವಾಜಿ ಕೃಷ್ಣಮೂರ್ತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ವಿವಾದದ ಬಳಿಕ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಡಿಎಂಕೆಯಿಂದ ಶಿವಾಜಿ ಕೃಷ್ಣಮೂರ್ತಿ ಅವರನ್ನು ವಜಾಗೊಳಿಸಲಾಗಿದೆ.

“ಶಿವಾಜಿ ಕೃಷ್ಣಮೂರ್ತಿ ಅವರನ್ನು ಪಕ್ಷದ ಎಲ್ಲ ಸ್ಥಾನಮಾನಗಳಿಂದ ವಜಾಗೊಳಿಸಲಾಗಿದೆ. ಪಕ್ಷದ ಶಿಸ್ತು ಹಾಗೂ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಡಿಎಂಕೆ ಪ್ರಾಥಮಿಕ ಸದಸ್ಯತ್ವದಿಂದಲೂ ವಜಾಗೊಳಿಸಲಾಗಿದೆ” ಎಂದು ಡಿಎಂಕೆ ಪ್ರಧಾನ ಕಾರ್ಯದರ್ಶಿ ದೊರೈ ಮುರುಗನ್‌ ತಿಳಿಸಿದ್ದಾರೆ. ಇದಕ್ಕೂ ಮೊದಲು, ರಾಜ್ಯಪಾಲ ಆರ್‌.ಎನ್‌.ರವಿ ಅವರ ಕುರಿತು ಕೂಡ ವಿವಾದಾತ್ಮಕ ಹೇಳಿಕೆ ನೀಡಿ ಶಿವಾಜಿ ಕೃಷ್ಣಮೂರ್ತಿ ಅಮಾನತುಗೊಂಡಿದ್ದರು. ಈಗ ಖುಷ್ಬೂ ಸುಂದರ್‌ ಪ್ರಕರಣದಲ್ಲಿ ವಜಾಗೊಳಿಸಲಾಗಿದೆ.

ಖುಷ್ಬೂ ಸುಂದರ್‌ ಆಕ್ರೋಶ

ಶಿವಾಜಿ ಕೃಷ್ಣಮೂರ್ತಿ ಹೇಳಿಕೆಗೆ ಖುಷ್ಬೂ ಸುಂದರ್‌ ಅವರು ಭಾರಿ ಖಂಡನೆ ವ್ಯಕ್ತಪಡಿಸಿದ್ದಾರೆ. “ಅವಹೇಳನಕಾರಿಯಾಗಿ ಹೇಳಿಕೆ ನೀಡುವುದು ಡಿಎಂಕೆ ನಾಯಕರ ರೂಢಿಯಾಗಿದೆ. ಹೆಣ್ಣುಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಅವರನ್ನು ನಿಂದಿಸುವುದು, ತುಚ್ಚವಾದ ಹೇಳಿಕೆ ನೀಡುವುದು ಇವರ ಸಂಸ್ಕೃತಿಯಾಗಿದೆ. ಹಾಗಂತ ನಾನು ಹೋರಾಟ ನಿಲ್ಲಿಸುವುದಿಲ್ಲ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರೇ, ಇದು ನನಗೊಬ್ಬಳಿಗೆ ಮಾಡಿದ ಅವಮಾನ. ನಿಮ್ಮ ತಂದೆಗೂ ಇದರಿಂದ ಅವಮಾನ” ಎಂದು ಖುಷ್ಬೂ ಸುಂದರ್‌ ಹೇಳಿದ್ದಾರೆ.

ಇದನ್ನೂ ಓದಿ: Khushbu Sundar : ರವಿಚಂದ್ರನ್‌ ಜನುಮದಿನಕ್ಕೆ ನಟಿ ಖುಷ್ಬೂ ನೀಡಿದ ಸರ್‌ಪ್ರೈಸ್‌ ಹೇಗಿದೆ ನೋಡಿ!

ಖುಷ್ಬೂ ಸುಂದರ್‌ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೂ ಆಗಿದ್ದಾರೆ. ಇನ್ನು, ಸ್ವಯಂ ಪ್ರೇರಿತವಾಗಿ ಮಹಿಳಾ ಆಯೋಗವು ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ. ಶಿವಾಜಿ ಕೃಷ್ಣಮೂರ್ತಿ ವಿರುದ್ಧ ಕೊಡುಂಗೈಯುರ್‌ನಲ್ಲಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಖುಷ್ಬೂ ಸುಂದರ್‌ ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಶಿವಾಜಿ ಕೃಷ್ಣಮೂರ್ತಿ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು.

Exit mobile version