Site icon Vistara News

Bell & Ross Watch | ನೀವು ಧರಿಸುವ ದುಬಾರಿ ವಾಚ್ ಖರೀದಿಯ ರಶೀದಿ ತೋರಿಸಿ: ಬಿಜೆಪಿ ನಾಯಕ ಅಣ್ಣಾಮಲೈಗೆ ಡಿಎಂಕೆ ಸವಾಲು

Bell & Ross @ Annamalai

ಚೆನ್ನೈ: ಕರ್ನಾಟಕದಲ್ಲಿ ಈ ಹಿಂದೆ ಹ್ಯುಬ್ಲೋ ವಾಚ್ ಪ್ರಕರಣವು ಸಾಕಷ್ಟು ಸದ್ದು ಮಾಡಿತ್ತು. ಈಗ ನೆರೆಯ ತಮಿಳುನಾಡಿನಲ್ಲಿ ಅಂಥದ್ದೇ ವಾಚ್ ಪ್ರಕರಣ ಭುಗಿಲೆದ್ದಿದೆ. ದುಬಾರಿ ವಾಚ್‌ಗೆ ಸಂಬಂಧಿಸಿದಂತೆ ಡಿಎಂಕೆ ಸಚಿವ ಸೇಂಥಿಲ್ ಬಾಲಾಜಿ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಅಣ್ಣಾಮಲೈ ನಡುವೆ ವಾಕ್ಸಮರ ಜೋರಾಗಿದೆ. ಸೆಂಥಿಲ್ ಬಾಲಾಜಿ ಅವರು ಟ್ವೀಟ್ ಮಾಡಿ, ಬಿಜೆಪಿ ರಾಜಾಧ್ಯಕ್ಷ ಅಣ್ಣಾಮಲೈ ದುಬಾರಿ ಬೆಲ್ ಆ್ಯಂಡ್ ರಾಸ್ (Bell & Ross Watch) ಲಿಮಿಟೆಡ್ ಎಡಿಷನ್ ರಫೇಲ್ ವಾಚ್ ಧರಿಸುತ್ತಾರೆ. ಅವರು ವಾಚ್‌ ಅನ್ನು ಖರೀದಿಸಿದ ರಶೀದಿ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ಫ್ರೆಂಚ್ ಕಂಪನಿಯಾಗಿರುವ ಬೆಲ್ ಆ್ಯಂಡ್ ರಾಸ್ ಕೇವಲ 500 ರಫೇಲ್ ವಾಚ್‌ಗಳನ್ನು ತಯಾರಿಸಿದ್ದು, ಒಂದು ವಾಚಿನ ಬೆಲೆ 5 ಲಕ್ಷ ರೂಪಾಯಿ ಇದೆ. ನಾಲ್ಕು ಮೇಕೆಗಳನ್ನು ಹೊಂದಿದ್ದೇನೆ ಎಂದು ಹೇಳಿಕೊಳ್ಳುವ ಈ ವ್ಯಕ್ತಿ(ಅಣ್ಣಾಮಲೈ) ಈ ದುಬಾರಿ ಗಡಿಯಾರವನ್ನು ಧರಿಸುತ್ತಾರೆ. ಅವರು ವಾಚ್ ಖರೀದಿಸಿದ ರಶೀದಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದೇ ಎಂದು ಸಚಿವ ಸೆಂಥಿಲ್ ಬಾಲಾಜಿ ಅವರು ಅಣ್ಣಾಮಲೈಗೆ ಪ್ರಶ್ನಿಸಿದ್ದಾರೆ.

ಡಸಾಲ್ಟ್ ಫೈಟರ್ ಏರ್‌ಕ್ರಾಫ್ಟ್ ರಫೇಲ್ ‌ಸ್ಮರಣೆಗಾಗಿ ಬೆಲ್ ಆ್ಯಂಡ್ ರಾಸ್ ಕಂಪನಿಯು ರಫೇಲ್ ಲಿಮಿಟೆಡ್ ಎಡಿಷನ್ ವಾಚ್ ತಯಾರಿಸಿದೆ. ಬಿಜೆಪಿ ನಾಯಕ ಅಣ್ಣಾಮಲೈ ಅವರೂ ಈ ಲಿಮಿಟೆಡ್ ಎಡಿಷನ್ ವಾಚ್ ಅನ್ನು ಧರಿಸುತ್ತಾರೆ.

ಸಚಿವ ಸೇಂಥಿಲ್ ಬಾಲಾಜಿ ಅವರು ಆರೋಪಕ್ಕೆ ಉತ್ತರಿಸಿರುವ ಅಣ್ಣಾಮಲೈ, ನಾನು ಸಾಯುವವರೆಗೂ ಈ ಗಡಿಯಾರ ನನ್ನ ಬಳಿ ಇರಲಿದೆ. ಇದು ಕಲೆಕ್ಟರ್ ಎಡಿಷನ್ ಆಗಿದೆ. ನಾವು ಭಾರತೀಯರನ್ನು ಹೊರತುಪಡಿಸಿ ಬೇರೆ ಯಾರು ಖರೀದಿಸಬಹುದು? ನಮ್ಮ ದೇಶಕ್ಕಾಗಿ, ಈ ಗಡಿಯಾರವನ್ನು ಡಸಾಲ್ಟ್ ರಫೇಲ್ ವಿಮಾನದ ಭಾಗಗಳನ್ನು ಬಳಸಿ ತಯಾರಿಸಲಾಗಿದೆ. ರಫೇಲ್ ಪ್ರವೇಶಿಸಿದ ನಂತರವೇ ಯುದ್ಧದ ನಿಯಮಗಳು ಬದಲಾದವು, ಇದರಿಂದಾಗಿ ಭಾರತದ ಸಾಮರ್ಥ್ಯವು ಗಣನೀಯವಾಗಿ ಹೆಚ್ಚಾಗಿದೆ ಎಂದಿದ್ದಾರೆ. ಕಂಪನಿಯು ತಯಾರಿಸಿರುವ 500 ವಾಚ್‌ಗಳ ಪೈಕಿ 149ನೇ ವಾಚ್ ತಮ್ಮ ಬಳಿ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ | ಸಮರಾಂಕಣ ಅಂಕಣ | ರಣಭಯಂಕರ Rafale Jet ಅಪಾರ ಸಾಮರ್ಥ್ಯದ ಗುಟ್ಟೇನು?

Exit mobile version