ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಸಾವಿನ ವಿಚಾರದಲ್ಲಿ ಡಿಎಂಕೆ ಶಾಸಕ ಮಾರ್ಕಂಡೇಯನ್ ಮಾಡಿದ ಆರೋಪವು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. “ಜಯಲಲಿತಾ ಅವರನ್ನು ನರೇಂದ್ರ ಮೋದಿ ಅವರೇ (Modi Killed Jayalalithaa) ಕೊಂದಿದ್ದಾರೆ” ಎಂದು ಹೇಳಿದ್ದೀಗ ವಿವಾದ ಸೃಷ್ಟಿಸಿದೆ.
“ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಪ್ರಧಾನಿ ಹುದ್ದೆಯ ಪ್ರಬಲ ಸ್ಪರ್ಧಿಯಾಗಿದ್ದರು. ಇದು ಬಿಜೆಪಿ ಹಾಗೂ ನರೇಂದ್ರ ಮೋದಿ ಅವರಿಗೆ ಸಹಿಸಲು ಆಗಲಿಲ್ಲ. ಹಾಗಾಗಿ, ಬಿಜೆಪಿ ಹಾಗೂ ನರೇಂದ್ರ ಮೋದಿ ಅವರೇ ಜಯಲಲಿತಾ ಅವರನ್ನು ಹತ್ಯೆ ಮಾಡಿದ್ದಾರೆ. ನನ್ನ ಹೊರತಾಗಿ ಬೇರೆ ಯಾರೂ ಸ್ಪರ್ಧಿಸಬಾರದು ಎಂಬುದು ಮೋದಿ ಅವರ ನಿಲುವಾಗಿತ್ತು. ಹಾಗಾಗಿ, ಜಯಲಲಿತಾ ಅವರನ್ನು ಕೊಂದರು” ಎಂದು ಕಾರ್ಯಕ್ರಮವೊಂದರಲ್ಲಿ ಮಾರ್ಕಂಡೇಯನ್ ಹೇಳಿದ್ದಾರೆ. ಈ ವಿಡಿಯೊ ಈಗ ವೈರಲ್ ಆಗಿದೆ.
ತಿರುಗೇಟು ನೀಡಿದ ಬಿಜೆಪಿ
ಮಾರ್ಕಂಡೇಯನ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ. “ತಮಿಳುನಾಡು ಸರ್ಕಾರದ ದುರಾಡಳಿತದ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದರಿಂದಾಗಿ ಡಿಎಂಕೆ ಶಾಸಕರು ಸುಳ್ಳು ಹೇಳಲು ಆರಂಭಿಸಿದ್ದಾರೆ. ಆದರೆ, ಇದನ್ನೆಲ್ಲ ನೋಡಿಕೊಂಡು ಬಿಜೆಪಿ ಸುಮ್ಮನಿರುವುದಿಲ್ಲ ಎಂಬುದು ತಮಿಳುನಾಡು ಮುಖ್ಯಮಂತ್ರಿ ಅವರಿಗೆ ಗೊತ್ತಿರಲಿ” ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | A Raja | ಹಿಂದೂಗಳಾಗಿರುವ ತನಕ ನೀವು ಶೂದ್ರರೇ, ಡಿಎಂಕೆ ಸಂಸದ ಎ. ರಾಜಾ ವಿವಾದಾತ್ಮಕ ಹೇಳಿಕೆ