ನವದೆಹಲಿ: ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫಘಾನಿಸ್ತಾನದ ಮುಸ್ಲಿಮೇತರ ಅಲ್ಪಸಂಖ್ಯಾತರಿಗೆ ದೇಶದ ಪೌರತ್ವ ನೀಡುವ ದಿಸೆಯಲ್ಲಿ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ದೇಶದ 31 ಜಿಲ್ಲೆಗಳ ಮ್ಯಾಜಿಸ್ಟ್ರೇಟ್‌ಗಳು ಹಾಗೂ 9 ರಾಜ್ಯಗಳ ಗೃಹ ಕಾರ್ಯದರ್ಶಗಳಿಗೂ ನೆರೆ ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಅಧಿಕಾರ (Citizenship Grant) ವಹಿಸಿದೆ.
ಮೂರೂ ರಾಷ್ಟ್ರಗಳ ಮುಸ್ಲಿಮೇತರರು ಅಂದರೆ, ಹಿಂದೂಗಳು, ಸಿಖ್ಖರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರಿಗೆ 1955ರ ಪೌರತ್ವ ಕಾಯ್ದೆಯಡಿ ಮ್ಯಾಜಿಸ್ಟ್ರೇಟ್‌ಗಳು ಹಾಗೂ ಗೃಹ ಕಾರ್ಯದರ್ಶಿಗಳು ಇನ್ನು ಪೌರತ್ವ ನೀಡಬಹುದಾಗಿದೆ. ಪಾಕಿಸ್ತಾನ, ಬಾಂಗ್ಲಾ ಹಾಗೂ ಆಫ್ಘನ್‌ನಿಂದ ಹೆಚ್ಚಿನ ಜನ ವಲಸೆ ಬರುವ ರಾಜ್ಯಗಳಾದ ಗುಜರಾತ್, ರಾಜಸ್ಥಾನ, ಛತ್ತೀಸ್‌ಗಢ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿ ಹಾಗೂ ಮಹಾರಾಷ್ಟ್ರದ ಗೃಹ ಕಾರ್ಯದರ್ಶಿಗಳಿಗೆ ಹೊಸ ಅಧಿಕಾರ ಸಿಕ್ಕಿದೆ.
ಪೌರತ್ವ ಕಾಯ್ದೆ ಅಡಿ ಕೇಂದ್ರ ಸರ್ಕಾರವು 2021ರ ಏಪ್ರಿಲ್ 1ರಿಂದ ಡಿಸೆಂಬರ್ 31ರ ಅವಧಿಯಲ್ಲಿ 1,414 ನಿರಾಶ್ರಿತರಿಗೆ ಪೌರತ್ವ ನೀಡಿದೆ. ಮೂರೂ ರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (CAA) ರೂಪಿಸಿದ್ದರೂ ಇದುವರೆಗೆ ಸಿಎಎ ನಿಯಮಗಳ ಕುರಿತು ಅಧಿಸೂಚನೆ ಹೊರಡಿಸಿಲ್ಲ.
ಇದನ್ನೂ ಓದಿ | ಕಮರಿದ ಪೌರತ್ವದ ಕನಸು: ಪಾಕಿಸ್ತಾನಕ್ಕೆ ಮರಳಿದ 1500ಕ್ಕೂ ಅಧಿಕ ಹಿಂದುಗಳು