ನವದೆಹಲಿ: ದಾಂಪತ್ಯ ದ್ರೋಹವನ್ನು (infidelity) ಒಳಗೊಂಡಿರುವ ಪ್ರಕರಣಗಳಲ್ಲಿ ಮಗುವಿನ ಡಿಎನ್‌ಎ ಪರೀಕ್ಷೆಯನ್ನು ದಾಂಪತ್ಯದ್ರೋಹವನ್ನು ಸಾಬೀತುಪಡಿಸಲು ಶಾರ್ಟ್‌ಕಟ್ ಮಾರ್ಗವಾಗಿ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಡಿಎನ್‌ಎ ಪರೀಕ್ಷೆಯ ಮಗುವಿನ ಖಾಸಗಿ ಹಕ್ಕು ಉಲ್ಲಂಘನೆ ಮಾಡುತ್ತದೆ ಮತ್ತು ಮಾನಸಿಕ ಆಘಾತಕ್ಕೂ ಕಾರಣವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
ಜಸ್ಟೀಸ್ ವಿ ರಾಮಸುಬ್ರಮಣಿಯನ್ ಮತ್ತು ಜಸ್ಟೀಸ್ ಬಿ ವಿ ನಾಗರತ್ನ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿದ್ದು, ಮಗುವಿನ ಪಿತೃತ್ವವು ನೇರವಾಗಿ ಸಮಸ್ಯೆಯಾಗದ ವೈವಾಹಿಕ ಪ್ರಕರಣದಲ್ಲಿ ಮಗುವಿನ ಡಿಎನ್‌ಎ ಪರೀಕ್ಷೆಯನ್ನು ಯಾಂತ್ರಿಕವಾಗಿ ನಿರ್ದೇಶಿಸುವುದನ್ನು ನ್ಯಾಯಾಲಯವು ಸಮರ್ಥಿಸುವುದಿಲ್ಲ ಎಂದು ಹೇಳಿದೆ.
ಎರಡೂ ಕಡೆ(ಗಂಡು ಮತ್ತು ಹೆಂಡತಿ) ಪಾರ್ಟಿಗಳು ಕೇವಲ ಪಿತೃತ್ವದ ಕಾರಣಕ್ಕೆ ವಿವಾದವಾಗಿದ್ದರೆ, ಆ ವಿವಾದವನ್ನು ಪರಿಹರಿಸಲು ನ್ಯಾಯಾಲಯವು ಡಿಎನ್‌ಎ ಪರೀಕ್ಷೆ ಅಥವಾ ಅಂತಹ ಇತರ ಪರೀಕ್ಷೆಯನ್ನು ನಿರ್ದೇಶಿಸಬೇಕು ಎಂದು ವಾದಿಸುವುದರಲ್ಲಿ ಅರ್ಥವಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿತು.
ಇದನ್ನೂ ಓದಿ: Adani Group Row: ಹೂಡಿಕೆದಾರ ರಕ್ಷಣೆಗೆ ತಜ್ಞರ ಸಮಿತಿಗೆ ಸಲಹೆ ಮಾಡಿದ ಸುಪ್ರೀಂ ಕೋರ್ಟ್, ಸರ್ಕಾರ ಒಪ್ಪುವುದೇ?
ಪಿತೃತ್ವ ನಿರಾಕರಣೆ ಮತ್ತು ಸ್ವೀಕಾರಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯ ಪಾರ್ಟಿಗಳು ಕೋರ್ಟ್ ಮುಂದೆ ಸಾಕ್ಷ್ಯಾಧಾರಗಳನ್ನು ಮುಂದಿಡಬೇಕು. ಈ ಸಾಕ್ಷ್ಯಗಳನ್ನು ಆಧರಿಸಿ ನ್ಯಾಯಾಲಯಕ್ಕೆ ನಿರ್ಧರಿಸಲು ಸಾಧ್ಯವಾಗಲೇ ಇಲ್ಲ ಎಂದಾದರೆ ಅಥವಾ ಡಿಎನ್ಎ ಟೆಸ್ಟ್ ಮಾಡದೆಯೇ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಎಂದಾದರೆ ಮಾತ್ರವೇ ನ್ಯಾಯಾಲಯವು ಮಗುವಿನ ಡಿಎನ್ಎ ಟೆಸ್ಟ್‌ಗೆ ನಿರ್ದೇಶಿಸಬಹುದಾಗಿದೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಡಿಎನ್ಎ ಟೆಸ್ಟ್‌ಗೆ ಸೂಚಿಸುವಂತಿಲ್ಲ ಎಂದು ಪೀಠ ಹೇಳಿದೆ.