ನವ ದೆಹಲಿ: ಹವಾಮಾನ ಬದಲಾವಣೆಯಾಗುತ್ತಿರುವ ಕಾರಣ ಜ್ವರ, ಶೀತ, ಕೆಮ್ಮು ಹೆಚ್ಚುತ್ತಿದೆ. ಯಾರಿಗೇ ನೋಡಿದರೂ ಜ್ವರ, ನೆಗಡಿ, ಗಂಟಲು ನೋವು, ಜ್ವರವೆಂದು ವೈದ್ಯರ ಬಳಿ ಹೋಗುತ್ತಿದ್ದಾರೆ. ಇದೇ ಹೊತ್ತಲ್ಲಿ ಭಾರತೀಯ ವೈದ್ಯಕೀಯ ಸಂಘ ವೈದ್ಯರಿಗೆ ಒಂದು ನಿರ್ದೇಶನ ನೀಡಿದೆ. ಹೀಗೆ ಹವಾಮಾನ ಬದಲಾವಣೆಯಿಂದ ಬರುತ್ತಿರುವ ಜ್ವರ-ಶೀತ-ಕೆಮ್ಮಿಗೆ ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ರೋಗಿಗಳಿಗೆ (Antibiotics Use) ಸೂಚಿಸಬೇಡಿ ಎಂದು ಹೇಳಿದೆ. ಈ ಬಗ್ಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರಕಟಣೆಯನ್ನು ಹೊರಡಿಸಿದೆ.
‘ಈಗ ದೇಶಾದ್ಯಂತ ಜ್ವರ, ಕೆಮ್ಮು-ನೆಗಡಿ ಪ್ರಾರಂಭವಾಗಿದೆ. ಹಲವರಲ್ಲಿ ಈ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಇನ್ನೂ ಕೆಲವರಲ್ಲಿ ಮುಂದುವರಿದು ವಾಂತಿ, ಮೈಕೈ ನೋವು, ಗಂಟಲು ನೋವು, ಅತಿಸಾರಗಳೂ ಉಂಟಾಗುತ್ತಿದೆ. ಸುಮಾರು ಏಳು ದಿನಗಳವರೆಗೆ ಈ ಲಕ್ಷಣಗಳು ಇರುತ್ತಿವೆ. ಮೂರನೇ ದಿನಕ್ಕೆ ಜ್ವರ ಹೋದರೂ, ಕೆಮ್ಮು ಮೂರುವಾರದವರೆಗೆ ಇರಬಹುದು. ಇಂಥ ಲಕ್ಷಣಗಳು ಉಂಟಾಗಿ, ವೈದ್ಯರ ಬಳಿ ಬರುವವ ಹಲವರಲ್ಲಿ ಎಚ್3ಎನ್2 ವೈರಸ್ ಕಂಡುಬರುತ್ತಿದೆ ಎಂದು ರೋಗ ನಿಯಂತ್ರಣದ ರಾಷ್ಟ್ರೀಯ ಕೇಂದ್ರ (NCDC) ಹೇಳಿದೆ. ಇದು ಈಗ ಚಳಿಗಾಲ ಕಳೆದು, ಬೇಸಿಗೆ ಬರುವ ಹೊತ್ತಿಗೆ ಹವಾಮಾನದಲ್ಲಿ ಉಂಟಾಗುವ ಬದಲಾವಣೆಯಿಂದ ಕಾಣಿಸಿಕೊಳ್ಳುವ ಸಾಮಾನ್ಯ ಜ್ವರ-ಶೀತ-ಕೆಮ್ಮು. 15ವರ್ಷದ ಮೇಲ್ಪಟ್ಟ, 50 ವರ್ಷದ ಒಳಗಿನವರಿಗೆ ಕಾಣಿಸಿಕೊಳ್ಳುತ್ತಿದೆ. ಅದೇನೇ ಇದ್ದರೂ, ಆ ಲಕ್ಷಣಗಳನ್ನು ನೋಡಿಕೊಂಡು, ಅದಕ್ಕೆ ತಕ್ಕಂತೆ ಸಾದಾ ಚಿಕಿತ್ಸೆ ಕೊಟ್ಟರೆ ಸಾಕು. ಆ್ಯಂಟಿಬಯೋಟಿಕ್ ಮಾತ್ರೆ, ಇಂಜೆಕ್ಷನ್ಗಳು ಅಗತ್ಯವಿಲ್ಲ’ ಎಂದು ಐಎಂಸಿ ತನ್ನ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.
‘ಅದೆಷ್ಟೋ ಮಂದಿ ಈಗಾಗಲೇ ತಮಗೆ ಜ್ವರ-ಕೆಮ್ಮು-ಶೀತ ಬರುತ್ತಿದ್ದಂತೆ ವಿವಿಧ ಆ್ಯಂಟಿ ಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳಲು ಶುರು ಮಾಡಿದ್ದಾರೆ. ಹಾಗೆ ಮಾಡಬೇಡಿ, ಹಾಗೊಮ್ಮೆ ತೆಗೆದುಕೊಂಡರೂ, ಒಂದು ಸಲ ಸ್ವಲ್ಪ ಆರಾಮಾದಂತೆ ಕಂಡ ತಕ್ಷಣ ಆ್ಯಂಟಿಬಯೋಟಿಕ್ ಮಾತ್ರೆಗಳ ಸೇವನೆ ನಿಲ್ಲಿಸಿಬಿಡಿ’ ಎಂದು ಸಲಹೆ ನೀಡಿದೆ. ‘amoxicillin, norfloxacin, ciprofloxacin, ofloxacin, levfloxacin ನಂಥ ಆ್ಯಂಟಿಬಯೋಟಿಕ್ ಮಾತ್ರೆಗಳ ದುರ್ಬಳಕೆ ಆಗುತ್ತಿದೆ. ಅನಗತ್ಯವಾಗಿ ಈ ಮಾತ್ರೆಗಳನ್ನು ವೈದ್ಯರು ರೋಗಿಗಳಿಗೆ ಶಿಫಾರಸು ಮಾಡುತ್ತಿದ್ದಾರೆ. ಶೇ.70ರಷ್ಟು ಅತಿಸಾರದ ಕೇಸ್ಗಳಲ್ಲಿ ಆ್ಯಂಟಿಬಯೋಟಿಕ್ ಅಗತ್ಯ ಖಂಡಿತವಾಗಿಯೂ ಇರುವುದಿಲ್ಲ. ಆದರೆ ವೈದ್ಯರು ಚೀಟಿಯಲ್ಲಿ ಅದನ್ನೇ ಬರೆದುಕೊಡುತ್ತಿದ್ದಾರೆ. ಇದು ಸರಿಯಲ್ಲ’ ಎಂದು ಹೇಳಿದೆ.
ಇದನ್ನೂ ಓದಿ: Antibiotics Use| ಸಣ್ಣಪುಟ್ಟ ಜ್ವರಕ್ಕೆಲ್ಲ ಆ್ಯಂಟಿಬಯೋಟಿಕ್ ಔಷಧ ನೀಡಬೇಡಿ; ವೈದ್ಯರಿಗೆ ಸೂಚಿಸಿದ ವೈದ್ಯಕೀಯ ಸಂಶೋಧನಾ ಮಂಡಳಿ
ಹೀಗೆ ಸತತವಾಗಿ ಆ್ಯಂಟಿಬಯೋಟಿಕ್ಗಳನ್ನು ತೆಗೆದುಕೊಳ್ಳುವುದರಿಂದ ಮುಂದೆ ಅಗತ್ಯವಿದ್ದಾಗ ತೆಗೆದುಕೊಂಡರೂ ಅದಕ್ಕೆ ನಮ್ಮ ದೇಹ ಸ್ಪಂದಿಸುವುದಿಲ್ಲ. ನಮ್ಮಲ್ಲಿನ ಪ್ರತಿಜೀವಕಗಳು ಆ್ಯಂಟಿಬಯೋಟಿಕ್ ಔಷಧಗಳಿಂದ ಪ್ರಚೋದಿತ ಆಗುವುದು ನಿಲ್ಲುತ್ತದೆ ಎಂಬ ಕಾರಣಕ್ಕೆ ಐಎಂಎ ಹೀಗೆ ಹೇಳಿದೆ. ಕಳೆದ ಮೂರು ತಿಂಗಳ ಹಿಂದೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೂಡ ಇದೇ ಮಾರ್ಗಸೂಚಿ ಬಿಡುಗಡೆ ಮಾಡಿತ್ತು.