Site icon Vistara News

Doctor’s Day: ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ವೃದ್ಧಿಗೆ ಕ್ರಮ; ಪ್ರಧಾನಿ ಮೋದಿ ಭರವಸೆ

Doctor's Day

Doctor's Day

ನವದೆಹಲಿ: ಇಂದು (ಜುಲೈ 1) ರಾಷ್ಟ್ರೀಯ ವೈದ್ಯರ ದಿನ (Doctor’s Day). ಈ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು, ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ಸುಧಾರಿಸಲು ಕ್ರಮ ಕೈಗೊಳ್ಳಲಿದೆ, ವೈದ್ಯರಿಗೆ ಸೂಕ್ತ ರಕ್ಷಣೆ ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ.

ಡಾ. ಬಿಪಿನ್‌ ಚಂದ್ರ ರಾಯ್‌ ಅವರ ಸಂಸ್ಮರಣಾರ್ಥವಾಗಿ ಭಾರತ ಸರ್ಕಾರ ಪ್ರತಿವರ್ಷ ಜುಲೈ 1ರಂದು ವೈದ್ಯರ ದಿನವನ್ನಾಗಿ ಆಚರಿಸುತ್ತಿದೆ. 1991ರಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಘೋಷಿಸಲಾಯಿತು. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯಾಗಿದ್ದ ಡಾ. ಬಿಪಿನ್‌ ಚಂದ್ರ ರಾಯ್‌, ಖ್ಯಾತ ವೈದ್ಯರು ಮತ್ತು ಸ್ವಾತಂತ್ರ ಹೋರಾಟಗಾರರೂ ಆಗಿದ್ದರು. ಭಾರತೀಯ ವೈದ್ಯಕೀಯ ಸಂಘ, ಭಾರತೀಯ ವೈದ್ಯಕೀಯ ಮಂಡಳಿ ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳನ್ನು ಹುಟ್ಟುಹಾಕಿ, ವೈದ್ಯಕೀಯ ಕ್ಷೇತ್ರಕ್ಕೆ ಸಾಂಸ್ಥಿಕ ಬಲವನ್ನು ನೀಡುವಲ್ಲಿ ಡಾ. ರಾಯ್‌ ಪ್ರಮುಖರಾಗಿದ್ದರು. ತಾವೇ ಸ್ವತಃ ಒಳ್ಳೆಯ ವೈದ್ಯರಾಗಿ, ಬಹಳಷ್ಟು ಜೀವಗಳನ್ನು ಉಳಿಸಿದ್ದರು. ಸ್ವಾತಂತ್ರ ಹೋರಾಟದಲ್ಲೂ ಅವರು ಪಾಲ್ಗೊಂಡಿದ್ದರು. ದೇಶಕ್ಕೆ ಅವರು ನೀಡಿದ ಕೊಡುಗೆಗಾಗಿ, ಭಾರತದ ಅತ್ತ್ಯುನ್ನತ ನಾಗರಿಕ ಪ್ರಶಸ್ತಿ ʻಭಾರತ ರತ್ನʼ ಪುರಸ್ಕಾರವನ್ನು ನೀಡಿ ಗೌರವಿಸಲಾಗಿದೆ.

“ವೈದ್ಯರ ದಿನದ ಶುಭಾಶಯಗಳು. ಇದು ನಮ್ಮ ಆರೋಗ್ಯವನ್ನು ಕಾಪಾಡುವ ನಿಜವಾದ ಹೀರೋಗಳನ್ನು ಸ್ಮರಿಸುವ, ಗೌರವಿಸುವ ದಿನ. ವೈದ್ಯರು ಅತ್ಯಂತ ಸವಾಲಿನ ಸಂಕೀರ್ಣತೆಗಳನ್ನೂ ತಮ್ಮ ಕೌಶಲ್ಯದಿಂದ ನಿವಾರಿಸುತ್ತಾರೆ. ಭಾರತದಲ್ಲಿ ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯವನ್ನು ಸುಧಾರಿಸಲು ಮತ್ತು ವೈದ್ಯರು ತಾವು ಅರ್ಹರಾದ ಗೌರವವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ” ಎಂದು ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇಂದು ಚಾರ್ಟರ್ಡ್ ಅಕೌಂಟೆಂಟ್‌ ದಿನವಾಗಿರುವುದರಿಂದ ಅವರ ಸೇವೆಯನ್ನೂ ಪ್ರಧಾನಿ ಸ್ಮರಿಸಿದ್ದಾರೆ. ದೇಶದ ಆರ್ಥಿಕತೆಗೆ ಚಾರ್ಟರ್ಡ್ ಅಕೌಂಟೆಂಟ್‌ಗಳೂ ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ʼʼಹ್ಯಾಪಿ ಚಾರ್ಟೆಡ್‌ ಅಕೌಂಟೆಂಟ್ಸ್‌ ಡೇ. ಸಿಎ ನಮ್ಮ ಆರ್ಥಿಕತೆಯಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ. ಅವರ ಪರಿಣತಿ ಮತ್ತು ಕಾರ್ಯತಂತ್ರದ ಒಳನೋಟಗಳು ವ್ಯವಹಾರಗಳು ಮತ್ತು ವ್ಯಕ್ತಿಗಳಿಗೆ ಸಮಾನವಾಗಿ ಪ್ರಯೋಜನಕಾರಿಯಾಗಿವೆ. ಅವರು ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಗೆ ಗಮನಾರ್ಹ ಕೊಡುಗೆ ನೀಡುತ್ತಾರೆ. ಅವರು ನಮ್ಮ ಆರ್ಥಿಕ ಯೋಗಕ್ಷೇಮಕ್ಕೆ ಅತ್ಯಗತ್ಯʼʼ ಎಂದು ಶ್ಲಾಘಿಸಿದ್ದಾರೆ.

ಅಕೌಂಟೆಂಟ್ ದಿನದ ಹಿನ್ನೆಲೆ

ಸಿಎ ಕೋರ್ಸ್ ಮತ್ತು ಪರೀಕ್ಷೆ ನಡೆಸುವ ಹಾಗೂ ಸಿಎಗಳ ನೊಂದಣಿ ಇರುವ ಐಸಿಎಐ ಸಂಸ್ಥೆಯ ಸಂಸ್ಥಾಪನೆಯಾಗಿ 75 ವರ್ಷ ಆಗಿದೆ. 1949ರ ಜುಲೈ 1ಕ್ಕೆ ಇನ್ಸ್​ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸ್ಥಾಪನೆಯಾಗಿತ್ತು. ಹೀಗಾಗಿ ಈ ದಿನವನ್ನು ಪ್ರತೀ ವರ್ಷ ಚಾರ್ಟರ್ಡ್ ಅಕೌಂಟೆಂಟ್ ದಿನವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿ ಸದ್ಯ ಇರುವ ಕಠಿಣ ಕೋರ್ಸ್​ಗಳಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್ ಕೂಡ ಒಂದು. ಇದರ ಪಾಸಿಂಗ್ ಪರ್ಸಂಟೇಜ್ ಕೇವಲ ಶೇ. 8ರಿಂದ 20. ಐಸಿಎಐನಿಂದ ನಡೆಸಲಾಗುವ ಸಿಎ ಪರೀಕ್ಷೆ ತೇರ್ಗಡೆಯಾದವರು ಮಾತ್ರವೇ ಕಂಪನಿಗಳ ಆಡಿಟಿಂಗ್ ಮಾಡಬಹುದು.

ಇದನ್ನೂ ಓದಿ: National Doctor’s Day: ಇಂದು ರಾಷ್ಟ್ರೀಯ ವೈದ್ಯರ ದಿನ; ಕಾಳಜಿಯ ಕೈಗಳಿಗೆ ಕೃತಜ್ಞತೆ ಹೇಳುವ ದಿನ

Exit mobile version