Site icon Vistara News

Doctors Strike: ನಾವು ಮುಂದಿನ ಸಂತ್ರಸ್ತರಾಗಲು ಬಯಸುವುದಿಲ್ಲ; ಪ್ರತಿಭಟನಾನಿರತ ವೈದ್ಯರ ಕಿಡಿನುಡಿ

Doctors Strike

ನವದೆಹಲಿ: ಪಶ್ಚಿಮ ಬಂಗಾಳದ ಕೋಲ್ಕತಾ ಆರ್‌ಜಿ ಕರ್‌ (RG Kar Medical College and Hospital) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಬರ್ಬರ ಕೊಲೆ (Kolkata Doctor Murder Case) ಖಂಡಿಸಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ (Doctors Strike).

ಭಾರತೀಯ ವೈದ್ಯಕೀಯ ಸಂಘ (Indian Medical Association) ಆಗಸ್ಟ್ 17ರಂದು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿತ್ತು. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6 ಗಂಟೆವರೆಗೆ 24 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ತುರ್ತು ವೈದ್ಯಕೀಯ ಸೇವೆಯನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳನ್ನು ಹಿಂತೆಗೆದುಕೊಂಡಿತ್ತು. ಎಲ್ಲ ವೈದ್ಯರು ಓಪಿಡಿ ಸೇವೆಗಳಿಗೆ ಹಾಜರಾಗದೆ ಪ್ರತಿಭಟನೆ ನಡೆಸಿದ್ದು, ಇದರಿಂದ ಹಲವೆಡೆ ವೈದ್ಯಕೀಯ ಸೇವೆ ವ್ಯತ್ಯಯಗೊಂಡಿತು.

ಇಂದೂ ಮುಂದುವರಿದ ಪ್ರತಿಭಟನೆ

ಇತ್ತ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮುಷ್ಕರ ಮುಂದುವರಿದಿದ್ದು, ವೈದ್ಯಕೀಯ ಸೇವೆ ಮೇಲೆ ಪರಿಣಾಮ ಬೀರಿದೆ. ಕಿರಿಯ ವೈದ್ಯರು ಸತತ ಹತ್ತನೇ ದಿನವೂ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯ ಓಪಿಡಿ ವಿಭಾಗ ಇಂದೂ ಮುಚ್ಚಿದ್ದು, ಹಿರಿಯ ವೈದ್ಯರು ತುರ್ತು ಚಿಕ್ಸಿತ್ಸೆಗೆ ಕ್ರಮ ಕೈಗೊಂಡಿದ್ದಾರೆ. “ನಾವು ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರಲು ಹೋರಾಟ ನಡೆಸುತ್ತಿಲ್ಲ. ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳು ನಮಗೂ ಅರ್ಥವಾಗುತ್ತವೆ. ಆದರೆ ಕರ್ತವ್ಯದಲ್ಲಿದ್ದ ವೈದ್ಯೆಯ ಮೇಲೆ ಅತ್ಯಾಚಾರ ನಡೆದು ಕೊಲೆಗೈದ ಈ ಸಂದರ್ಭದಲ್ಲಿ ನಮ್ಮ ಪ್ರತಿಭಟನೆ ಅನಿವಾರ್ಯ ಎನಿಸಿಕೊಂಡಿದೆ. ನಮ್ಮ ಸಹೋದರಿಗೆ ನ್ಯಾಯ ಸಿಗುವವರೆಗೂ ಮತ್ತು ಸರ್ಕಾರ ನಮಗೆ ಸಂಪೂರ್ಣ ಭದ್ರತೆಯ ವ್ಯವಸ್ಥೆ ಮಾಡುವವರೆಗೂ ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂದು ಪ್ರತಿಭಟನಾನಿರತ ವೈದ್ಯರೊಬ್ಬರು ತಿಳಿಸಿದ್ದಾರೆ.

ಅತ್ಯಾಚಾರ ನಡೆಸಿದ ಅಪರಾಧಿಗಳಿಗೆ ಆದಷ್ಟು ಬೇಗ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಮರಣೋತ್ತರ ಪರೀಕ್ಷಾ ವರದಿಯನ್ನು ಬಹಿರಂಗಪಡಿಸಬೇಕು ಎಂದೂ ಪ್ರತಿಭಟನಾನಿರತ ಕಿರಿಯ ವೈದ್ಯರು ಆಗ್ರಹಿಸಿದ್ದಾರೆ.

ʼಮುಂದಿನ ಸಂತ್ರಸ್ತೆ ಆಗಲು ಇಚ್ಛಿಸುವುದಿಲ್ಲʼ

ಕರ್ತವ್ಯ ನಿರತ ವೈದ್ಯರಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದ್ದು, ಈ ವೇಳೆ ʼನಾನು ಮುಂದಿನ ಸಂತ್ರಸ್ತೆ ಆಗಲು ಇಚ್ಛಿಸುವುದಿಲ್ಲʼ ಎನ್ನುವ ಘೋಷ ವಾಕ್ಯ ಗಮನ ಸೆಳೆಯುತ್ತಿದೆ. ಈ ಮಧ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿ ಸಂಜಯ್ ರಾಯ್‌ನ ಮಾನಸಿಕ ವಿಶ್ಲೇಷಣೆಯನ್ನು ಸಿಬಿಐ ತಂಡ ಇಂದು ನಡೆಸಲಿದೆ. ಈ ಪ್ರಕರಣದಲ್ಲಿ ಆರ್‌ಜಿ ಕರ್‌ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಪೊಲೀಸರಿಗೆ ಕರೆ ಮಾಡಲು ವಿಳಂಬವಾಗಲು ಕಾರಣಗಳ ಬಗ್ಗೆ ಘೋಷ್ ಅವರನ್ನು ಪ್ರಶ್ನಿಸಲಾಗುತ್ತಿದೆ. ಸಿಬಿಐ ತಂಡ ಶನಿವಾರ ಸಂಜಯ್ ರಾಯ್‌ ನಿವಾಸದಿಂದ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮೂಲಗಳ ಪ್ರಕಾರ ವೈದ್ಯೆಯ ಮೃತದೇಹದ ಬಳಿ ಡೈರಿ ಪತ್ತೆಯಾಗಿದ್ದು, ಇದರಲ್ಲಿನ ಹಲವು ಪುಟಗಳು ಹರಿದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆಯೂ ತನಿಖೆ ನಡೆಯಲಿದೆ.

ಇದನ್ನೂ ಓದಿ: Kolkata Doctor Murder Case: ಜನರಲ್ಲಿ ಗೊಂದಲ ಮೂಡಿಸುವ ಮಮತಾ ಬ್ಯಾನರ್ಜಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಲಿ; ನಿರ್ಭಯಾ ತಾಯಿ

Exit mobile version