ಲಖನೌ: ದೇಶದಲ್ಲಿ ನಡೆಯುವ ಕೆಲವು ಅಪಸವ್ಯಗಳು ವ್ಯವಸ್ಥೆಯ ಲೋಪಗಳಿಗೆ ಕನ್ನಡಿ ಹಿಡಿಯುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಕೈಕೊಟ್ಟ ಕಾರಣ ವೈದ್ಯರು ಮೊಬೈಲ್ ಟಾರ್ಚ್‌ಲೈಟ್‌ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿಯೇ ಇಂತಹ ಲೋಪ ಕಂಡುಬಂದಿದ್ದು, ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ಚಿಕಿತ್ಸೆ ನೀಡಿದ ವಿಡಿಯೊ ವೈರಲ್ (Viral Video) ಆಗಿದೆ.
ಉತ್ತರ ಪ್ರದೇಶದ ಬಲಿಯಾ ಜಿಲ್ಲಾಸ್ಪತ್ರೆಯಲ್ಲಿ ಕಳೆದ ಶನಿವಾರ ಒಂದು ಗಂಟೆ ವಿದ್ಯುತ್ ಕಡಿತವಾಗಿದೆ. ಜನರೇಟರ್ ಇಲ್ಲದೆ, ಬೇರಾವುದೇ ತುರ್ತು ವಿದ್ಯುತ್ ಸೌಲಭ್ಯವಿಲ್ಲದೆ ವೈದ್ಯರು ಮೊಬೈಲ್ ಟಾರ್ಚ್ ಬಳಸಿಯೇ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.
ವೈದ್ಯರು ಹೇಳುವುದೇನು?
ಜಿಲ್ಲಾಸ್ಪತ್ರೆ ವೈದ್ಯರು ಈ ಕುರಿತು ಸ್ಪಷ್ಟನೆ ನೀಡಿದ್ದು, ಒಂದು ಗಂಟೆ ಅಲ್ಲ, ಕೇವಲ ೧೫-೨೦ ನಿಮಿಷ ವಿದ್ಯುತ್ ಕಡಿತವಾಗಿದೆ ಎಂದಿದ್ದಾರೆ. “ಕನಿಷ್ಠ ೧೫-೨೦ ನಿಮಿಷ ಮಾತ್ರ ವಿದ್ಯುತ್ ಕಡಿತವಾಗಿದೆ. ಜನರೇಟರ್ ಆನ್ ಮಾಡಲು ತುಸು ವಿಳಂಬವಾಗಿದೆ ಅಷ್ಟೆ” ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮೊದಲು ಆಸ್ಪತ್ರೆಯಲ್ಲಿದ್ದ ಬ್ಯಾಟರಿಗಳನ್ನು ಕಳ್ಳತನ ಮಾಡಿದ ಕಾರಣ ಬ್ಯಾಟರಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಹಾಗಾಗಿ, ಜನರೇಟರ್ ಆನ್ ಮಾಡಲು ವಿಳಂಬವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | ಶಾಲೆಯಲ್ಲಿ ಸಾಮೂಹಿಕ ಪ್ರಾರ್ಥನೆ ವೇಳೆ ತಲೆ ತಿರುಗಿ ಬಿದ್ದ ವಿದ್ಯಾರ್ಥಿನಿಯರು, ಆಸ್ಪತ್ರೆಗೆ ದಾಖಲು