Site icon Vistara News

Doda Encounter: ಜಮ್ಮು- ಕಾಶ್ಮೀರದಲ್ಲಿ ಉಗ್ರರ ದಾಳಿ; ಬಿಜೆಪಿಯ ತಪ್ಪು ನೀತಿಯೇ ಕಾರಣ ಎಂದ ರಾಹುಲ್‌ ಗಾಂಧಿ

Doda Encounter

Doda Encounter

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ (Jammu Kashmir) ಉಗ್ರರ ಉಪಟಳ ಮುಂದುವರಿದಿದೆ. ದೋಡಾ ಜಿಲ್ಲೆಯಲ್ಲಿ ಯೋಧರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ (Doda Encounterr) ಒಬ್ಬ ಅಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಭಾರತದ ಸೈನಿಕರು ಮತ್ತು ಅವರ ಕುಟುಂಬಗಳು ಬಿಜೆಪಿಯ ತಪ್ಪು ನೀತಿಗಳಿಂದ ಬಳಲುತ್ತಿವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ರಾಹುಲ್‌ ಗಾಂಧಿ, ಮೊದಲಿಗೆ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಬಳಿಕ ಬಿಜೆಪಿ ನಡೆಯನ್ನು ಕಟುವಾದ ಶಬ್ಧಗಳಲ್ಲಿ ಟೀಕಿಸಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದೇನು?

“ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ. ಹುತಾತ್ಮ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸುತ್ತೇನೆ. ಒಂದರ ನಂತರ ಒಂದರಂತೆ ಇಂತಹ ಭಯಾನಕ ಘಟನೆಗಳು ನಡೆಯುತ್ತಿರುವುದು ಅತ್ಯಂತ ದುಃಖಕರ ಮತ್ತು ಆತಂಕಕಾರಿ. ಈ ನಿರಂತರ ಭಯೋತ್ಪಾದಕ ದಾಳಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿನ ಅವ್ಯವಸ್ಥೆಯನ್ನು ಎತ್ತಿ ತೋರಿಸುತ್ತಿವೆ. ನಮ್ಮ ಸೈನಿಕರು ಮತ್ತು ಅವರ ಕುಟುಂಬ ಸದಸ್ಯರು ಬಿಜೆಪಿಯ ತಪ್ಪು ನೀತಿಗಳಿಂದ ಬಳಲುತ್ತಿದ್ದಾರೆʼʼ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಮುಂದುವರಿದು, ʼʼಈ ಪುನರಾವರ್ತಿತ ಭದ್ರತಾ ಲೋಪಗಳಿಗೆ ಕೇಂದ್ರ ಸರ್ಕಾರವು ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು. ದೇಶದ್ರೋಹಿಗಳ ವಿರುದ್ಧ ಮತ್ತು ಸೈನಿಕರ ಮೇಲೆ ದಾಳಿ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ದೇಶಭಕ್ತ ಭಾರತೀಯನ ಆಗ್ರಹ. ಈ ದುಃಖದ ಸಮಯದಲ್ಲಿ ಇಡೀ ದೇಶವು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನಿಂದ ನಿಂತಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ. ಭದ್ರತಾ ಕಾರ್ಯತಂತ್ರವನ್ನು ಎಚ್ಚರಿಕೆಯಿಂದ ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ಸುಳ್ಳು ಧೈರ್ಯ, ನಕಲಿ ನಿರೂಪಣೆಗಳ ಮೂಲಕ ರಾಷ್ಟ್ರೀಯ ಭದ್ರತೆ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದ್ದಾರೆ. ಹೇಡಿ ಭಯೋತ್ಪಾದಕರು ನಡೆಸುತ್ತಿರುವ ಈ ಹಿಂಸಾಚಾರದ ಕೃತ್ಯಗಳಿಗೆ ಖಂಡನೆಯ ಪದಗಳು ಸಾಕಾಗುವುದಿಲ್ಲ, ಸೂಕ್ತ ಯೋಜನೆ ಅಗತ್ಯ ಎಂದು ಖರ್ಗೆ ತಿಳಿಸಿದ್ದಾರೆ.

“ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಯೋತ್ಪದಕ ದಾಳಿ ನಡೆಯುತ್ತಿದೆ ಎನ್ನುವುದನ್ನು ಸರ್ಕಾರ ತಿಳಿದುಕೊಳ್ಳಬೇಕು. ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಸಾಮೂಹಿಕವಾಗಿ ಹೋರಾಡಬೇಕು. ಕಾಂಗ್ರೆಸ್ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಬೆಂಬಲಕ್ಕೆ ನಿಲ್ಲಲಿದೆʼʼ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kashmir Encounter: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ನಾಲ್ವರು ಯೋಧರು ಹುತಾತ್ಮ; ಮುಂದುವರಿದ ಕಾರ್ಯಾಚರಣೆ

ʼʼದೋಡಾದಲ್ಲಿ ಹುತಾತ್ಮರಾದ ಅಧಿಕಾರಿ ಸೇರಿದಂತೆ ನಾಲ್ವರು ಸೈನಿಕರ ಕುಟುಂಬಗಳಿಗೆ ತಮ್ಮ ಹೃದಯ ಮಿಡಿಯುತ್ತದೆ. ಭಾರತ ಮಾತೆಯ ಸೇವೆಯಲ್ಲಿ ಈ ನಾಲ್ವರು ಸರ್ವೋಚ್ಚ ತ್ಯಾಗ ಮಾಡಿದ್ದಾರೆ. ನಮ್ಮ ಪ್ರಾರ್ಥನೆಗಳು ಗಾಯಗೊಂಡವರೊಂದಿಗಿವೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿʼʼ ಎಂದು ಹೇಳಿದ್ದಾರೆ.

Exit mobile version