Site icon Vistara News

Citizenship Amendment Act : ಸಿಎಎ ಜಾರಿಯಿಂದ ಮುಸ್ಲಿಂ ವಲಸಿಗರಿಗೆ ಸಮಸ್ಯೆಯಿದೆಯೇ? ಸರ್ಕಾರ ಹೇಳಿದ್ದೇನು?

CAA Act

ನವದೆಹಲಿ: ಹೊಸದಾಗಿ ಜಾರಿಗೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆ (Citizenship Amendment Act) ಅಂದರೆ ಸಿಎಎ ಭಾರತೀಯ ಮುಸ್ಲಿಮರ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ಮೊಟಕುಗೊಳಿಸುವುದಿಲ್ಲ ಎಂದು ಸರ್ಕಾರ ಇಂದು ಪುನರುಚ್ಚರಿಸಿದೆ. ಭಾರತೀಯ ಪೌರತ್ವ ಪಡೆಯಲು ವಿಶ್ವದ ಯಾವುದೇ ಭಾಗದಿಂದ ಮುಸ್ಲಿಮರಿಗೆ ಯಾವುದೇ ನಿರ್ಬಂಧವಿಲ್ಲ ಎಂಬುದಾಗಿಯೂ ಪ್ರತಿಪಾದಿಸಿದೆ. ಪೌರತ್ವ ಕಾಯ್ದೆಯ ಸೆಕ್ಷನ್ 6 ರ ಅಡಿಯಲ್ಲಿ ವಿಶ್ವದ ಯಾವುದೇ ಭಾಗದ ಮುಸ್ಲಿಮರು ಭಾರತೀಯ ಪೌರತ್ವವನ್ನು ಪಡೆಯಬಹುದು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

2014 ರ ಡಿಸೆಂಬರ್ 31ಕ್ಕಿಂತ ಮೊದಲು ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ದಾಖಲೆ ರಹಿತ ಮುಸ್ಲಿಮೇತರ ವಲಸಿಗರಿಗೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹತಾ ಅವಧಿಯನ್ನು 11 ರಿಂದ 5 ವರ್ಷಗಳಿಗೆ ಇಳಿಸಲು ಕೇಂದ್ರವು ಸೋಮವಾರ ಪೌರತ್ವ (ತಿದ್ದುಪಡಿ) ಕಾಯ್ದೆಯ ನಿಯಮಗಳೊಂದಿಗೆ ಅಧಿಸೂಚನೆ ಹೊರಡಿಸಿತ್ತು.

ಇಸ್ಲಾಮಿಕ್ ದೇಶಗಳಲ್ಲಿ (ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ) ಇಸ್ಲಾಂನಲ್ಲಿ ತಮ್ಮದೇ ರೀತಿಯನ್ನು ಅನುಸರಿಸಿದ್ದಕ್ಕೆ ಕಿರುಕುಳಕ್ಕೊಳಗಾದರೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸುವುದನ್ನು ಈ ಕಾಯ್ದೆ ನಿರ್ಬಂಧಿಸುವುದಿಲ್ಲ ಎಂಬುದಾಗಿಯೂ ಎಂದು ಅಮಿತ್ ಶಾ ನೇತೃತ್ವದ ಗೃಹ ಸಚಿವಾಲಯ ಹೇಳಿದೆ.

ಎಲ್ಲರೂ ಅರ್ಜಿ ಸಲ್ಲಿಸಬಹುದು

ಸಿಎಎ ಪೌರತ್ವ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ. ಆದ್ದರಿಂದ, ಭಾರತೀಯ ಪ್ರಜೆಯಾಗಲು ಬಯಸುವ ಯಾವುದೇ ದೇಶದಿಂದ ಮುಸ್ಲಿಂ ವಲಸಿಗರು ಸೇರಿದಂತೆ ಯಾವುದೇ ವ್ಯಕ್ತಿಯು ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ : Citizenship Amendment Act : ಪಾಕಿಸ್ತಾನದ ಹಿಂದೂ ನಿರಾಶ್ರಿತರ ಸಂಭ್ರಮ; ಮೋದಿಗೆ ಅಭಿನಂದನೆ

ಸಿಎಎ ಇಲ್ಲಿನ ಜನರ ಪೌರತ್ವದ ಮೇಲೆ ಪರಿಣಾಮ ಬೀರಲು ಯಾವುದೇ ನಿಬಂಧನೆಗಳನ್ನು ಮಾಡಿಲ್ಲ. ಕಾನೂನಿಗೆ ಭಾರತದಲ್ಲಿರುವ 18 ಕೋಟಿ ಭಾರತೀಯ ಮುಸ್ಲಿಮರೊಂದಿಗೆ ಯಾವುದೇ ಸಂಬಂಧವಿಲ್ಲ. ಅವರು ತಮ್ಮ ಹಿಂದೂ ಸಹವರ್ತಿಗಳಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ಸಚಿವಾಲಯ ಹೇಳಿದೆ. ಸಿಎಎ ಜಾರಿಗೆ ತರುವ ನಿರ್ಧಾರದ ವಿರುದ್ಧ ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಏಕೆಂದರೆ ಈ ಕಾನೂನನ್ನು ಅಕ್ರಮ ವಲಸಿಗರು ಎಂದು ಘೋಷಿಸಲು ಮತ್ತು ಅವರ ಭಾರತೀಯ ಪೌರತ್ವವನ್ನು ಕಸಿದುಕೊಳ್ಳಲು ಬಳಸಬಹುದು ಎಂದು ಕೆಲವರು ಭಯಪಟ್ಟಿದ್ದಾರೆ.

ಉದಾರ ಸಂಸ್ಕೃತಿ

ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಕಿರುಕುಳ ಎದುರಿಸುತ್ತಿರುವ ಅಲ್ಲಿನ ಅಲ್ಪಸಂಖ್ಯಾತರಿಗೆ ಅವರ ಸಂತೋಷ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಭಾರತೀಯ ಪೌರತ್ವ ಪಡೆಯಲು ಭಾರತದ ಉದಾರ ಸಂಸ್ಕೃತಿಯ ಪ್ರಕಾರ ಸಹಾಯ ಮಾಡಲು ಈ ಕಾನೂನು ಅಗತ್ಯವಿದೆ ಎಂದು ಸರ್ಕಾರ ಹೇಳಿದೆ.

ಪೌರತ್ವವನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಹಾಜರುಪಡಿಸುವಂತೆ ಯಾವುದೇ ಭಾರತೀಯ ನಾಗರಿಕರನ್ನು ಕೇಳಲಾಗುವುದಿಲ್ಲ ಎಂದು ಸಚಿವಾಲಯ ತಿಳಿಸಿದೆ. ಪೌರತ್ವ ಕಾಯ್ದೆಯು ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಬಗ್ಗೆ ಅಲ್ಲ ಎಂಬುದಾಗಿಯೂ ಅದು ಹೇಳಿದೆ. “ಆದ್ದರಿಂದ, ಸಿಎಎ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬ ಮುಸ್ಲಿಮರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಂದು ವರ್ಗದ ಜನರ ಆತಂಕ ನ್ಯಾಯಸಮ್ಮತವಲ್ಲ” ಎಂದು ಅದು ಹೇಳಿದೆ.

ಮೂರು ದೇಶಗಳಲ್ಲಿ ಧಾರ್ಮಿಕ ಕಿರುಕುಳ ಎದುರಿಸಿದವರಿಗೆ ಸಹಾನುಭೂತಿ ಮತ್ತು ಪರಿಹಾರವನ್ನು ತೋರಿಸುವ ಈ ಕಾಯ್ದೆಯು ಕಿರುಕುಳದ ಹೆಸರಿನಲ್ಲಿ ಇಸ್ಲಾಂ ಧರ್ಮವನ್ನು ಕಳಂಕಿತ ಎಂದು ತೋರಿಸುವುದಿಲ್ಲ” ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಕಾನೂನಿನ ಅಗತ್ಯವನ್ನು ವಿವರಿಸಿದ ಸಚಿವಾಲಯವು, ಕಾನೂನು ಪೌರತ್ವ ವ್ಯವಸ್ಥೆಯನ್ನು ವ್ಯವಸ್ಥೆಯನ್ನು ಗಟ್ಟಿ ಮಾಡಲು ಅಕ್ರಮ ವಲಸಿಗರನ್ನು ನಿಯಂತ್ರಿಸಲು ಅವಶ್ಯಕ ಎಂದು ಹೇಳಿದರು. ತಮ್ಮ ದೇಶಗಳಲ್ಲಿ ಧಾರ್ಮಿಕ ಕಿರುಕುಳವನ್ನು ಎದುರಿಸಿದ ನಿರಾಶ್ರಿತರಿಗೆ ಮಾನವೀಯ ದೃಷ್ಟಿಕೋನದಿಂದ ಪೌರತ್ವ ನೀಡುವ ಹಕ್ಕನ್ನು ಭಾರತದ ಸಂವಿಧಾನವು ಸರ್ಕಾರಕ್ಕೆ ನೀಡುತ್ತದೆ ಎಂಬುದಾಗಿಯೂ ಹೇಳಿದೆ.

ವಿವಾದಾತ್ಮಕ ಕಾನೂನನ್ನು ಅಂಗೀಕರಿಸಿದ ನಾಲ್ಕು ವರ್ಷಗಳ ನಂತರ ಈ ಕಾನೂನನ್ನು ಜಾರಿಗೆ ತರಲಾಗಿದೆ. ತನ್ನ 2019 ರ ಪ್ರಣಾಳಿಕೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಬದ್ಧವಾಗಿರುವ ಆಡಳಿತಾರೂಢ ಬಿಜೆಪಿ 2024ರ ಲೋಕಸಭಾ ಚುನಾವಣೆಗೆ ಮುನ್ನ ಅದನ್ನು ಅಂಗೀಕರಿಸಿದೆ.

Exit mobile version