ನವ ದೆಹಲಿ: ನೂತನ ಸಂಸತ್ ಭವನದ ಮೇಲೆ ನಿರ್ಮಾಣಗೊಂಡ ರಾಷ್ಟ್ರ ಲಾಂಛನದ ಬಗ್ಗೆ ವಿಧವಿಧದ ವಿವಾದ ಹುಟ್ಟುಕೊಂಡಿದೆ. “ಸರ್ಕಾರದ ಮುಖ್ಯಸ್ಥರಾಗಿರುವ ಪ್ರಧಾನಿ ನರೇಂದ್ರ ಮೋದಿ, ಸಂಸತ್ ಭವನದ ಮೇಲೆ ಈ ಲಾಂಛನ ಉದ್ಘಾಟನೆ ಮಾಡಿದ್ದೇ ಸರಿಯಲ್ಲʼ, ʼಭವ್ಯ ಲಾಂಛನ ಅನಾವರಣ ಸರ್ಕಾರ ಮತ್ತು ಬಿಜೆಪಿಯ ಸ್ವಂತ ಕಾರ್ಯಕ್ರಮವಲ್ಲ. ಹಾಗಿದ್ದಾಗ್ಯೂ ಈ ಸಮಾರಂಭದಲ್ಲಿ ಪ್ರತಿಪಕ್ಷಗಳ ಪ್ರಮುಖರನ್ನು ಆಹ್ವಾನಿಸಿಲ್ಲʼ, ʼಸಂಸತ್ ಭವನದ ಮೇಲೆ ನಿರ್ಮಿಸಲಾದ ಲಾಂಛನದಲ್ಲಿರುವ ಸಿಂಹಗಳು ಮೂಲ ಲಾಂಛನದಲ್ಲಿದ್ದಂತೆ ಇಲ್ಲ. ಈ ಸಿಂಹಗಳು ಶಾಂತವಾಗಿಲ್ಲದೆ, ಗರ್ಜಿಸುತ್ತಿರುವಂತೆ ಇವೆʼ ಎಂಬಿತ್ಯಾದಿ ಆಕ್ಷೇಪಗಳನ್ನು ಕಾಂಗ್ರೆಸ್, ಟಿಎಂಸಿ, ಎಐಎಂಐಎಂ ಸೇರಿ ಹಲವು ವಿರೋಧ ಪಕ್ಷಗಳು ಎತ್ತಿವೆ. ಮೋದಿ ಸರ್ಕಾರ ನಮ್ಮ ರಾಷ್ಟ್ರ ಲಾಂಛನದ ಸ್ವರೂಪವನ್ನೇ ಮಾರ್ಪಾಡುಗೊಳಿಸಿ, ವಿರೂಪಗೊಳಿಸಿದೆ ಎಂದೂ ಆರೋಪಿಸಿವೆ. ಈ ವಿಚಾರವನ್ನು ಅನೇಕರು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಎಲ್ಲ ಆರೋಪಗಳಿಗೂ ಬಿಜೆಪಿ ಸರ್ಕಾರ ಉತ್ತರ ನೀಡಿದೆ. ನಾವು ಮೂಲ ರಾಷ್ಟ್ರ ಲಾಂಛನವನ್ನು ಬದಲಿಸಿಲ್ಲ. ಈ ಲಾಂಛನ ನಿರ್ಮಾಣಕ್ಕೂ ಮೊದಲು ಸಾರನಾಥ ಲಾಂಛನದ ಸಂಪೂರ್ಣ ಅಧ್ಯಯನ ಮಾಡಿಕೊಳ್ಳಲಾಗಿದೆ. ಈಗಿನ ಲಾಂಛನದ ಕೆಳಭಾಗದಿಂದ ಫೋಟೋ ತೆಗೆದು ಅದನ್ನು ವೈರಲ್ ಮಾಡಲಾಗುತ್ತಿದೆ. ತಳದಿಂದ ಫೋಟೋ ಸೆರೆ ಹಿಡಿದಾಗ, ಸಿಂಹಗಳ ಬಾಯಿ ಇನ್ನಷ್ಟು ಅಗಲವಾಗಿ ಕಾಣುವುದು ಸಹಜ ಎಂದು ಸಮರ್ಥನೆಯನ್ನೂ ಕೊಟ್ಟಿದೆ. ಹಾಗಿದ್ದಾಗ್ಯೂ ಒಂದೊಮ್ಮೆ, ರಾಷ್ಟ್ರ ಲಾಂಛನದಲ್ಲಿ ಬದಲಾವಣೆ ಆಗಿದ್ದೇ ಆದರೂ ಅದು ಒಪ್ಪಿತವಾ? ರಾಷ್ಟ್ರ ಲಾಂಛನದಲ್ಲಿ ಮಾರ್ಪಾಡು ಮಾಡಲಾಗಲಿ ಅಥವಾ ಬದಲಾವಣೆ ಮಾಡಲಾಗಲಿ ಕೇಂದ್ರ ಸರ್ಕಾರಕ್ಕೆ ಅಧಿಕಾರ ಇದೆಯಾ? ಇದೊಂದು ಬಹುಮುಖ್ಯ ಪ್ರಶ್ನೆ ಎಲ್ಲೆಡೆ ಎದ್ದಿದೆ.
ಕಾಯಿದೆ ಏನು ಹೇಳುತ್ತದೆ?
ರಾಷ್ಟ್ರ/ರಾಜ್ಯ ಲಾಂಛನಕ್ಕೆ ಸಂಬಂಧಪಟ್ಟಂತೆ ಎರಡು ಪ್ರಮುಖ ಕಾಯಿದೆಗಳಿದ್ದು, ಅದರಲ್ಲಿ ಒಂದು ಭಾರತದ ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ)ಕಾಯ್ದೆ 2005 ಮತ್ತು ಇನ್ನೊಂದು, ಭಾರತದ ರಾಜ್ಯ ಲಾಂಛನ (ಬಳಕೆ ನಿಯಂತ್ರಣ) ನಿಯಮಗಳು 2007. ನಮ್ಮ ರಾಷ್ಟ್ರ/ರಾಜ್ಯಗಳ ಲಾಂಛನ ಬಳಕೆ ಹೇಗಿರಬೇಕು? ಏನು ಮಾಡಬಾರದು? ಏನೆಲ್ಲ ಮಾಡಬಹುದು ಎಂಬಿತ್ಯಾದಿಯನ್ನು ಈ ಕಾಯಿದೆಗಳು ವಿವರಿಸುತ್ತವೆ. ಭಾರತದ ರಾಷ್ಟ್ರ/ರಾಜ್ಯ ಲಾಂಛನಗಳ ಬಳಕೆ ಬಗ್ಗೆ ವಿವರಿಸುವ ಈ ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ)ಕಾಯ್ದೆ 2005ರ ಉದ್ದೇಶ ಮತ್ತು ಕಾರಣಗಳು, ಕಾರ್ಯನಿರ್ವಾಹಕ ಸೂಚನೆಗಳಿಂದ ನಿಯಂತ್ರಿಸಲ್ಪಡುತ್ತವೆ. ಹಾಗಂತ ಈ ಕಾರ್ಯನಿರ್ವಾಹಕ ಸೂಚನೆಗಳು ಯಾವುದೇ ಕಾನೂನು ಮಂಜೂರಾತಿ ಹೊಂದಿಲ್ಲ. ಯಾವುದೇ ವ್ಯಕ್ತಿಗಳು, ಸಂಸ್ಥೆಗಳು ರಾಷ್ಟ್ರ ಲಾಂಛನವನ್ನು ಅನಧಿಕೃತವಾಗಿ ಬಳಕೆ ಮಾಡಿಕೊಳ್ಳುವುದನ್ನು ತಡೆಯಲೆಂದೇ ಈ ಕಾಯಿದೆ ರಚಿಸಲಾಗಿದೆ.
ಇದನ್ನೂ ಓದಿ: ಇವು ಸ್ವತಂತ್ರ ಭಾರತದ ಸಿಂಹಗಳು; ರಾಷ್ಟ್ರ ಲಾಂಛನ ವಿವಾದಕ್ಕೆ ಪ್ರತಿಕ್ರಿಯಿಸಿದ ಅನುಪಮ್ ಖೇರ್
ರಾಷ್ಟ್ರ ಲಾಂಛನವನ್ನು ಸರ್ಕಾರದ ಅಧಿಕೃತ ಮುದ್ರೆಯಾಗಿ ಬಳಸುವ ಬಗ್ಗೆ ಭಾರತದ ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ)ಕಾಯ್ದೆ 2005ರ ನಿರ್ದಿಷ್ಟ ಅನುಸೂಚಿಯಲ್ಲಿ ವಿವರಿಸಲಾಗಿದೆ. ಹಾಗೇ, ಈ ಲಾಂಛನ ಅಶೋಕನ ಸಾರಾನಾಥ ಸಿಂಹ ರಾಜಧಾನಿಯ ಸ್ವರೂಪದ ಅಳವಡಿಕೆಯಾಗಿದೆ ಮತ್ತು ರಾಷ್ಟ್ರ ಲಾಂಛನದ ವಿನ್ಯಾಸಗಳು ಹೇಗಿರಬೇಕು ಎಂಬುದನ್ನು ಅನುಬಂಧ-1 ಮತ್ತು ಅನುಬಂಧ 2ರಲ್ಲಿ ನಿಗದಿಪಡಿಸಲಾಗಿದ್ದು, ಅದರಂತೆ ಇರುವುದು ಕಡ್ಡಾಯ ಎಂದೂ ಅನುಸೂಚಿಯಲ್ಲಿ ಹೇಳಲಾಗಿದೆ.
ಕೇಂದ್ರಕ್ಕೆ ಅಧಿಕಾರ ಇದೆಯೇ?
ಅನುಬಂಧ 1 ಮತ್ತು 2ರಲ್ಲಿ ವಿವರಿಸಲಾದ ವಿನ್ಯಾಸಗಳನ್ನೇ ರಾಷ್ಟ್ರ ಲಾಂಛನ ಹೊಂದಿರಬೇಕು ಎಂಬ ನಿಯಮವನ್ನು ಕಾಯಿದೆಯಲ್ಲಿ ನಿಗದಿಪಡಿಸಿರುವಾಗ ಅದನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ಇದೆಯೇ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವ ಆಗುತ್ತದೆ. ಆದರೆ ಖಂಡಿತ ಕೇಂದ್ರ ಸರ್ಕಾರಕ್ಕೆ ರಾಷ್ಟ್ರ ಲಾಂಛನದ ವಿನ್ಯಾಸ ಬದಲಿಸುವ ಅಧಿಕಾರ ಇದೆ ಎಂಬುದನ್ನು ಇದೇ ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ)ಕಾಯ್ದೆ 2005ರ ಸೆಕ್ಷನ್ 6(2)(f) ಹೇಳುತ್ತದೆ. ʼಕಾಯಿದೆಯ ನಿಬಂಧನೆಗೆ ಒಳಪಟ್ಟು, ಕೇಂದ್ರ ಸರ್ಕಾರವು ರಾಷ್ಟ್ರ ಲಾಂಛನದ ವಿನ್ಯಾಸದಲ್ಲಿ ಸೂಕ್ತ ಮತ್ತು ಅಗತ್ಯವೆನಿಸಿದ ಬದಲಾವಣೆಯನ್ನು ಮಾಡುವ ಅಧಿಕಾರ ಹೊಂದಿದೆʼ ಎಂದು ಸೆಕ್ಷನ್ 6(2)(f) ವಿವರಿಸುತ್ತದೆ.
ವಿನ್ಯಾಸ ಮಾತ್ರ ಬದಲಿಸಬಹುದು!
ಇದು ಬಹಳ ಮುಖ್ಯ ವಿಚಾರ. ರಾಜ್ಯ ಲಾಂಛನ (ಅನುಚಿತ ಬಳಕೆ ನಿಷೇಧ) ಕಾಯ್ದೆ 2005ರಲ್ಲಿ ರಾಷ್ಟ್ರ ಲಾಂಛನದ ವಿನ್ಯಾಸದಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆಯೇ ಹೊರತು ಇಡೀ ರಾಷ್ಟ್ರ ಲಾಂಛನವನ್ನು ಮಾರ್ಪಾಡು ಮಾಡುವ ಅಧಿಕಾರ ನೀಡಿಲ್ಲ. ಅಂದರೆ ಲಾಂಛನದ ನಾಲ್ಕು ಸಿಂಹಗಳಲ್ಲಿ ಒಂದನ್ನು ಕಡಿಮೆ ಮಾಡುವುದು, ಮತ್ತೊಂದು ಹೆಚ್ಚಿಸುವುದು, ಚಕ್ರದಲ್ಲಿ ಬದಲಾವಣೆ ಮಾಡುವಂಥದ್ದಕ್ಕೆಲ್ಲ ಒಪ್ಪಿಗೆಯಿಲ್ಲ. ಕಾಯಿದೆಯಲ್ಲಿ ಹೇಳಾದ ಸೂಕ್ಷ್ಮ ವಿಷಯಗಳನ್ನು ಪರಿಗಣಿಸಿ, ಇಡೀ ರಾಷ್ಟ್ರ ಲಾಂಛನದ ವಿನ್ಯಾಸದಲ್ಲಿ ಚಿಕ್ಕಚಿಕ್ಕ ಬದಲಾವಣೆ ಮಾಡಬಹುದು.
ಕಾನೂನು ತಜ್ಞರ ಅಭಿಪ್ರಾಯ ಹೀಗಿದೆ…
ರಾಷ್ಟ್ರ ಲಾಂಛನದ ವಿನ್ಯಾಸ ಬದಲಾವಣೆ ಬಗ್ಗೆ ಕೆಲವು ಕಾನೂನು ತಜ್ಞರು ಕೂಡ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರಲ್ಲೊಬ್ಬರಾದ ಹಿರಿಯ ವಕೀಲ ಸಂಜಯ್ ಹೆಗ್ಡೆ ಮಾತನಾಡಿ, ʼರಾಷ್ಟ್ರ ಲಾಂಛನ ಎಂಬುದನ್ನು ಭಾರತದ ಸಂವಿಧಾನ ರಚಿಸಿಕೊಟ್ಟಿಲ್ಲ. ಲಾಂಛನದ ವಿನ್ಯಾಸವನ್ನು 2005ರ ಕಾಯ್ದೆಯ ಅನುಬಂಧ I ಮತ್ತು ಅನುಬಂಧ IIರಲ್ಲಿ ನಿಗದಿಪಡಿಸಲಾಗಿದೆ. ಸದ್ಯ ಇರುವ ನಿಯಮದ ಪ್ರಕಾರ ಕೇಂದ್ರ ಸರ್ಕಾರ ಲಾಂಛನದ ವಿನ್ಯಾಸದಲ್ಲಿ ಬದಲಾವಣೆ ಮಾಡಬಹುದು. ಆದರೆ ಕಾಯಿದೆಯಲ್ಲಿ ತಿದ್ದುಪಡಿ ತಂದು ಹೊಸ ಲಾಂಛನವನ್ನೇ ರೂಪಿಸುವ ಅಧಿಕಾರವೂ ಕೇಂದ್ರ ಸರ್ಕಾರಕ್ಕೆ ಇರುತ್ತದೆ ಎಂದು ತಿಳಿಸಿದ್ದಾರೆ.
ಇನ್ನೊಬ್ಬ ಹಿರಿಯ ವಕೀಲರಾದ ಸಂಜಯ್ ಘೋಸೆ ಪ್ರತಿಕ್ರಿಯೆ ನೀಡಿ, ರಾಷ್ಟ್ರ ಲಾಂಛನದ ವಿನ್ಯಾಸದಲ್ಲಿ ಬದಲಾವಣೆ ಮಾಡುವ ಅಧಿಕಾರವನ್ನು 2005ರ ಕಾಯಿದೆ ನೀಡಿದ್ದರೂ, ಆ ಅಧಿಕಾರ ಪ್ರಯೋಗ ಮಾಡುವ ಮೊದಲು ಕೇಂದ್ರ ಸರ್ಕಾರ ಒಂದು ಪ್ರಮುಖ ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ರಾಷ್ಟ್ರ ಲಾಂಛನವೆಂಬುದು ಗಣರಾಜ್ಯದ ಅತ್ಯಂತ ಮಹತ್ವದ ಚಿಹ್ನೆ ಮತ್ತು ಐತಿಹಾಸಿಕವಾಗಿ ಬಹಳ ಪ್ರಾಮುಖ್ಯತೆ ಪಡೆದಿದೆ ಎಂಬುದನ್ನು ಎಂದಿಗೂ ಕೇಂದ್ರ ಸರ್ಕಾರ ಮರೆಯಬಾರದು. ಹಾಗಾಗಿ, ಏಕಾಏಕಿ ವಿನ್ಯಾಸ ಬದಲಾವಣೆಯಂಥ ಕ್ರಮಕ್ಕೆ ಮುಂದಾಗಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ವಿಸ್ತಾರ Explainer: ರಾಷ್ಟ್ರ ಲಾಂಛನ ವಿವಾದದ ಸಿಂಹ ಗರ್ಜನೆ!