ನವದೆಹಲಿ: ಸಾಮಾಜಿಕ ಜಾಲತಾಣಗಳು ವೇಗವಾಗಿ ಮಾಹಿತಿ ಪಸರಿಸುವುದರಲ್ಲಿ ಎಷ್ಟು ಸಹಕಾರಿಯೋ, ನಕಲಿ ಮಾಹಿತಿಯನ್ನು ಹರಡುವಲ್ಲಿಯೂ ಅಷ್ಟೇ ಅಪಾಯಕಾರಿಗಳಾಗಿವೆ. ಯಾರದ್ದೋ ಉಲ್ಲೇಖ, ಯಾರದ್ದೋ ಹೇಳಿಕೆಯನ್ನು ಪರಾಮರ್ಶಿಸದೆಯೇ ಜನ ನಕಲಿ ಸುದ್ದಿ ಹರಡಿಸುತ್ತಾರೆ. ಕೆಲವೊಮ್ಮೆ ಅದು ಉದ್ದೇಶಪೂರ್ವಕವಾಗಿಯೂ ಇರುತ್ತದೆ. ಈಗ ನೋಟುಗಳ ಕುರಿತು ಕೂಡ ಇಂತಹದ್ದೇ ನಕಲಿ ಸುದ್ದಿ ಹರಡಿದೆ. ನೋಟುಗಳ ಮೇಲೆ ಬರೆದರೆ ಅವು ಅಮಾನ್ಯವಾಗುತ್ತವೆ ಎಂದು ಹೇಳಲಾಗುತ್ತಿದೆ. ಹಾಗಾದರೆ, ಈ ಸುದ್ದಿ ನಿಜವೇ? ನೋಟುಗಳು ಅಮಾನ್ಯವಾಗುತ್ತವೆಯೇ? ಇಲ್ಲಿದೆ Fact Check.
ಏನಿದು ವದಂತಿ?
ಭಾರತೀಯ ರಿಸರ್ವ್ ಬ್ಯಾಂಕ್ (RBI) ನೂತನ ಮಾರ್ಗಸೂಚಿಯ ಪ್ರಕಾರ 2,000, 500, 200, 100 ಸೇರಿ ಎಲ್ಲ ನೋಟುಗಳ ಮೇಲೆ ಬರೆದರೆ ಅವು ಅಮಾನ್ಯವಾಗುತ್ತವೆ, ಅವುಗಳನ್ನು ಬ್ಯಾಂಕ್ ಸೇರಿ ಯಾವುದೇ ಕಡೆ ಸ್ವೀಕರಿಸುವುದಿಲ್ಲ ಎಂಬ ಸುದ್ದಿ ಹರಡಿದೆ. ಹಾಗಾಗಿ, ನೋಟುಗಳ ಮೇಲೆ ಗೀಚುವುದು, ಬರೆಯುವುದು ಮಾಡಬಾರದು ಎಂಬ ಸುದ್ದಿಯನ್ನು ಜಾಲತಾಣಗಳಲ್ಲಿ ಪಸರಿಸಲಾಗಿದೆ.
ನಿಜಾಂಶ ಏನು?
ಕೇಂದ್ರ ಸರ್ಕಾರದ ಅಧಿಕೃತ ಫ್ಯಾಕ್ಟ್ ಚೆಕರ್ ಪಿಐಬಿ ಈ ಕುರಿತು ಫ್ಯಾಕ್ಟ್ ಚೆಕ್ ಮಾಡಿದೆ. ಹಾಗೆಯೇ, ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿ ನಕಲಿಯಾಗಿದೆ ಎಂದು ತಿಳಿಸಿದೆ. ನೋಟುಗಳ ಮೇಲೆ ಬರೆದರೆ ಅವು ಅಮಾನ್ಯಗೊಳ್ಳುವುದಿಲ್ಲ. ಆದರೆ, ಆರ್‌ಬಿಐನ ಕ್ಲೀನ್ ನೋಟ್ ಪಾಲಿಸಿ ಪ್ರಕಾರ ನೋಟುಗಳ ಮೇಲೆ ಬರೆಯದಿರುವುದು ಒಳ್ಳೆಯದು. ಹಾಗಂತ, ಬರೆದರೆ ನೋಟುಗಳು ಅಮಾನ್ಯವಾಗುತ್ತವೆ ಎಂಬುದು ಸುಳ್ಳು ಎಂದು ಫ್ಯಾಕ್ಟ್ ಚೆಕ್ ತಿಳಿಸಿದೆ.
ಇದನ್ನೂ ಓದಿ | Fact Check | ಮಗುವಿನ ಜತೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅನುಚಿತವಾಗಿ ವರ್ತಿಸಿದ್ರಾ? ಸತ್ಯ ಸಂಗತಿ ಏನು?