Site icon Vistara News

Dog Attack : ಮನೆಯಲ್ಲಿ ಮಲಗಿಸಿದ್ದ ಐದು ತಿಂಗಳ ಮಗುವನ್ನು ಕಚ್ಚಿ ಕೊಂದ ಬೀದಿ ನಾಯಿ!

Dog Attack

ಹೈದರಾಬಾದ್: ನಾಯಿಯೊಂದು ಐದು ತಿಂಗಳ ಮಗುವನ್ನು ಕಚ್ಚಿ ಕೊಂದಿರುವ (Dog Attack) ಹೃದಯ ವಿದ್ರಾವಕ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ತಾಂಡೂರಿನಲ್ಲಿ ನಡೆದಿದೆ. ಬಾಬುಸಾಯಿ ಎಂಬ ಮಗುವನ್ನು ಪೋಷಕರು ಕೆಲಸಕ್ಕೆ ಹೋಗುವ ವೇಳೆ ಮನೆಯಲ್ಲಿ ಮಲಗಿಸಿದ್ದರು. ಯಾರ ಗಮನಕ್ಕೂ ಬಾರದಂತೆ ಒಳ ಪ್ರವೇಶಿಸಿದ ನಾಯಿ ದಾಳಿ ಮಾಡಿ ಕೊಲೆ ಮಾಡಿದೆ. ಮಗುವಿನ ತಂದೆ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ಕೆಲಸದ ಸ್ಥಳದಲ್ಲಿದ್ದ ಸಾಕು ನಾಯಿ ಅದು ಎಂದು ಸ್ಥಳೀಯ ನಿವಾಸಿಗಳು ಹೇಳಿದರೆ, ಜಾಗದ ಮಾಲೀಕರು ಬೀದಿ ನಾಯಿ ಎಂದು ಹೇಳಿದ್ದಾರೆ.

ಈ ಆಘಾತಕಾರಿ ಘಟನೆಯು ದೇಶದಲ್ಲಿ ನಾಯಿ ಕಡಿತ ಮತ್ತು ನಾಯಿ ದಾಳಿಯ ಘಟನೆಗಳು ಹೆಚ್ಚುತ್ತಿರುವ ಬಗ್ಗೆ ಗಮನ ಸೆಳೆದಿದೆ. 2022 ರಿಂದ 2023 ರವರೆಗೆ ನಾಯಿ ಕಡಿತದ ಘಟನೆಗಳು ವರ್ಷದಿಂದ ವರ್ಷಕ್ಕೆ ಶೇಕಡಾ 26.5 ರಷ್ಟು ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಳೆದ ಡಿಸೆಂಬರ್​ನಲ್ಲಿ ವರದಿ ಮಾಡಿತ್ತು.

ಕಳೆದ ತಿಂಗಳು ಬೀದಿ ನಾಯಿಗಳ ದಾಳಿಯಲ್ಲಿ ಕನಿಷ್ಠ ಇಬ್ಬರು ಮಕ್ಕಳು ಸಾವನ್ನಪ್ಪಿದ್ದರು. ಏಪ್ರಿಲ್ 14 ರಂದು ಹೈದರಾಬಾದ್​​ನ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್​ಮೆಂಟ್​​ ಬಳಿ ಆಟವಾಡುತ್ತಿದ್ದ ಎರಡೂವರೆ ವರ್ಷದ ಬಾಲಕಿಯನ್ನು ಬೀದಿ ನಾಯಿಗಳು ಕಚ್ಚಿ ಕೊಂದಿದ್ದವು. ಮತ್ತೊಂದು ದುರಂತ ಘಟನೆಯಲ್ಲಿ, ಏಪ್ರಿಲ್ 13 ರಂದು ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಬೀದಿ ನಾಯಿಗಳು ದಾಳಿ ಮಾಡಿ ನಾಲ್ಕು ವರ್ಷದ ಬಾಲಕಿಯನ್ನು ಕೊಂದಿದ್ದವು.

ಇದನ್ನೂ ಓದಿ: Silicon City Hospital: ಲಕ್ಷಕ್ಕೆ ಇಬ್ಬರಿಗೆ ಬರುವ ಮೆದುಳಿನ ರಕ್ತನಾಳ ಒಡೆಯುವ ಕಾಯಿಲೆ; ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಬಾಲಕಿ ಪಾರು

ಬೇಜವಾಬ್ದಾರಿ ಕಾರಣ

ಈ ತಿಂಗಳ ಆರಂಭದಲ್ಲಿ, ಚೆನ್ನೈನ ಉದ್ಯಾನವನದಲ್ಲಿ ಎರಡು ರಾಟ್ವೀಲರ್ ನಾಯಿಗಳ ದಾಳಿಗೆ ಐದು ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಳು. ಅವು ಸಾಕಿದ್ದ ನಾಯಿಗಳಾಗಿದ್ದು ಮಾಲೀಕ ಅನ್ನು ಕಟ್ಟಿರಲಿಲ್ಲ. . ಪೊಲೀಸರು ಅವರ ಮಾಲೀಕರ ವಿರುದ್ಧ ನಿರ್ಲಕ್ಷ್ಯದ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಸಾಕುಪ್ರಾಣಿಗಳಿಗೆ ವಿಶೇಷವಾಗಿ ನಾಯಿಗಳಿಗೆ ಸಾರ್ವಜನಿಕ ಉದ್ಯಾನವನಗಳ ಒಳಗೆ ಪ್ರವೇಶ ನಿರ್ಬಂಧಿಸಿದೆ. ಪರಿಷ್ಕೃತ ನಿಯಮಗಳ ಪ್ರಕಾರ ಸಾಕುಪ್ರಾಣಿಗಳನ್ನು ಉದ್ಯಾನವನಗಳ ಒಳಗೆ ಬಿಗಿಯಾಗಿ ಕಟ್ಟುವುದು ಮತ್ತು ಬಾಯಿ ಮುಚ್ಚಿಸುವುದು ಕಡ್ಡಾಯ.

ನಾಯಿಗಳಿಗೆ ಬ್ಯಾನ್​

ನಾಯಿಗಳ ದಾಳಿಯು ಕೆಲವು ತಳಿಗಳ ನಾಯಿಗಳನ್ನು ವಸತಿ ಪ್ರದೇಶಗಳಲ್ಲಿ ಸಾಕಬಹುದೇ ಎಂಬ ಚರ್ಚೆ ಹುಟ್ಟು ಹಾಕಲು ಕಾರಣವಾಗಿದೆ. ಪಿಟ್ಬುಲ್ ಟೆರಿಯರ್, ಅಮೆರಿಕನ್ ಬುಲ್ಡಾಗ್, ರಾಟ್​ವೀಲರ್​ ಮತ್ತು ಮಾಸ್ಟಿಫ್ಸ್ ಸೇರಿದಂತೆ 23 ತಳಿಯ ಕ್ರೂರ ನಾಯಿಗಳ ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸುವಂತೆ ಕೇಂದ್ರವು ಮಾರ್ಚ್​ನಲ್ಲಿ ರಾಜ್ಯಸರ್ಕಾರಗಳನ್ನು ಕೇಳಿದೆ. ಈಗಾಗಲೇ ಈ ತಳಿಗಳನ್ನು ಸಾಕುಪ್ರಾಣಿಗಳಾಗಿ ಹೊಂದಿರುವವರು ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಬೇಕು ಎಂದು ನಿರ್ದೇಶನದಲ್ಲಿ ಸೇರಿಸಲಾಗಿದೆ

Exit mobile version