ನವದೆಹಲಿ: ದೇಶಾದ್ಯಂತ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಕೇಂದ್ರ ಸರ್ಕಾರ ಸುಮಾರು 23 ಕ್ರೂರ ತಳಿಯ ಶ್ವಾನಗಳ (Dog Breeds) ಆಮದು, ಮಾರಾಟ ಮತ್ತು ಸಂತಾನೋತ್ಪತ್ತಿಯನ್ನು ನಿಷೇಧಿಸಲು ಪ್ರಸ್ತಾವ ಸಲ್ಲಿಸಿದೆ. ಈ ತಳಿಗಳನ್ನು ʼಮಾನವರಿಗೆ ಬೆದರಿಕೆʼ ಎಂದು ಪರಿಗಣಿಸಲಾಗಿದ್ದು, ಇದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ.ಒ.ಪಿ.ಚೌಧರಿ (Dr. OP Chaudhary) ತಿಳಿಸಿದ್ದಾರೆ. ಈ ಸಂಬಂಧ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ನಿಷೇಧ ಹೇರುವುದನ್ನು ಖಚಿತಪಡಿಸಲು ಸೂಚಿಸಿದ್ದಾರೆ.
ಯಾವೆಲ್ಲ ತಳಿಗಳಿಗೆ ನಿಷೇಧ?
ನಿಷೇಧಿತ ನಾಯಿ ತಳಿಗಳ ಪಟ್ಟಿಯಲ್ಲಿ ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೇರಿಕನ್ ಸ್ಟಾಫರ್ಡ್ಶೈರ್ ಟೆರಿಯರ್, ಫಿಲಾ ಬ್ರೆಸಿಲಿರೊ, ಡೋಗೊ ಅರ್ಜೆಂಟೀನಾ, ಅಮೇರಿಕನ್ ಬುಲ್‌ಡಾಗ್, ಬೊಯೆರ್ಬೋಯೆಲ್, ಕಂಗಲ್, ರಷ್ಯನ್ ಶೆಫರ್ಡ್, ಟೊರ್ನ್ಜಾಕ್, ಸರ್ಪ್ಲಾನಿನಾಕ್, ಜಪಾನೀಸ್ ಟೋಸಾ, ಅಕಿಟಾ, ಮಾಸ್ಟಿಫ್ಸ್, ರಾಟ್ವೀಲರ್, ಟೆರಿಯರ್ಸ್, ರೊಡೇಷಿಯನ್ ರಿಡ್ಜ್ಬ್ಯಾಕ್, ವುಲ್ಫ್ ನಾಯಿ, ಕ್ಯಾನರಿಯೊ, ಅಕ್ಬಾಶ್ ನಾಯಿ, ಮಾಸ್ಕೋ ಗಾರ್ಡ್ ನಾಯಿ, ಕೇನ್ ಕೊರ್ಸೊ, ಬ್ಯಾನ್ ಡಾಗ್ ಸೇರಿವೆ.
ಪಶುಸಂಗೋಪನಾ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲಾದ ತಜ್ಞರ ಸಮಿತಿಯು ಇಂತಹ ನಾಯಿ ತಳಿಗಳ ಆಮದನ್ನು ನಿಷೇಧಿಸಲು ಶಿಫಾರಸು ಮಾಡಿದೆ. ನಾಯಿ ಸಂತಾನೋತ್ಪತ್ತಿ ಮತ್ತು ಮಾರುಕಟ್ಟೆ ನಿಯಮಗಳು 2017 ಮತ್ತು ಪೆಟ್ ಶಾಪ್ ರೂಲ್ಸ್ 2018 ಅನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಕರೆ ನೀಡಿದೆ.
ದುರ್ಬಲ ನಾಯಿ ತಳಿಗಳನ್ನು ರಕ್ಷಿಸಲು ಮತ್ತು ಮಾನವರ ಸುರಕ್ಷತೆಗಾಗಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ಸ್ (PETA) ಮನವಿ ಮಾಡಿದ ನಂತರ ಕೇಂದ್ರ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಪೆಟಾ ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು.
ಕೆಲವು ತಿಂಗಳುಗಳಲ್ಲಿ ದೇಶಾದ್ಯಂತ ನಾಯಿ ಕಡಿತದಿಂದ ಹಲವು ಸಾವುಗಳು ಸಂಭವಿಸಿವೆ. ಮಂಗಳವಾರ (ಮಾರ್ಚ್ 12) ಹಿಮಾಚಲ ಪ್ರದೇಶದ ಬಿಲಾಸ್ಪುರ ಪ್ರದೇಶದಲ್ಲಿ ಬೀದಿ ನಾಯಿ ದಾಳಿಯಿಂದ 20 ಮಂದಿ ಗಾಯಗೊಂಡಿದ್ದರು. ಕಳೆದ ತಿಂಗಳು ದೆಹಲಿಯಲ್ಲಿ ಪಿಟ್‌ಬುಲ್ ತಳಿಯ ನಾಯಿಯೊಂದು ಕಚ್ಚಿದ ಪರಿಣಾಮ ಮಗುವೊಂದನ್ನು ಆಸ್ಪತ್ರಗರ ದಾಖಲಿಸಿ 17 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ ಕಳೆದ ವಾರ ಗಾಜಿಯಾಬಾದ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಶ್ವಾನ ದಾಳಿ ಮಾಡಿ 10 ವರ್ಷದ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿತ್ತು.
ಇದನ್ನೂ ಓದಿ: Dog Attack: ಬೆಳಗಾವಿಯಲ್ಲಿ ಬೀದಿ ನಾಯಿಗಳ ದಾಳಿ; 4 ಮಕ್ಕಳಿಗೆ ಗಾಯ
ಬೀದಿ ನಾಯಿಗಳ ದಾಳಿ; ಹಾರಿ ಹೋಯ್ತು ಕಂದಮ್ಮನ ಪ್ರಾಣ ಪಕ್ಷಿ
ಬೀದಿ ನಾಯಿ ದಾಳಿಯಿಂದ 2 ವರ್ಷದ ಹೆಣ್ಣು ಮಗುವೊಂದು ಮೃತಪಟ್ಟ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ತುಘಲಕಾಬಾದ್‌ನಲ್ಲಿ ಕೆಲವು ದಿನಗಳ ಹಿಂದೆ ನಡೆದಿತ್ತು. ಬೀದಿ ನಾಯಿಗಳ ಗುಂಪು ಈ ಮಗುವಿನ ಮೇಲೆ ಏಕಾಏಕಿ ದಾಳಿ ಮಾಡಿದ್ದವು. ತೀವ್ರ ಗಾಯಗೊಂಡಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿರಲಿಲ್ಲ. ಅಲ್ಲದೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಚಿತ್ರದುರ್ಗ ನಗರದಲ್ಲಿ ನಾಯಿ ಕಡಿತಕ್ಕೆ 10 ವರ್ಷದ ಬಾಲಕನೋರ್ವ ಮೃತಪಟ್ಟಿದ್ದ. ಮೆದೇಹಳ್ಳಿಯ ತರುಣ್ ಮೃತ ಬಾಲಕ. ನಾಯಿಗಳ ಗುಂಪಿನಿಂದ ದಾಳಿಗೊಳಗಾಗಿ ತೀವ್ರ ಗಾಯಗೊಂಡಿದ್ದ ತರುಣ್ 15 ದಿನಗಳ ಕಾಲ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ