ವಿಶಾಖಪಟ್ಟಣ: ಕೆಲವು ನಾಯಿಗಳು ಇರುತ್ತವೆ. ಶಿಸ್ತಿರುವುದಿಲ್ಲ. ಚಪ್ಪಲಿ ಹರಿದು ಅಗೆಯುವುದು, ವೈಯರ್, ಬಟ್ಟೆ, ಪ್ಲಾಸ್ಟಿಕ್ ಹೀಗೆ ಏನೇ ಸಿಕ್ಕರೂ ಎಳೆದುಕೊಂಡು ಹೋಗಿ ಕಚ್ಚಿಕಚ್ಚಿ ಚೂರು ಮಾಡುತ್ತಿರುತ್ತವೆ. ಇಲ್ನೋಡಿ, ಆಂಧ್ರಪ್ರದೇಶದಲ್ಲಿ ಈ ನಾಯಿ ಏನೂ ಕಾಣಿಸದೆ, ಅಲ್ಲಿನ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ (Andhra Pradesh Chief Minister Jagan Mohan Reddy)ಯವರ ಪೋಸ್ಟರ್ ಹರಿದು ಸಂಕಷ್ಟಕ್ಕೆ ಸಿಲುಕಿದೆ!
ಆಂಧ್ರದ ಒಂದು ನಗರದಲ್ಲಿರುವ ಮನೆಯ ಕಾಂಪೌಂಡ್ ಗೋಡೆ ಮೇಲೆ ಅಂಟಿಸಲಾಗಿದ್ದ ಜಗನ್ ರೆಡ್ಡಿ ಪೋಸ್ಟರ್ನ್ನು ಕಪ್ಪು ಬಣ್ಣದ ನಾಯಿಯೊಂದು ಕಿತ್ತು ಹರಿದಿದೆ. ಆ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ತುಂಬ ವೈರಲ್ ಕೂಡ ಆಗುತ್ತಿದೆ. ಹೀಗೆ ವಿಡಿಯೊ ವೈರಲ್ ಆದ ಬೆನ್ನಲ್ಲೇ ದಾಸರಿ ಉದಯಶ್ರೀ ಎಂಬುವರು ಇನ್ನೂ ಕೆಲವು ಮಹಿಳೆಯರ ಜತೆ ಹೋಗಿ ವಿಜಯವಾಡ ಪೊಲೀಸ್ ಠಾಣೆಯಲ್ಲಿ ನಾಯಿ ವಿರುದ್ಧವೇ ದೂರು ದಾಖಲು ಮಾಡಿದ್ದಾರೆ. ತಾನು ಆಂಧ್ರದ ವಿರೋಧ ಪಕ್ಷವಾದ ತೆಲುಗು ದೇಸಂ ಪಾರ್ಟಿಯ ಕಾರ್ಯಕರ್ತೆ ಎಂದು ದಾಸರಿ ಉದಯಶ್ರೀ ಹೇಳಿಕೊಂಡಿದ್ದಾರೆ. ‘ನಾವು ವಿರೋಧ ಪಕ್ಷದ ಕಾರ್ಯಕರ್ತರೇ ಮುಖ್ಯಮಂತ್ರಿ ಜಗನ್ ರೆಡ್ಡಿಯವರಿಗೆ ಗೌರವ ನೀಡುತ್ತೇವೆ. ಅಂಥದ್ದರಲ್ಲಿ ಈ ನಾಯಿ ಅವರಿಗೆ ಅವಮಾನ ಮಾಡುತ್ತಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ಈ ನಾಯಿ ಮತ್ತು ಅದರ ಕೃತ್ಯದ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಆಂಧ್ರಪ್ರದೇಶದಲ್ಲಿ 3000 ದೇಗುಲ ನಿರ್ಮಾಣ ಮಾಡಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸೂಚನೆ; ಕಾಮಗಾರಿ ಪ್ರಾರಂಭ
ಬಳಿಕ ಮಾಧ್ಯಮದವರ ಜತೆ ಮಾತನಾಡಿ, ‘ಮುಖ್ಯಮಂತ್ರಿ ಜಗನ್ ರೆಡ್ಡಿಯವರ ಪೋಸ್ಟರ್ ಹರಿಯಲು ಯಾರೋ ನಾಯಿಯನ್ನು ಬಿಟ್ಟಿದ್ದಾರೆ. ಹೀಗಾಗಿ ದೂರು ನೀಡಿದ್ದೇನೆ. ನಾವು ಪ್ರತಿಪಕ್ಷದ ಕಾರ್ಯಕರ್ತರಾದರೂ ನಮಗೆ ಮುಖ್ಯಮಂತ್ರಿ ಬಗ್ಗೆ ಅಪಾರ ಗೌರವ ಇದೆ. ಹೀಗೆ ಅವರ ಪೋಸ್ಟರ್ ಹರಿದಿದ್ದು, ರಾಜ್ಯದ 6 ಕೋಟಿ ಜನರ ಭಾವನೆಗೆ ಧಕ್ಕೆ ತಂದಂತಾಗಿದೆ’ ಎಂದಿದ್ದಾರೆ. ಇನ್ನು ನಾಯಿ ಜಗನ್ರೆಡ್ಡಿಯವರ ಪೋಸ್ಟರ್ ಹರಿಯುತ್ತಿರುವ ವಿಡಿಯೊವನ್ನು ಪ್ರತಿಪಕ್ಷ ತೆಲುಗು ದೇಸಂ ಪಾರ್ಟಿ ಕಾರ್ಯಕರ್ತರೇ ಅನೇಕರು ಶೇರ್ ಮಾಡಿಕೊಂಡಿದ್ದರು.