ಲಕ್ನೋ: ಮೀನುಗಾರರು ಮೀನು ಹಿಡಿಯುವುದರ ಜತೆ ಡಾಲ್ಫಿನ್ ಅನ್ನೂ ಹಿಡಿದು (Dolphin Catching) ತಿಂದಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ನಾಲ್ವರು ಮೀನುಗಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಬ್ಬನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕೌಶಂಬಿಯ ಯಮುನಾ ನದಿಯಲ್ಲಿ ಜುಲೈ 22ರಂದು ರಂಜಿತ್ ಕುಮಾರ್, ಸಂಜಯ್, ದೀವನ್ ಮತ್ತು ಬಾಬಾ ಹೆಸರಿನ ನಾಲ್ವರು ಮೀನುಗಾರರು ಮೀನು ಹಿಡಿದಿದ್ದಾರೆ. ಆ ವೇಳೆ ಅವರು ಹಾಕಿದ್ದ ಬಲೆಗೆ ಡಾಲ್ಫಿನ್ ಕೂಡ ಬಿದ್ದಿದೆ. ಮೀನುಗಳ ಜತೆ ಮೀನುಗಾರರು ಡಾಲ್ಫಿನ್ ಅನ್ನೂ ಮನೆಗೆ ಹೊತ್ತೊಯ್ದಿದ್ದಾರೆ. ಡಾಲ್ಫಿನ್ ಅನ್ನು ಮೀನುಗಾರರು ತಮ್ಮ ಬೆನ್ನ ಮೇಲೆ ಹೊತ್ತೊಯ್ಯುತ್ತಿದ್ದ ದೃಶ್ಯವನ್ನು ಯಾರೋ ದಾರಿಹೋಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವೈರಲ್ ಆಗಿದೆ.
ಇದನ್ನೂ ಓದಿ: Viral Video: ಪಿಯಾನೋ ನುಡಿಸಿದ ಲಸಿತ್ ಮಾಲಿಂಗ; ವಿಡಿಯೊ ವೈರಲ್
ಈ ವಿಚಾರದಲ್ಲಿ ಚೈಲ್ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಅವರು ದೂರು ನೀಡಿದ್ದಾರೆ. ನಸೀರ್‌ಪುರ ಗ್ರಾಮದ ಮೀನುಗಾರರು ಈ ಕೆಲಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ನಾಲ್ವರು ಮೀನುಗಾರರ ವಿರುದ್ಧ ಪ್ರಕರಣ ದಾಖಲಾಗಿದೆ.
ನಾಲ್ವರು ಮೀನುಗಾರರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ (1972) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ಕೊಟ್ಟಿದ್ದಾರೆ. ಹಾಗೆಯೇ ರಂಜಿತ್ ಕುಮಾರ್‌ನನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸಲಾಗುತ್ತಿದೆ.