ನವದೆಹಲಿ: ಕಳೆದ 2020-21ರಲ್ಲಿ ದೇಶದ ರಾಜಕೀಯ ಪಕ್ಷಗಳಿಗೆ ಸಲ್ಲಿಕೆಯಾದ ದೇಣಿಗೆಯ ಮೊತ್ತದಲ್ಲಿ 41.5% ಇಳಿಕೆಯಾಗಿದೆ.
ಬಿಜೆಪಿಗೆ 2019-20ರಲ್ಲಿ ದಾಖಲೆಯ 785 ಕೋಟಿ ರೂ. ದೇಣಿಗೆ ಲಭಿಸಿತ್ತು. ಆದರೆ 2020-21ರಲ್ಲಿ ಅದು 477 ಕೋಟಿ ರೂ.ಗೆ ತಗ್ಗಿದೆ. ಅಂದರೆ 39% ಇಳಿಕೆಯಾಗಿದೆ.
ಎಂಟು ರಾಷ್ಟ್ರೀಯ ಪಕ್ಷಗಳು ಚುನಾವಣಾ ಆಯೋಗಕ್ಕೆ ದೇಣಿಗೆ ಸ್ವೀಕೃತಿಗೆ ಸಂಬಂಧಿಸಿ ವಿವರಗಳನ್ನು ನೀಡಿವೆ. ಕಾರ್ಪೊರೇಟ್ ಸಂಸ್ಥೆಗಳು, ಕಂಪನಿಗಳು, ವೈಯಕ್ತಿಕವಾಗಿ ನಾಗರಿಕರಿಂದ ಪಡೆದ 20,000 ರೂ.ಗಿಂತ ಹೆಚ್ಚಿನ ದೇಣಿಗೆಗಳ ಬಗ್ಗೆ ರಾಜಲೀಯ ಪಕ್ಷಗಳು ಆಯೋಗಕ್ಕೆ ವಿವರ ನೀಡಬೇಕು.
ಕಾಂಗ್ರೆಸ್ 2019ರಲ್ಲಿ 139 ಕೋಟಿ ಹಾಗೂ 2020ರಲ್ಲಿ 74 ಕೋಟಿ ರೂ.ಗಳನ್ನು ಡೊನೇಶನ್ ರೂಪದಲ್ಲಿ ಪಡೆದಿದೆ. ಎನ್‌ಸಿಪಿ 2019ರಲ್ಲಿ 60 ಕೋಟಿ ರೂ. ಹಾಗೂ 2020ರಲ್ಲಿ 26 ಕೋಟಿ ರೂ.ಗಳನ್ನು ಪಡೆದಿದೆ. ಸಿಪಿಎಂ 2019ರಲ್ಲಿ 19 ಕೋಟಿ ರೂ. ಮತ್ತು 2020 ರಲ್ಲಿ 12 ಕೋಟಿ ರೂ. ಗಳಿಸಿದೆ. ತೃಣಮೂಲ ಕಾಂಗ್ರೆಸ್ 2020ರಲ್ಲಿ 42 ಕೋಟಿ ರೂ. ಪಡೆದಿದೆ.
ಬಿಜೆಪಿಗೆ 2017-18ರಿಂದೀಚೆಗೆ ಮೊದಲ ಬಾರಿಗೆ ವೈಯಕ್ತಿಕವಾಗಿ ಹಾಗೂ ಚುನಾವಣಾ ಟ್ರಸ್ಟ್‌ಗಳ ಮೂಲಕ ಲಭಿಸುವ ದೇಣಿಗೆಯಲ್ಲಿ ಇಳಿಕೆ ಕಂಡು ಬಂದಿದೆ.
ಚುನಾವಣಾ ಬಾಂಡ್‌ಗಳ ಮೂಲಕ ಯಾರು ಬೇಕಾದರೂ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಬಹುದು. ಕಾರ್ಪೊರೇಟ್ ಕಂಪನಿಗಳು ಈ ಮಾರ್ಗವನ್ನು ಅನುಸರಿಸುತ್ತವೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗೂ ಚುನಾವಣಾ ಬಾಂಡ್ ಮೂಲಕ ದೇಣಿಗೆ ಲಭಿಸುತ್ತವೆ.
ಚುನಾವಣಾ ಬಾಂಡ್‌ಗಳು 1,000ರೂ, 10,000ರೂ, 10ಲಕ್ಷ ರೂ, 1 ಕೋಟಿ ರೂ, ಗಳ ಮುಖಬೆಲೆಯಲ್ಲಿ ಇರುತ್ತವೆ. 2017ರ ಬಜೆಟ್ ನಲ್ಲಿ ಈ ಪರಿಕಲ್ಪನೆಯನ್ನು ಪರಿಚಯಿಸಲಾಗಿತ್ತು.